ಸ್ವಚ್ಛತೆಯೇ ಸೇವೆ 2024 ಅಭಿಯಾನ ಆರಂಭಿಸಿದ ವೇದಾಂತ ಐರನ್ ಓರ್ ಕರ್ನಾಟಕ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಸೆ. 18: ಚಿತ್ರದುರ್ಗದ ವೇದಾಂತ ಐರನ್ ಓರ್ ಕರ್ನಾಟಕ (ಐಓಕೆ) ಸಂಸ್ಥೆಯು ಭಾರತ ಸರ್ಕಾರದ ಸ್ವಚ್ಛ ಭಾರತ್ ಮಿಷನ್ (ಎಸ್ ಬಿ ಎಂ) ಸ್ಫೂರ್ತಿಯಿಂದ ರಾಷ್ಟ್ರಾದ್ಯಂತ ಸ್ವಚ್ಛತೆಯೇ ಸೇವೆ ಎಂಬ ಅಭಿಯಾನ ಆರಂಭಿಸಿದೆ. ಆ ಅಭಿಯಾನದ ಭಾಗವಾಗಿ ಸ್ವಚ್ಛತಾ ಯೋಜನೆಗಳ ಸರಣಿಯನ್ನು ಪ್ರಾರಂಭಿಸುತ್ತಿದೆ. ಸ್ವಚ್ಛತೆಯೇ ಸೇವೆ ಎಂಬ ಅಭಿಯಾನವು ಸೆ 14ರಂದು ಪ್ರಾರಂಭವಾಗಿ ಅಕ್ಟೋಬರ್ 2ರಂದು
ಮುಕ್ತಾಯಗೊಳ್ಳಲಿದೆ. ಈ ಅಭಿಯಾನವು ಸ್ವಚ್ಛತೆ, ಪರಿಸರ ರಕ್ಷಣೆ ಮತ್ತು ಸುಸ್ಥಿರ ಜೀವನದ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವ
ಉದ್ದೇಶ ಹೊಂದಿದೆ.

ಸ್ವಭಾವ ಸ್ವಚ್ಛತೆ – ಸಂಸ್ಕಾರ ಸ್ವಚ್ಛತೆ’ ಎಂಬುದು ಈ ವರ್ಷದ ಅಭಿಯಾನದ ಥೀಮ್ ಆಗಿದ್ದು, ಈ ಥೀಮ್ ಸ್ವಚ್ಛತೆ ಅನ್ನುವುದು ಕೇವಲ
ದೈಹಿಕ ಕ್ರಿಯೆಯಲ್ಲ- ಬದಲಿಗೆ ನಮ್ಮ ಅಭ್ಯಾಸಗಳು (ಸ್ವಭಾವ) ಮತ್ತು ಮೌಲ್ಯಗಳಲ್ಲಿ (ಸಂಸ್ಕಾರ) ಬೇರೂರಿರುವ ಜೀವನ ವಿಧಾನವಾಗಿದೆ
ಎಂಬುದನ್ನು ಸಾರುತ್ತದೆ. ಅಭಿಯಾನದ ಭಾಗವಾಗಿ ನೌಕರರು, ವ್ಯಾಪಾರ ಪಾಲುದಾರರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ
ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಯೋಜಿಸಲಾಗಿದ್ದು, ಈ ಉದಾತ್ತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳಲು
ಪ್ರೋತ್ಸಾಹಿಸಲಾಗುತ್ತದೆ.

ಸ್ವಚ್ಛತೆಯೇ ಸೇವೆ 2024 ಅಭಿಯಾನದ ಉದ್ಘಾಟನೆ ಮಾಡಿದ ವೇದಾಂತ ಐರನ್ ಓರ್ ಕರ್ನಾಟಕದ ಸಿಇಓ ಶ್ರೀಶೈಲ ಗೌಡ ಅವರು,
“ವೇದಾಂತ ಐರನ್ ಓರ್ ಕರ್ನಾಟಕ ಸಂಸ್ಥೆಯು ಸ್ವಚ್ಛತೆ ಎಂಬುದು ಕೇವಲ ಜವಾಬ್ದಾರಿ ಮಾತ್ರವೇ ಅಲ್ಲ, ಸ್ವಚ್ಛತೆ ವೈಯಕ್ತಿಕವಾಗಿ ಮತ್ತು
ಸಮಾಜವಾಗಿ ನಾವು ಯಾರು ಎಂಬುದನ್ನು ತಿಳಿಸಿಕೊಡುತ್ತದೆ ಎಂದು ನಾವು ನಂಬಿದ್ದೇವೆ. ‘ಸ್ವಭಾವ ಸ್ವಚ್ಛತೆ – ಸಂಸ್ಕಾರ ಸ್ವಚ್ಛತೆ’ ಎಂಬ
ಈ ವರ್ಷದ ಥೀಮ್ ನಮ್ಮ ದೈನಂದಿನ ಜೀವನ ಮತ್ತು ಮೌಲ್ಯಗಳ ಭಾಗವಾಗಿ ಸ್ವಚ್ಛತೆ ಕಾಪಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ನಾನು
ಉದ್ಯೋಗಿಗಳು, ವ್ಯಾಪಾರ ಪಾಲುದಾರರು ಮತ್ತು ಸಮುದಾಯದ ಸದಸ್ಯರಲ್ಲಿ ಈ ಸ್ವಚ್ಛತೆಯೇ ಸೇವೆ 2024 ಅಭಿಯಾನದಲ್ಲಿ
ಪಾಲ್ಗೊಳ್ಳಲು ಕೇಳಿಕೊಳ್ಳುತ್ತಿದ್ದೇನೆ. ಒಗ್ಗಟ್ಟಾಗಿ ನಾವು ನಮ್ಮ ಮಕ್ಕಳು ಮತ್ತು ನಮ್ಮ ಸಮಾಜಕ್ಕೆ ಆರೋಗ್ಯಕರ, ಸ್ವಚ್ಛ ಭವಿಷ್ಯ
ಒದಗಿಸಬಹುದಾಗಿದೆ” ಎಂದು ಹೇಳಿದರು.

ಅಭಿಯಾನದ ಭಾಗವಾಗಿ ಶಾಲೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಪ್ರತಿಜ್ಞೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ
ಮೂಲಕ ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆಯ ಅಭ್ಯಾಸವನ್ನು ರೂಢಿಸಲು ಪ್ರೋತ್ಸಾಹಿಸಲಾಗುತ್ತದೆ. ಅನೇಕ ಸ್ವಚ್ಛತಾ ಸ್ಪರ್ಧೆಗಳು,
ಸ್ಲೋಗನ್ ಮತ್ತು ಕವನ ಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಪಾಲ್ಗೊಳ್ಳುವಂತೆ
ಮಾಡಲಾಗುವುದು. ಜೊತೆಗೆ ಹಸಿವು ನಿರ್ಮೂಲನೆ, ಆರೋಗ್ಯ ಮತ್ತು ಸ್ವಚ್ಛತೆ ಪಾಲನೆ ವಿಚಾರದಲ್ಲಿ ಅರಿವು ಮೂಡಿಸಲು ಸ್ವಚ್ಛತಾ
ವಾಕಥಾನ್ ಆಯೋಜಿಸಲಾಗುವುದು.

ವೇದಾಂತ ಐರನ್ ಓರ್ ಕರ್ನಾಟಕ ಆಯೋಜಿಸುತ್ತಿರುವ ಸ್ವಚ್ಛತೆಯೇ ಸೇವೆ 2024 ಅಭಿಯಾನವು ಸಂಸ್ಥೆಯ ಸಾಮಾಜಿಕ ಜವಾಬ್ದಾರಿ,
ಪರಿಸರ ಸುಸ್ಥಿರತೆ ವಿಚಾರದಲ್ಲಿನ ಬದ್ಧತೆಗೆ ಪುರಾವೆಯಾಗಿದೆ. ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ಸ್ವಚ್ಛ
ಭಾರತ್ ಮಿಷನ್ (ಎಂಬಿಎಂ)ನ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಾಕಥಾನ್ ಮತ್ತು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ
ಈ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ಮೂಲಕ ಸ್ವಚ್ಛ ಮತ್ತು ಆರೋಗ್ಯಕರ ಭಾರತದೆಡೆಗೆ ಸಾಗಲು ಸಾಮೂಹಿಕ ಪ್ರಯತ್ನ
ಮಾಡಲಾಗುತ್ತದೆ.

Leave a Reply

Your email address will not be published. Required fields are marked *