ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.21:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಲದ ಮರ ಇದ್ದಂತೆ. ಅದರ ನೆರಳಲ್ಲಿ ನಮ್ಮ ಸಮುದಾಯದ ಎಲ್ಲಾ ಒಳಪಂಗಡಗಳು ಇದ್ದು, ಮಹಾಸಭಾ ಯಾವಾಗಲಾದರೂ ಕರೆಯನ್ನು ನೀಡಿದರೆ ಎಲ್ಲರೂ ಒಂದಾಗಿ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಹೇಳಿದರು.
ನಗರದ ಜಗಳೂರು ಮಹಾಲಿಂಗಪ್ಪ ಕನ್ವೆನ್ಶನ್ ಹಾಲ್‌ನಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾವೇಶ, ಸೇವಾ ದೀಕ್ಷಾ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ ಹಾಗೂ ಶಾಮನೂರು ಶಿವಶಂಕರಪ್ಪರಿಗೆ ಶ್ರದ್ಧಾಂಜಲಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಳಪಂಗಡಗಳ ಕಾರ್ಯಕ್ರಮಗಳನ್ನು ನಡೆಸುವುದು ತಪ್ಪಲ್ಲ. ಆದರೆ ಬಸವಣ್ಣ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿಗಳಂತಹ ಮಹಾಸಭಾ ಕಾರ್ಯಕ್ರಮಗಳಿಗೆ ಸಮರ್ಪಕ ಸ್ಪಂದನೆ ದೊರಕುತ್ತಿಲ್ಲ ಎಂಬುದು ವಿಷಾದಕರ ಸಂಗತಿ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಮತ್ತು ಒಗ್ಗಟ್ಟು ಅಗತ್ಯ. ಒಬ್ಬೊಬ್ಬರಾಗಿ ಹೋದರೆ ಏನೂ ಸಿಗುವುದಿಲ್ಲ, ಒಗ್ಗಟ್ಟಿನಿಂದಲೇ ಸಾಧನೆ ಸಾಧ್ಯ ಎಂದು ನವೀನ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ವಿಷಯದಲ್ಲಿ ಬೇರೆಯವರ ಮಾತನ್ನು ನಂಬುವ ಮೊದಲು ಮಹಾಸಭಾವನ್ನು ಸಂಪರ್ಕಿಸಬೇಕು ಎಂದರು. ಸಮಾಜ ನಮಗೆ ಏನು ಕೊಟ್ಟಿತು ಎಂಬುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೆಣುಕಾ ಪ್ರಸನ್ನ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜದ ಪರವಾಗಿ ನಿರಂತರ ಹೋರಾಟ ನಡೆಸಿ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರು. ಸೇವಾ ದೀಕ್ಷೆ ಪಡೆದವರು ಸಂಯಮ, ಸಮಾಧಾನ ಮತ್ತು ಸಂಘಟನೆಯ ಮಹತ್ವವನ್ನು ಅರಿತು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಿದೆ ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಮಹಾಸಭಾ ಅಧ್ಯಕ್ಷರಾದ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ ಮಹಾಸಭಾವನ್ನು ಬಲಪಡಿಸಲು ಎಲ್ಲರ ಸಹಕಾರ ಅಗತ್ಯ. ಈಗಾಗಲೇ ನಿವೇಶನ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಪಾಟೀಲ್, ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷರು, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು, ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.