
Nobel Peace Prize Winner: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಭಾರತ-ಪಾಕಿಸ್ತಾನ ಸೇರಿದಂತೆ ಆರೇಳು ಯುದ್ಧಗಳನ್ನು ತಡೆದಿರುವುದರಿಂದ ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅತ್ಯಂತ ಅರ್ಹ ಎಂದು ಹೇಳಿಕೊಳ್ಳುತ್ತಲೇ ಇದ್ದರು. ಅತ್ತ ಪಾಕಿಸ್ತಾನ ಕೂಡ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿತ್ತು. ಇದೀಗ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದ್ದು, ಡೊನಾಲ್ಡ್ ಟ್ರಂಪ್ ಅವರಿಗೆ ಭಾರೀ ನಿರಾಸೆಯಾಗಿದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವೆನೆಜುವೆಲಾದ ನಾಯಕಿ ಮರಿಯಾ ಕೊರಿನಾ ಮಚಾಡೊ ಪಾಲಾಗಿದೆ.
ನವದೆಹಲಿ, ಅಕ್ಟೋಬರ್ 10: ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಏಕೆಂದರೆ ಈ ಬಾರಿಯ ರೇಸ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೇರಿಕೊಂಡಿದ್ದರು. ತಮಗೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಅವಕಾಶ ಸಿಕ್ಕಾಗಲೆಲ್ಲ ಘೋಷಿಸಿಕೊಳ್ಳುತ್ತಿದ್ದ ಟ್ರಂಪ್ ಅವರಿಗೆ ಭಾರೀ ನಿರಾಸೆಯಾಗಿದೆ. ವೆನೆಜುವೆಲಾದ ಜನರ ಪರವಾದ ಹೋರಾಟಕ್ಕಾಗಿ ಮರಿಯಾ ಕೊರಿನಾ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದೆ. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸುವ ಸಲುವಾಗಿ ಅವರ ದಣಿವರಿಯದ ಕೆಲಸ ಮತ್ತು ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಚಾಡೊ ಅವರು 20 ವರ್ಷಗಳ ಹಿಂದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಧ್ವನಿಯೆತ್ತಿದರು. ಅಂದಿನಿಂದ ಅವರು ಜನರ ಪರವಾಗಿ ನಿಂತಿದ್ದಾರೆ.
ಟ್ರಂಪ್ಗೆ ನಿರಾಸೆ:
ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಸ್ವತಃ ತಾವೇ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಘೋಷಿಸಿಕೊಂಡಿದ್ದರು. ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷ ಸೇರಿದಂತೆ ಹಲವು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ನಾನು ಮುಖ್ಯ ಪಾತ್ರ ವಹಿಸಿದ್ದೇನೆ ಎಂದು ಅವರು ಹೇಳಿದ್ದರು. ಇಸ್ರೇಲ್, ಥೈಲ್ಯಾಂಡ್, ಕಾಂಬೋಡಿಯಾ, ಅಜೆರ್ಬೈಜಾನ್, ಅರ್ಮೇನಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ರಾಷ್ಟ್ರಗಳು 2025ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಟ್ರಂಪ್ ಅವರನ್ನು ಬೆಂಬಲಿಸಿದ್ದವು.
“ಕೇವಲ 7 ತಿಂಗಳಲ್ಲಿ, ನಾನು 7 ಅಂತ್ಯವಿಲ್ಲದ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇಲ್ಲದಿದ್ದರೆ ಇನ್ನಷ್ಟು ಪ್ರಾಣಗಳು ಬಲಿಯಾಗುತ್ತಿದ್ದವು. ಹೀಗಾಗಿ, ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು” ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.
ಕಳೆದ 10 ವರ್ಷದಲ್ಲಿ ಯಾರಿಗೆಲ್ಲ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿತ್ತು:
2015: “ಜಾಸ್ಮಿನ್ ಕ್ರಾಂತಿಯ ನಂತರ ಟುನೀಶಿಯಾದಲ್ಲಿ ಬಹುತ್ವ ಪ್ರಜಾಪ್ರಭುತ್ವದ ಸ್ಥಾಪನೆಗೆ ನೀಡಿದ ಕೊಡುಗೆಗಾಗಿ” ಟುನೀಷಿಯನ್ ರಾಷ್ಟ್ರೀಯ ಸಂವಾದ ಕ್ವಾರ್ಟೆಟ್.
2016: “ದೇಶದ 50 ವರ್ಷಗಳಿಗೂ ಹೆಚ್ಚು ಕಾಲದ ಅಂತರ್ಯುದ್ಧವನ್ನು ಕೊನೆಗೊಳಿಸಲು ಮಾಡಿದ ನಿರ್ಣಾಯಕ ಪ್ರಯತ್ನಗಳಿಗಾಗಿ” ಕೊಲಂಬಿಯಾದ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್.
2017: “ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ದುರಂತ ಮಾನವೀಯ ಪರಿಣಾಮಗಳತ್ತ ಗಮನ ಸೆಳೆಯುವ ಕೆಲಸಕ್ಕಾಗಿ” ಪರಮಾಣು ಶಸ್ತ್ರಾಸ್ತ್ರಗಳನ್ನು ರದ್ದುಗೊಳಿಸುವ ಅಂತಾರಾಷ್ಟ್ರೀಯ ಅಭಿಯಾನ (ICAN).
2018: ಕಾಂಗೋದ ಡೆನಿಸ್ ಮುಕ್ವೆಗೆ ಮತ್ತು ಇರಾಕ್‌ನ ನಾಡಿಯಾ ಮುರಾದ್ ಅವರ “ಲೈಂಗಿಕ ಹಿಂಸೆಯನ್ನು ಯುದ್ಧದ ಅಸ್ತ್ರವಾಗಿ ಬಳಸುವುದನ್ನು ಕೊನೆಗೊಳಿಸುವ ಪ್ರಯತ್ನಗಳಿಗಾಗಿ”.
2019: “ಶಾಂತಿ ಸಾಧಿಸುವಲ್ಲಿ ಮತ್ತು ಎರಿಟ್ರಿಯಾ ಜೊತೆಗಿನ ಗಡಿ ಸಂಘರ್ಷವನ್ನು ಪರಿಹರಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ” ಇಥಿಯೋಪಿಯಾದ ಅಬಿಯ್ ಅಹ್ಮದ್ ಅಲಿ.
2020: “ಹಸಿವನ್ನು ಎದುರಿಸಲು ಮತ್ತು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳಿಗಾಗಿ” ವಿಶ್ವ ಆಹಾರ ಕಾರ್ಯಕ್ರಮ.
2021: “ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಪ್ರಯತ್ನಗಳಿಗಾಗಿ” ಫಿಲಿಪೈನ್ಸ್‌ನ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್.
2022: “ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಿದ್ದಕ್ಕಾಗಿ” ಬೆಲಾರಸ್‌ನ ಅಲೆಸ್ ಬಿಯಾಲಿಯಾಟ್ಸ್ಕಿ, ರಷ್ಯಾದ ಸ್ಮಾರಕ ಮತ್ತು ಉಕ್ರೇನ್‌ನ ನಾಗರಿಕ ಸ್ವಾತಂತ್ರ್ಯ ಕೇಂದ್ರ.
2023: “ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟಕ್ಕಾಗಿ” ಇರಾನ್‌ನ ನರ್ಗೆಸ್ ಮೊಹಮ್ಮದಿ.
2024: “ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ” ಜಪಾನ್‌ನ ನಿಹಾನ್ ಹಿಡಾಂಕ್ಯೊ.
Views: 21