Viral: ಸೌದಿ ಅರೇಬಿಯಾದ ʼರಿಯಾದ್‌ ಮೆಟ್ರೋʼ ಓಡಿಸಲಿದ್ದಾರೆ ಹೈದರಾಬಾದ್‌ ಮಹಿಳೆ.

ಪ್ರಸ್ತುತ ಇರುವಂತಹದ್ದು ನಾರಿ ಶಕ್ತಿಯ ಯುಗ ಅಂತಾನೇ ಹೇಳಬಹುದು. ಈಗಂತೂ ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲೂ ಸಾಧನೆಗೈಯುತ್ತಿದ್ದಾರೆ. ಇದೇ ಕಾರಣಕ್ಕೆ ಹೆಣ್ಮಕ್ಳೆ ಸ್ಟ್ರಾಂಗು ಅಂತ ಹೇಳ್ತಾರೆ. ಇದೀಗ ಈ ಮಾತಿಗೆ ಉತ್ತಮ ನಿದರ್ಶನದಂತಿರುವ ಮತ್ತೊಂದು ಘಟನೆ ನಡೆದಿದ್ದು, ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋವನ್ನು ಓಡಿಸಲು ಹೈದರಾಬಾದ್‌ನ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಹೌದು ಲೋಕೋ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಈ ಮಹಿಳೆ ಇದೀಗ ದೂರದ ಸೌದಿ ಅರೇಬಿಯಾದಲ್ಲಿ ಮೆಟ್ರೋ ಟ್ರೈನ್‌ ಓಡಿಸಲಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಹೈದರಾಬಾದ್‌ನ ಇಂದಿರಾ ಈಗಳಪತಿ ಎಂಬ 33 ವರ್ಷ ವಯಸ್ಸಿನ ಮಹಿಳೆ ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಸುಮಾರು 5 ವರ್ಷಗಳಿಂದ ಲೋಕೋ ಪೈಲಟ್‌ ಮತ್ತು ಸ್ಟೇಷನ್‌ ಅಪರೇಷನ್‌ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಸೌದಿ ಅರೇಬಿಯಾದ ರಿಯಾದ್‌ ಮೆಟ್ರೋ ಓಡಿಸಲು ಆಯ್ಕೆಯಾಗಿದ್ದು, ನಾನು ಕೂಡಾ ಈ ವಿಶ್ವ ದರ್ಜೆಯ ಮತ್ತು ಪ್ರತಿಷ್ಠಿತ ಯೋಜನೆಯ ಭಾಗವಾಗಿದ್ದೇನೆ ಎಂದು ಹೇಳಲು ನನಗೆ ತುಂಬಾನೇ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

2019 ರಲ್ಲಿಯೇ ಇಂದಿರಾ ಸೇರಿದಂತೆ ಮತ್ತಿಬ್ಬರು ಭಾರತೀಯರು ರಿಯಾದ್‌ ಮೆಟ್ರೋದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದರು. ಆದರೆ ಕೊರೋನಾದ ಕಾರಣದಿಂದಾಗಿ ಅಲ್ಲಿ ಅವರು ಆರಂಭಿಕ ತರಬೇತಿಯನ್ನಷ್ಟೇ ಪಡೆದರು. ಆ ತರಬೇತಿ ಕೂಡಾ ಡಿಜಿಟಲ್‌ ರೂಪದಲ್ಲಿತ್ತು. ವರದಿಗಳ ಪ್ರಕಾರ ಪ್ರಸ್ತುತ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, 2025 ರ ಆರಂಭದಲ್ಲಿ ರಿಯಾದ್‌ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಈ ಮೆಟ್ರೋ ಓಡಿಸಲು ಇಂದಿರಾ ಕೂಡಾ ಆಯ್ಕೆಯಾಗಿದ್ದಾರೆ. “ಸೌದಿ ಅರೇಬಿಯಾದಲ್ಲಿ ಇದುವರೆಗಿನ ಅನುಭವ ತುಂಬಾ ಉತ್ತಮವಾಗಿದೆ. ಇಲ್ಲಿನ ಜನರು ಕೂಡಾ ತುಂಬಾ ಒಳ್ಳೆಯವರು ಮತ್ತು ಸಂಸ್ಕಾರವಂತರು. ಇಲ್ಲಿ ನಾನು ಇಷ್ಟು ದಿನ ಕಳೆದಿದ್ದೇನೆ, ಆದ್ರೆ ಯಾವುದೇ ಲಿಂಗ ತಾರತಮ್ಯವಿಲ್ಲ” ಎಂದು ಇಂದಿರಾ ಹೇಳಿದ್ದಾರೆ.

Source : https://tv9kannada.com/trending/hyderabad-hyderabadi-woman-loco-pilot-indira-eegalapati-raring-to-ply-riyadh-metro-trains-kannada-news-mda-933398.html

Views: 0

Leave a Reply

Your email address will not be published. Required fields are marked *