ಕರ್ನೂಲ್ ಬಸ್ ಬೆಂಕಿ ಅವಘಡ: ಇಂದು ಶುಕ್ರವಾರ ಬೆಳಗಿನ ಜಾವ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್, ಕರ್ನೂಲ್ ಜಿಲ್ಲೆಯ ಚಿನ್ನ ಟೆಕುರು ಗ್ರಾಮದ ಬಳಿ ಬೈಕ್ ಗೆ ಡಿಕ್ಕಿ ಹೊಡೆದು ಬೆಂಕಿ ಹತ್ತಿ ಉರಿದು ಕನಿಷ್ಠ 21 ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನೂಲ್ ಬಳಿ ಬಸ್ ಬೆಂಕಿ ಅವಘಡ
ಈ ಘಟನೆ ಬೆಳಗಿನ ಜಾವ 3:30 ರ ಸುಮಾರಿಗೆ 43 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾವೇರಿ ಟ್ರಾವೆಲ್ಸ್ ವೋಲ್ವೋ ಬಸ್ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬಸ್ ಗೆ ವೇಗವಾಗಿ ಹರಡಿತು, ಹಲವರು ಒಳಗೆ ಸಿಲುಕಿಕೊಂಡರು.
ಪೊಲೀಸರ ಪ್ರಕಾರ, ಹನ್ನೆರಡು ಪ್ರಯಾಣಿಕರು ಕಿಟಕಿಗಳನ್ನು ತೆರೆದು ತುರ್ತು ನಿರ್ಗಮನ ದ್ವಾರವನ್ನು ಒಡೆದು ಹೊರಬಂದು ಜೀವ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಹಲವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅಪಘಾತದ ಸಮಯದಲ್ಲಿ ಆ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ಹೇಗೆ?
ಬಸ್ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ಬಳಿಕ ಅಲ್ಲೇ ಬಸ್ ನಿಂತಿದ್ದರೆ ಇಷ್ಟೊಂದು ಅನಾಹುತ ಸಂಭವಿಸುತ್ತಿರಲಿಲ್ಲ, ಚಾಲಕ ಬಸ್ ನಿಲ್ಲಿಸದೆ ಮುಂದಕ್ಕೆ ಹೋದ ಪರಿಣಾಮ ಬೈಕ್ ಬಸ್ ಅಡಿಯಲ್ಲಿ ಸಿಲುಕಿತ್ತು. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಅದರಿಂದ ಬೆಂಕಿ ಹೊತ್ತಿಕೊಂಡಿತ್ತು. ಅದು ಇಡೀ ಬಸ್ ನ್ನೇ ಆವರಿಸಿತ್ತು. ಬೈಕ್ ಸವಾರ ಕೂಡ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಮಲಗಿದ್ದರು.
ಬಸ್ ಚಾಲಕ ಬದಲಿ ಚಾಕನನ್ನು ಎಬ್ಬಿಸಿ ಪ್ರಯಾಣಿಕರನ್ನು ಬಸ್ನಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡಿದ್ದಾರೆ. ವೋಲ್ವೊ ಬಸ್ ಆದ ಕಾರಣ ಹಿಂಭಾಗದಲ್ಲಿ ಬೆಂಕಿ ಕೂಡ ಬೇಗ ಹತ್ತಿತ್ತು. ಕಿಟಕಿಗಳು ಮುಚ್ಚಿದ್ದ ಪರಿಣಾಮ ಕಿಟಕಿಯನ್ನು ಒಡೆದು ಪ್ರಯಾಣಿಕರನ್ನು ಹೊರತರಲಾಯಿತು. ಅಷ್ಟರೊಳಗೆ ಹಲವು ಪ್ರಯಾಣಿಕರು ಉಸಿರುಚೆಲ್ಲಿದ್ದರು.
ಉಲ್ಲಿಂದಕೊಂಡ ಕ್ರಾಸ್ ತಲುಪುತ್ತಿದ್ದಂತೆ, ಬಸ್ ಮುಂಭಾಗದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಬಸ್ ನ ಅಡಿಯಲ್ಲಿ ಸಿಲುಕಿಕೊಂಡು ಬೆಂಕಿ ಹೊತ್ತಿಕೊಂಡಿತು. ಬಸ್ ಚಾಲಕ ಮತ್ತೊಬ್ಬ ಸಹಾಯಕ ಚಾಲಕ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಷ್ಟೊತ್ತಿಗೆ ಬಸ್ ಪೂರ್ತಿ ಆವರಿಸಿಕೊಂಡಿತ್ತು.
ಬಸ್ ನಲ್ಲಿ ನಸುಕಿನ ವೇಳೆ ಗಾಢ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿದಾಗ ಕೆಲವರು ತುರ್ತು ಬಾಗಿಲುಗಳ ಮೂಲಕ ಹೊರಬಂದರು. ಹಲವರಿಗೆ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಇದ್ದಕ್ಕಿದ್ದಂತೆ ಬೆಂಕಿ ಹರಡಿತು, ಬಾಗಿಲು ಲಾಕ್ ಆಯಿತು, ತಂತಿ ಸುಟ್ಟುಹೋದ ಕಾರಣ ಬಾಗಿಲು ತೆರೆಯಲಿಲ್ಲ. ಬಸ್ ನಿಂದ ಪ್ರಯಾಣಿಕರಿಗೆ ಹೊರಗೆ ಬರಲು ಸಾಧ್ಯವಾಗಲೇ ಸಜೀವ ದಹನವಾದರು.
ಪ್ರತ್ಯಕ್ಷದರ್ಶಿಗಳು ಹೇಳುವುದೇನು?
ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಬಸ್‌ನೊಳಗಿನ ದಹನಕಾರಿ ವಸ್ತುಗಳು ಬೆಂಕಿಯನ್ನು ತೀವ್ರಗೊಳಿಸಿದವು ಎಂದು ಡಿಐಜಿ ಕೋಯಾ ಪ್ರವೀಣ್ ಹೇಳಿದ್ದಾರೆ. ಬಸ್ಸಿನ ಇಂಧನ ಟ್ಯಾಂಕ್ ಹಾಗೆಯೇ ಇತ್ತು. ಅಪಾಯ ತಡೆಗಟ್ಟಲು ಅಥವಾ ನಿಯಂತ್ರಿಸಲು ವಾಹನವು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಹೊಂದಿರಲಿಲ್ಲ ಎಂದರು.
ಇದುವರೆಗೆ 21 ಜನರಲ್ಲಿ 11 ಶವಗಳನ್ನು ಗುರುತಿಸಲಾಗಿದೆ, ಆದರೆ 9 ಜನರನ್ನು ಇನ್ನೂ ಗುರುತಿಸಲಾಗಿಲ್ಲ. ಬೆಂಕಿ ಹೊತ್ತಿಕೊಂಡ ನಂತರ ಬಸ್ ಬಾಗಿಲು ಜಖಂಗೊಂಡಿತು ಹಾಗಾಗಿ ತೆರೆಯಲು ಸಾಧ್ಯವಾಗಲಿಲ್ಲ ಎಂದರು.
ಬೆಂಕಿ ಎಷ್ಟು ಬೇಗನೆ ಹರಡಿತೆಂದರೆ, ಹೆಚ್ಚಿನ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಬೆಂಕಿಯಲ್ಲಿ ಬೆಂದುಹೋದರು. ಕೆಲವರು ಸುಟ್ಟಗಾಯಗಳೊಂದಿಗೆ ಮೃತಪಟ್ಟಕೆ, ಇನ್ನು ಕೆಲವರು ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ಇದೆ.
ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು ಹೊರತೆಗೆಯಲು ಹೆಣಗಾಡಿದವು. ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ, ಆದರೆ ವಿನಾಶದ ಪ್ರಮಾಣವು ಹೆಚ್ಚಿನ ಸಂಖ್ಯೆಯ ಸಾವುನೋವುಗಳನ್ನು ಸೂಚಿಸುತ್ತದೆ.
Views: 15