ಆರೋಗ್ಯ:ನಿಮ್ಮ ಮಕ್ಕಳಿಗೆ ಜ್ವರ ಬಂದ್ರೆ ಯಾವ ಆಹಾರಗಳನ್ನು ಕೊಡಬೇಕು, ಕೊಡಬಾರದು.

Health Tips:ಹವಾಮಾನ, ವಾತಾವರಣದಲ್ಲಿನ ಬದಲಾವಣೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯ ಕಾರಣದಿಂದಾಗಿ ಹೆಚ್ಚಿನ ಮಕ್ಕಳು ಜ್ವರ (fever), ನೆಗಡಿಯಂತಹ ಆರೋಗ್ಯ ಸಮಸ್ಯೆಗಳಿಗೆ ಪದೇ ಪದೇ ತುತ್ತಾಗುತ್ತಿರುತ್ತಾರೆ. ಮತ್ತು ಈ ಸಮಯದಲ್ಲಿ ಮಕ್ಕಳು ಸರಿಯಾಗಿ ಆಹಾರವನ್ನು ಸಹ ಸೇವನೆ ಮಾಡುವುದಿಲ್ಲ, ಇದರಿಂದಾಗಿ ಮಕ್ಕಳ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.

ಇಂತಹ ಸಮಯದಲ್ಲಿ ಮಕ್ಕಳಿಗೆ ಈ ಒಂದಷ್ಟು ಆಹಾರಗಳನ್ನು (Foods to give to children with fever) ನೀಡಲೇಬೇಕು. ಏಕೆಂದರೆ ಆಹಾರ ಪದ್ಧತಿ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮಕ್ಕಳಿಗೆ ಜ್ವರ ಬಂದಾಗ ನೀಡಲೇಬೇಕಾದ ಆಹಾರಗಳಿವು:

ಸೂಪ್:‌ ಜ್ವರ ಬಂದಾಗ ಮಕ್ಕಳಿಗೆ ಸೂಪ್‌ ಕುಡಿಸುವುದು ತುಂಬಾನೇ ಒಳ್ಳೆಯದು. ಸೂಪ್‌ನಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳಿದ್ದು, ಇದೊಂದು ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಇದು ಮಕ್ಕಳಿಗೆ ಜ್ವರದಿಂದ ಚೇತರಿಸಿಕೊಳ್ಳಲು ಸಹಾಯಕವಾಗಿದೆ. ಇದಲ್ಲದೆ ಮಕ್ಕಳಿಗೆ ರಾಗಿ ಅಂಬಲಿಯನ್ನು ಸಹ ಕುಡಿಸಬಹುದು. ವೈರಲ್‌ ಜ್ವರದಿಂದ ಬಳಲುತ್ತಿರುವ ಮಕ್ಕಳು ರಾಗಿ ಅಂಬಲಿ ಕುಡಿಯುವುದು ಉತ್ತಮ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಸುಲಭವಾಗಿ ಜೀರ್ಣಗೊಳ್ಳುತ್ತವೆ.

ದ್ರವ ಆಹಾರಗಳು: ಜ್ವರದ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು, ಆದ್ದರಿಂದ ಮಕ್ಕಳನ್ನು ಮೊದಲು ಹೈಡ್ರೀಕರಿಸುವುದು ಬಹಳ ಮುಖ್ಯ. ಹೀಗಿರುವಾಗ ಮಗುವಿನ ದೇಹದ ನಿರ್ಜಲೀಕರಣವನ್ನು ಹೋಗಲಾಡಿಸಲು ನೀರು ಮತ್ತು ಎಳನೀರನ್ನು ನೀಡುವುದು ಪ್ರಯೋಜನಕಾರಿಯಾಗಿದೆ. ಮೊಸರನ್ನು ಸಹ ನೀಡಬಹುದು. ಇದರಲ್ಲಿ ಪ್ರೋಬಯಾಟಿಕ್‌ ಅಂಶ ಸಮೃದ್ಧವಾಗಿದೆ. ಮೊಸರು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ಜ್ವರದಿಂದಾಗಿ ಮಗು ನಿರ್ಜಲೀಕರಣಗೊಂಡಿದ್ದರೆ, ವೈದ್ಯರ ಸಲಹೆಯ ಮೇರೆಗೆ, ನೀವು ORS ಅನ್ನು ಸಹ ನೀಡಬಹುದು.

ಕಾಲೋಚಿತ ಹಣ್ಣುಗಳು: ಜ್ವರದ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ಜೀವಸತ್ವಗಳು ಮತ್ತು ಶಕ್ತಿಯ ಅಗತ್ಯವಿರುತ್ತದೆ, ಆದ್ದರಿಂದ ನೀವು ಕಾಲೀಚಿತ ಹಣ್ಣುಗಳನ್ನು ಮಕ್ಕಳಿಗೆ ನೀಡಬೇಕು.

  • ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಸುಲಭವಾಗಿ ಜೀರ್ಣವಾಗುತ್ತದೆ.
  • ಹೊಟ್ಟೆಗೆ ಹಗುರವಾಗಿರುವ ಸೇಬು ಅಥವಾ ಪೇರಳೆ ಹಣ್ಣನ್ನು ಕೂಡ ಮಕ್ಕಳಿಗೆ ತಿನ್ನಲು ನೀಡಬಹುದು.
  • ಪಪ್ಪಾಯಿ, ಕಿತ್ತಳೆ ಹಣ್ಣುಗಳನ್ನು ಸೇವಿಸುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಜ್ವರದಿಂದ ಬಳಲುತ್ತಿರುವ ಮಕ್ಜಳಿಗೆ ಕಲ್ಲಂಗಡಿ ಹಣ್ಣು ನೀಡುವುದರಿಂದ ಅವರ ದೇಹದಲ್ಲಿ ನೀರಿನಾಂಶ ಹೆಚ್ಚುತ್ತದೆ. ಮತ್ತು ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಯಾವ ಆಹಾರಗಳನ್ನು ಸೇವನೆ ಮಾಡಬಾರದು:

ಜ್ವರದ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ಮಕ್ಕಳಿಗೆ ನೀಡಬಾರದು. ಏಕೆಂದರೆ ಅವು ಜೀರ್ಣಿಸಿಕೊಳ್ಳಲು ಕಷ್ಟ, ಇದು ಮಕ್ಕಳ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇರುತ್ತವೆ. ಆದ್ದರಿಂದ, ಮಕ್ಕಳಿಗೆ ಜ್ವರ ಬಂದ ಸಮಯದಲ್ಲಿ ಮಸಾಲೆಯುಕ್ತ, ಎಣ್ಣೆಯುಕ್ತ ಮತ್ತು ಹುರಿದ ಆಹಾರ, ಚಾಕೊಲೇಟ್, ಕುಕೀಸ್ ಮುಂತಾದ ಸಿಹಿ ಪದಾರ್ಥಗಳನ್ನು ನೀಡುವುದನ್ನು ತಪ್ಪಿಸಿ. ಜೊತೆಗೆ ತಂಪು ಪಾನೀಯಗಳನ್ನು ಸಹ ನೀಡಬಾರದು.

Views: 20

Leave a Reply

Your email address will not be published. Required fields are marked *