ಚಳಿಗಾಲದಲ್ಲಿ ಹೊಟ್ಟೆ ಉರಿ, ಎದೆ ಉರಿ, ಆ್ಯಸಿಡಿಟಿ ಹೆಚ್ಚಲು ಕಾರಣ ಏನು? ಇದಕ್ಕೆ ಪರಿಹಾರ ಏನು?

ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಲ್ಲಿ ಹುಳಿ ತೇಗಿನದ್ದೂ ಒಂದು. ಹೊಟ್ಟೆಯಲ್ಲಿರುವ ಆಮ್ಲದ ಅಂಶ ಅನ್ನನಾಳಕ್ಕೆ ಮೇಲ್ಮುಖವಾಗಿ ಹರಿದಾಗ ಆಗುವಂಥ ತೊಂದರೆಗಳು ಒಂದೆರಡಲ್ಲ. ಹೊಟ್ಟೆಯುರಿ, ಎದೆಯುರಿ, ಎದೆನೋವು, ಹೊಟ್ಟೆ ನೋವು, ವಾಂತಿ, ಅಜೀರ್ಣ ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ತಂದಿಡುತ್ತದೆ.

ಹೊಟ್ಟೆಯ ಅವಸ್ಥೆ ಅತಿಸೂಕ್ಷ್ಮವಾಗಿ, ತಿಂದ ಆಹಾರದಲ್ಲಿ ಕೊಂಚ ಆಚೀಚೆ ಆದರೂ ಆ್ಯಸಿಡಿಟಿ ಆರಂಭವಾಗಿ ಒದ್ದಾಡುವಂತಾಗುತ್ತದೆ. ಇಂಥ ಸಮಸ್ಯೆ ಚಳಿಗಾಲದಲ್ಲಿ ಇನ್ನೂ ಹೆಚ್ಚು. ಚಳಿಯಲ್ಲಿ ಹೆಚ್ಚಾಗುವ ಈ ಸಮಸ್ಯೆಯನ್ನು ಹತೋಟಿಗೆ ತರುವುದು ಹೇಗೆ? ಬಾರದಂತೆ ಏನೂ ಮಾಡಲಾಗದೇ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಚಳಿಗಾಲಕ್ಕೂ (health care in winter season) ಹುಳಿ ತೇಗಿನ ಸಮಸ್ಯೆಗಳಿಗೂ ನೇರವಾದ ನಂಟಿಲ್ಲದಿರಬಹುದು. ಆದರೆ ಚಳಿಯೆಂದು (winter care) ಹೆಚ್ಚು ಬಿಸಿಯಿರುವ ಆಹಾರ ಸೇವಿಸುವುದಕ್ಕೂ, ಖಾರದ ಮತ್ತು ಮಸಾಲೆಯುಕ್ತ ತಿನಿಸುಗಳನ್ನು ತಿನ್ನುವುದಕ್ಕೂ ಹೊಂದಿಕೆಯಾಗಿ ಹೊಟ್ಟೆಯ ತೊಂದರೆ (Stomach upset) ತಾರಕಕ್ಕೇರುತ್ತದೆ.

ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದನ್ನು ತಹಬಂದಿಗೆ ತರಬಹುದು. ಏನೆಲ್ಲ ಮಾಡುವುದು ಪ್ರಯೋಜನಕಾರಿ ಎನ್ನುವುದನ್ನು ನೋಡೋಣ.

ಆಹಾರದಲ್ಲಿ ಬದಲಾವಣೆ

ಚಳಿ ಎಳುತ್ತಿದ್ದಂತೆ ಬಿಸಿಬಿಸಿ ಬಜ್ಜಿ, ಬೋಂಡಾಗಳ ನೆನಪಾಗುತ್ತದೆ. ಕ್ರಿಸ್‌ಮಸ್‌ ನೆವದಲ್ಲಿ ಕ್ರೀಮ್‌ಭರಿತ ಪೇಸ್ಟ್ರಿಗಳು ಇಲ್ಲದಿದ್ದರೆ ಹೇಗೆ? ಕೆನೆ ಅಥವಾ ಜಿಡ್ಡಿರುವ ಮಸಾಲೆಯ ಗ್ರೇವಿಗಳು ಹೆಚ್ಚು ಕಾಲ ಬಿಸಿ ಇರಬಲ್ಲವು. ಖಾರದ ಪಲ್ಯ ಹೊಂದಿದ ಉಗಿ ಹಾಯುವ ಮಸಾಲೆ ದೋಸೆಯನ್ನು ಮರೆಯಬಹುದೇ? ಚೀಸ್‌ಭರಿತ ಸುಡುಸುಡು ಪಿಜ್ಜಾ ಮತ್ತೂ ರುಚಿಕರ. ಇವುಗಳ ಬೆನ್ನಿಗೊಂದು ಹಾಟ್‌ ಚಾಕಲೇಟ್‌ ಅಥವಾ ಬಿಸಿ ಕಾಫಿ ಇಲ್ಲವೇ ಖಡಕ್ ಚಹಾ ಇದ್ದರೆ… ಸಾಲದೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು! ಸ್ವರ್ಗದ ವಿಷಯ ಗೊತ್ತಿಲ್ಲ, ಆದರೆ ಹೊಟ್ಟೆಗೆ ಕಿಚ್ಚು ಹಚ್ಚಲಂತೂ ಸಾಕು. ಚಳಿಯಲ್ಲಿ ಖಾರದ, ಜಿಡ್ಡಿನ, ಎಣ್ಣೆಯ, ಸುಡು ಬಿಸಿಯ ತಿನಿಸುಗಳ ಆಸೆಯಾದರೂ ಕಡಿವಾಣ ಹಾಕುವುದು ಅಗತ್ಯ. ಇವೆಲ್ಲವೂ ಒಟ್ಟಾಗಿ ಹೊಟ್ಟೆಯ ಅವಸ್ಥೆಯನ್ನು ಹದಗೆಡಿಸುತ್ತವೆ. ಆಹಾರ ಹದವಾದ ಬಿಸಿಯಿದ್ದು ತಾಜಾ ಇರಲಿ. ಖಾರ, ಮೆಣಸು, ಮಸಾಲೆಯ ಅಂಶಗಳಿಗೆ ಮಿತಿ ಇರಲಿ. ಆಹಾರದಲ್ಲಿ ಎಣ್ಣೆ, ಜಿಡ್ಡು ಕಡಿಮೆ ಆದಷ್ಟೂ ಅನುಕೂಲ ಆರೋಗ್ಯಕ್ಕೆ.

ದೈಹಿಕ ಚಟುವಟಿಕೆ

ಚುಮುಚುಮು ಚಳಿಯಲ್ಲಿ ಬೆಳಗ್ಗೆ ಏಳಲಾಗದು. ಎದ್ದರೂ ಕೈಕಾಲು ಸರಿಮಾಡಿಕೊಳ್ಳುವುದಕ್ಕೇ ಅರ್ಧ ಗಂಟೆ ಬೇಕು. ಇನ್ನು ವ್ಯಾಯಾಮ ಮಾಡುವುದೆಲ್ಲಿ? ಬೆಳಗಿನ ಅವಸ್ಥೆ ಹೀಗಾದರೆ, ಸಂಜೆಗೆ ಬೆನ್ನುಬೀಳುವ ಸೋಮಾರಿತನ, ಸುಸ್ತು ಅಥವಾ ಇನ್ನೇನೋ ಕಾರಣಗಳು. ಹಲವು ಪ್ರಾಣಿಗಳಂತೆ ದೇಹದ ಕೊಬ್ಬು ಹೆಚ್ಚಿಸಿಕೊಂಡು ಅಥವಾ ತುಪ್ಪಳ ಬೆಳೆಸಿಕೊಂಡು ಚಳಿಗಾಲ ಕಳೆಯುವ ಪರಿಸ್ಥಿತಿ ನಮಗಿಲ್ಲದಿದ್ದರೂ, ನಾವು ಮಾಡುವುದು ಮಾತ್ರ ಅದನ್ನೇ. ಹುಳಿ ತೇಗಿನ ಸಮಸ್ಯೆ ಇರುವವರಿಗೆ ದೇಹದ ತೂಕ ನಿರ್ವಹಿಸುವುದು ಮಹತ್ವದ್ದು. ತೂಕ ಹೆಚ್ಚಿದಂತೆ ಹೊಟ್ಟೆಯ ಸಮಸ್ಯೆಗಳ ಪಟ್ಟಿಯೂ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಬೊಜ್ಜು ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ

ಇನ್ನಿತರ ಕಾರಣಗಳು

ಚಳಿಯಲ್ಲಿ ಸ್ವಲ್ಪ ʻಬೆಚ್ಚಗೆʼ ಮಾಡುವ ಪೇಯಗಳು ಬೇರೆಯೇ ಇರುತ್ತವಲ್ಲ. ಅವುಗಳ ಮೇಲೂ ನಿಯಂತ್ರಣ ಬೇಕು. ಮದ್ಯಪಾನ ಹೆಚ್ಚಿದಷ್ಟೂ ಹೊಟ್ಟೆಯ ಅವಸ್ಥೆ ಅಧೋಗತಿ. ಇವುಗಳ ಜತೆಗೆ ಹೊಟ್ಟೆಗಿಳಿಯುವ ಕುರುಕಲುಗಳು ಕ್ರೀಮ್‌ ಮೇಲಿನ ಚೆರ್ರಿಯಂತೆ! ಇವೆಲ್ಲವುಗಳ ಜತೆಗೆ ಆಲ್ಕೋಹಾಲ್‌ ಸೇವನೆಯಿಂದ ಯಕೃತ್ತಿನ ಮೇಲೂ ಗಂಭೀರ ಪರಿಣಾಮಗಳಾಗುತ್ತವೆ. ಹಾಗಾಗಿ ಇಂಥ ಚಟಗಳ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ.

ಏನು ಮಾಡಬಹುದು?

ಸುಲಭವಾಗಿ ಪಚನವಾಗಬಲ್ಲ ಲಘು ಆಹಾರಗಳಿಗೆ ಆದ್ಯತೆ ನೀಡಿ. ಒಮ್ಮೆಲೇ ದೊಡ್ಡ ಊಟ ಜೀರ್ಣವಾಗದಿದ್ದರೆ, ಒಂದು ಊಟವನ್ನು ಮೂರು ಭಾಗಗಳಾಗಿ ವಿಂಗಡಿಸಿ ತಿನ್ನಿ. ಸೋಡಾ, ಕೋಲಾ ಮತ್ತು ಅತಿ ಹುಳಿಯ ಆಹಾರಗಳು ನಿಶ್ಚಿತವಾಗಿ ಹೊಟ್ಟೆಯನ್ನು ಬುಡಮೇಲು ಮಾಡುತ್ತವೆ, ಜಾಗ್ರತೆ. ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಚಳಿಯೆನ್ನುವ ಕಾರಣಕ್ಕೆ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ತಣ್ಣೀರು ಕಷ್ಟವಾದರೆ, ಬೆಚ್ಚಗಿನ ನೀರು ಕುಡಿಯಿರಿ. ನಾರು ಭರಿತ ತರಕಾರಿಗಳು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಕಿರುಧಾನ್ಯಗಳು ಆಹಾರದ ಭಾಗವಾಗಿರಲಿ. ರಾತ್ರಿಯ ಸಮಯ ಹುಳಿ ತೇಗು ಬಾಧಿಸುತ್ತಿದ್ದರೆ, ದಿಂಬುಗಳನ್ನು ಹಾಕಿ ತಲೆ ಎತ್ತರಿಸಿ ಮಲಗಿ.

Views: 34

Leave a Reply

Your email address will not be published. Required fields are marked *