ಪದೇ ಪದೇ ಸಾಲದ ಶೂಲಕ್ಕೆ ಅರ್ಜೆಂಟೀನಾ; 4ನೇ ಸ್ಥಾನದಲ್ಲಿ ಪಾಕಿಸ್ತಾನ; ಭಾರತದ ಕಥೆ ಏನು?

IMF debt worldwide: ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ವಿಶ್ವದ ನೂರು ದೇಶಗಳಿಗೆ ನೀಡಿರುವ ಸಾಲದಲ್ಲಿ ಬಾಕಿ ಉಳಿದಿರುವುದು 111 ಬಿಲಿಯನ್ ಡಾಲರ್. ಅರ್ಜೆಂಟೀನಾ ದೇಶವೊಂದೇ ಬರೋಬ್ಬರಿ 32 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಐಎಂಎಫ್ ಸಾಲದಲ್ಲಿ ಹತ್ತು ದೇಶಗಳ ಪಾಲೇ ಶೇ.69ರಷ್ಟಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಭಾರತ 1993ರ ಬಳಿಕ ಒಮ್ಮೆಯೂ ಐಎಂಎಫ್​ನಿಂದ ಸಾಲ ಪಡೆದಿಲ್ಲ.

ನವದೆಹಲಿ, ಮೇ 16: ಪಾಕಿಸ್ತಾನ ಹೊಂದಿರುವ ಸಾಲವು ಅದರ ಜಿಡಿಪಿಯ ಶೇ. 80ರಷ್ಟಿದೆ ಎಂದು ಹೇಳಲಾಗುತ್ತಿದೆ. ಐಎಂಎಫ್​ವೊಂದರಲ್ಲೇ (IMF) ಅದು 7 ಬಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ. ಐಎಂಎಫ್ ಸೂಚನೆ ಮೇರೆಗೆ ಪಾಕಿಸ್ತಾನ ತನ್ನ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ (privatisation) ಮಾಡಲು ಹೊರಟಿದೆ. ಇಷ್ಟೊಂದು ಸಾಲದ ಶೂಲಕ್ಕೆ ಸಿಲುಕಿರುವುದು ಪಾಕಿಸ್ತಾನವೊಂದೇ ದೇಶವಲ್ಲ. ಅರ್ಜೆಂಟೀನಾ ಐಎಂಎಫ್ ಸಾಲಕ್ಕೆ ಕುಖ್ಯಾತಿ ಪಡೆದಿದೆ. ದಕ್ಷಿಣ ಅಮೆರಿಕದ ಸಂಪನ್ಮೂಲಭರಿತ ದೇಶವೆನಿಸಿರುವ ಮತ್ತು ಫುಟ್ಬಾಲ್ ದೇಶವೆನಿಸಿರುವ ಅರ್ಜೆಂಟೀನಾ ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಹೊಂದಿದೆ. ಬರೋಬ್ಬರಿ 32 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ಅದು ಐಎಂಎಫ್​ಗೆ ಕೊಡಬೇಕಿದೆ. ಇದು ಅರ್ಜೆಂಟೀನಾ ಜಿಡಿಪಿಯ ಶೇ. 5ಕ್ಕಿಂತಲೂ ಹೆಚ್ಚಿನ ಮೊತ್ತವಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಾದ ಐಎಂಎಫ್ ಜಾಗತಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ಹಣಕಾಸು ನೆರವನ್ನು ನೀಡುತ್ತದೆ. ಆದಾಯ ಕಡಿಮೆ ಇರುವ ಮತ್ತು ಸಾಲ ವಾಪಸಾಗಿ ಖಾತ್ರಿ ಇರುವ ದೇಶಗಳಿಗೆ ಐಎಂಎಫ್ ಯಾವುದೇ ಬಡ್ಡಿ ವಿಧಿಸುವುದಿಲ್ಲ. ಇನ್ನುಳಿದಂತೆ ಅದು ಶೇ. 4ರಿಂದ 8ರವರೆಗೆ ವಾರ್ಷಿಕ ಬಡ್ಡಿ ವಿಧಿಸಬಹುದು. ವಿಶ್ವದ ಇನ್ನೂರಕ್ಕೂ ಹೆಚ್ಚು ದೇಶಗಳ ಪೈಕಿ 100 ದೇಶಗಳು ಐಎಂಎಫ್​ನಲ್ಲಿ ಸಾಲ ಹೊಂದಿವೆ. ಒಟ್ಟಾರೆ 111 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ವಿವಿಧ ದೇಶಗಳಿಗೆ ಐಎಂಎಫ್ ನೀಡಿದೆ.

ಅರ್ಜೆಂಟೀನಾದಿಂದ ಹಿಡಿದು ಐವರಿ ಕೋಸ್ಟ್​ವರೆಗೆ 10 ದೇಶಗಳು ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿವೆ. ಐಎಂಎಫ್ ವಿತರಿಸಿರುವ ಸಾಲದಲ್ಲಿ ಶೇ. 69ರಷ್ಟು ಸಾಲ ಈ ಹತ್ತು ದೇಶಗಳ ಪಾಲು ಇದೆ.

ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿದ ದೇಶಗಳು:

  1. ಅರ್ಜೆಂಟೀನಾ: 32 ಬಿಲಿಯನ್ ಡಾಲರ್
  2. ಈಜಿಪ್ಟ್: 11 ಬಿಲಿಯನ್ ಡಾಲರ್
  3. ಉಕ್ರೇನ್: 9 ಬಿಲಿಯನ್ ಡಾಲರ್
  4. ಪಾಕಿಸ್ತಾನ: 7 ಬಿಲಿಯನ್ ಡಾಲರ್
  5. ಈಕ್ವಡಾರ್: 6 ಬಿಲಿಯನ್ ಡಾಲರ್
  6. ಕೊಲಂಬಿಯಾ: 3 ಬಿಲಿಯನ್ ಡಾಲರ್
  7. ಅಂಗೋಲ: 3 ಬಿಲಿಯನ್ ಡಾಲರ್
  8. ಕೀನ್ಯಾ: 3 ಬಿಲಿಯನ್ ಡಾಲರ್
  9. ಘಾನಾ: 2 ಬಿಲಿಯನ್ ಡಾಲರ್
  10. ಐವರಿ ಕೋಸ್ಟ್: 2 ಬಿಲಿಯನ್ ಡಾಲರ್

ಅರ್ಜೆಂಟೀನಾದ ಸಾಲದ ದುರ್ಗತಿಗೆ ದೊಡ್ಡ ಇತಿಹಾಸವೇ ಇದೆ. 19ನೇ ಶತಮಾನದ ಕೊನೆಯ ಭಾಗದಿಂದಲೂ ಅರ್ಜೆಂಟೀನಾ ಸಾಲದ ಶೂಲಕ್ಕೆ ಸಿಲುಕುತ್ತಲೇ ಬಂದಿದೆ. ಅದರ ರಾಜಧಾನಿ ನಗರಿ ಬ್ಯೂನಸ್ ಏರೆಸ್ ಅನ್ನು ಅಭಿವೃದ್ಧಿಪಡಿಸಲೆಂದು ಸಾಲ ಮಾಡಿರುವುದರಿಂದ ಹಿಡಿದು ಬೇರೆ ಬೇರೆ ಕಾರಣಕ್ಕೆ ಅದು ಸಾಲದ ಹೊರೆಯನ್ನು ಮೈ ಮೇಲೆ ಎಳೆದುಕೊಂಡಿದೆ. ಕಳೆದ ಆರು ದಶಕದಲ್ಲಿ ಅರ್ಜೆಂಟೀನಾಗೆ ಐಎಂಎಫ್ ಬರೋಬ್ಬರಿ 20 ಬಾರಿ ಸಾಲ ಕೊಟ್ಟು ಅದರ ಹಣಕಾಸು ಬಿಕ್ಕಟ್ಟು ಶಮನಕ್ಕೆ ಯತ್ನಿಸಿದೆ. ದಕ್ಷಿಣ ಅಮೆರಿಕದ ಈ ದೇಶದ ಆರ್ಥಿಕ ಬಿಕ್ಕಟ್ಟು ಇನ್ನೂ ಕೂಡ ಶಮನವಾಗಿಲ್ಲ.

ಭಾರತ ಐಎಂಎಫ್​ನಲ್ಲಿ ಎಷ್ಟು ಹೊಂದಿದೆ ಸಾಲ?

ಭಾರತ ತೊಂಬತ್ತರ ದಶಕದಲ್ಲಿ ಜಾಗತೀಕರಣ ಮತ್ತು ಉದಾರೀಕರಣ ನೀತಿ ಜಾರಿಗೆ ತರುವ ಮುನ್ನ ಐಎಂಎಫ್, ವರ್ಲ್ಡ್ ಬ್ಯಾಂಕ್ ಮೊದಲಾದೆಡೆ ಸಾಲಕ್ಕಾಗಿ ಕೈಚಾಚಬೇಕಿತ್ತು. ಒಂದು ಹಂತದಲ್ಲಿ ಚಿನ್ನವನ್ನು ಒತ್ತೆ ಇಟ್ಟು ಸಾಲ ಪಡೆಯಲಾಗಿತ್ತು. ಆದರೆ, 1993ರ ಬಳಿಕ ಭಾರತ ಒಮ್ಮೆಯೂ ಐಎಂಎಫ್​ನಿಂದ ಸಾಲ ಪಡೆದಿಲ್ಲ.

Source: https://m.dailyhunt.in/news/india/kannada/tv9kannada-epaper-tvnkan/pade+pade+saaladha+shulakke+arjentina+4ne+sthaanadalli+paakistaana+bhaaratadha+kathe+enu+-newsid-n609213508?listname=topicsList&topic=for%20you&index=8&topicIndex=0&mode=pwa&action=click

Leave a Reply

Your email address will not be published. Required fields are marked *