ಮೊಟ್ಟೆ ಮತ್ತು ಬಾದಾಮಿ ಎರಡೂ ಪ್ರೋಟೀನ್ ಸಮೃದ್ಧ ಮೂಲಗಳು. ಮೊಟ್ಟೆ ಸಂಪೂರ್ಣ ಪ್ರೋಟೀನ್ ಹೊಂದಿದ್ದು, ಸ್ನಾಯು ನಿರ್ಮಾಣಕ್ಕೆ ಉತ್ತಮ. ಬಾದಾಮಿ ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆ, ಹೃದಯ ಆರೋಗ್ಯಕ್ಕೆ ಸಹಾಯಕರ.

ನಮ್ಮ ದೇಹದಲ್ಲಿ (Body) ಸ್ನಾಯುಗಳ ನಿರ್ಮಾಣ, ದುರಸ್ತಿ, ಕಿಣ್ವ ಉತ್ಪಾದನೆ ಮತ್ತು ಒಟ್ಟಾರೆ ಆರೋಗ್ಯದಲ್ಲಿ (Health) ಪ್ರೋಟೀನ್ (Protein) ನಿರ್ಣಾಯಕ ಪಾತ್ರ ವಹಿಸುತ್ತದೆ. ಮೊಟ್ಟೆ (Egg) ಹಾಗೂ ಬಾದಾಮಿ (Almond) ಇವೆರಡೂ ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದು ಅನೇಕ ಜನರು ಈ ಎರಡನ್ನೂ ಹೋಲಿಸುತ್ತಾರೆ. ಈ ಎರಡೂ ಪೌಷ್ಟಿಕ ಆಹಾರಗಳಾಗಿದ್ದು, ಯಾವುದು ಹೆಚ್ಚು ಪ್ರೋಟೀನ್ ಹೊಂದಿದೆ ಹಾಗೂ ಯಾವುದು ಉತ್ತಮ ಆಯ್ಕೆ ಎಂಬುದನ್ನು ತಿಳಿಯೋಣ.
ಮೊಟ್ಟೆ ಮತ್ತು ಬಾದಾಮಿಯಲ್ಲಿರುವ ಪ್ರೋಟೀನ್ ಪ್ರಮಾಣ
ಒಂದು ಸಂಪೂರ್ಣ ಮೊಟ್ಟೆಯು ಗಾತ್ರವನ್ನು ಅವಲಂಬಿಸಿ ಸುಮಾರು 6-7ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇವುಗಳಲ್ಲಿ ಮೊಟ್ಟೆಯ ಬಿಳಿಭಾಗ ಸುಮಾರು 3.6 ಗ್ರಾಂ ಪ್ರೋಟೀನ್ ಹೊಂದಿದ್ದು, ಹಳದಿ ಲೋಳೆಯು ಸುಮಾರು 2.7 ಗ್ರಾಂ ಕೊಡುಗೆ ನೀಡುತ್ತದೆ. ಮೊಟ್ಟೆಗಳನ್ನು ಸಂಪೂರ್ಣ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವು ದೇಹದ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಮತ್ತೊಂದೆಡೆ, ಬಾದಾಮಿ 100ಗ್ರಾಂಗೆ ಸುಮಾರು 21-25ಗ್ರಾಂ ಪ್ರೋಟೀನ್ ಒದಗಿಸುತ್ತದೆ. ಇದರ ಒಂದು ಬೌಲ್ ಅಥವಾ 28 ಗ್ರಾಂ ಬಾದಾಮಿಯು 5-6 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಮೊಟ್ಟೆಗಳಿಗಿಂತ ಭಿನ್ನವಾಗಿ, ಬಾದಾಮಿ ಸಂಪೂರ್ಣ ಪ್ರೋಟೀನ್ ಅಲ್ಲ. ಏಕೆಂದರೆ ಅವು ಕೆಲವು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುವುದಿಲ್ಲ.
ಪ್ರೋಟೀನ್‌ನ ಗುಣಮಟ್ಟ
ಮೊಟ್ಟೆ ಮತ್ತು ಬಾದಾಮಿ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಪ್ರೋಟೀನ್‌ನ ಗುಣಮಟ್ಟ. ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಮೂಲವಾಗಿದ್ದು, ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳು ಹೆಚ್ಚಿನ ಜೈವಿಕ ಮೌಲ್ಯವನ್ನು (BV) ಹೊಂದಿವೆ. ಇದು ದೇಹವು ಆಹಾರದಿಂದ ಪ್ರೋಟೀನ್ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನು ಅಳೆಯುತ್ತದೆ. ಜೈವಿಕ ಮೌಲ್ಯ ಪ್ರಮಾಣದಲ್ಲಿ ಮೊಟ್ಟೆಗಳು 100 ಅಂಕಗಳನ್ನು ಗಳಿಸುತ್ತವೆ ಮತ್ತು ಇದು ಅತ್ಯುತ್ತಮ ಪ್ರೋಟೀನ್ ಬಳಕೆಯನ್ನು ಸೂಚಿಸುತ್ತದೆ.
ಇನ್ನು, ಬಾದಾಮಿ ಪ್ರೋಟೀನ್-ಭರಿತವಾಗಿದ್ದರೂ, ಕೆಲವು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಅವು ಅಪೂರ್ಣ ಪ್ರೋಟೀನ್ ಎಂದು ಕರೆಯಲ್ಪಡುತ್ತವೆ. ಆದಾಗ್ಯೂ ಧಾನ್ಯಗಳಂತಹ ಇತರ ಸಸ್ಯ ಆಧಾರಿತ ಪ್ರೋಟೀನ್ ಮೂಲಗಳೊಂದಿಗೆ ಬಾದಾಮಿಯನ್ನು ಸಂಯೋಜಿಸುವುದು ಸಂಪೂರ್ಣ ಅಮೈನೋ ಆಮ್ಲ ಪ್ರೊಫೈಲ್ ರಚಿಸಲು ಸಹಾಯ ಮಾಡುತ್ತದೆ.
ಬಾದಾಮಿ ಹಾಗೂ ಮೊಟ್ಟೆಗಳ ಪೌಷ್ಠಿಕಾಂಶದ ಹೋಲಿಕೆ
ಸಾಮಾನ್ಯವಾಗಿ ಒಂದು ಮೊಟ್ಟೆಯಲ್ಲಿ 70ಕ್ಯಾಲೋರಿಗಳಿರುತ್ತವೆ. ಇದು ವಿಟಮಿನ್ ಬಿ12, ರಿಬೋಫ್ಲಾವಿನ್, ಕೋಲೀನ್, ಸೆಲೆನಿಯಮ್ ಮತ್ತು ವಿಟಮಿನ್ ಡಿಯಲ್ಲಿ ಸಮೃದ್ಧವಾಗಿದೆ. ಹಾಗೆಯೇ ಕಣ್ಣಿನ ಆರೋಗ್ಯಕ್ಕೆ ಉತ್ತಮವಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನ ಉತ್ತಮ ಮೂಲವಾಗಿದೆ. ಇತ್ತ 28ಗ್ರಾಂ ಬಾದಾಮಿ 160ಕ್ಯಾಲೊರಿಗಳನ್ನು ಹೊಂದಿರುತ್ತದೆ. ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್‌ಗಳನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮವಾದ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿವೆ.
ಮೊಟ್ಟೆ ಅಥವಾ ಬಾದಾಮಿ ಇವುಗಳಲ್ಲಿ ಯಾವು ಉತ್ತಮ?
ಮೊಟ್ಟೆಗಳು ಸಂಪೂರ್ಣ ಅಮೈನೋ ಆಮ್ಲ ಪ್ರೊಫೈಲ್, ಹೆಚ್ಚಿನ ಪ್ರೋಟೀನ್ ಮತ್ತು ಸ್ನಾಯು ನಿರ್ಮಾಣ ಗುಣಲಕ್ಷಣಗಳಿಂದಾಗಿ ಉತ್ತಮ ಪ್ರೋಟೀನ್ ಮೂಲವಾಗಿದೆ. ಅವು ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಮೊಟ್ಟೆಗಳು ಉತ್ತಮ ಗುಣಮಟ್ಟದ ಸಂಪೂರ್ಣ ಪ್ರೋಟೀನ್ ಮತ್ತು ಲ್ಯೂಸಿನ್‌ನಂತಹ ಸ್ನಾಯು-ದುರಸ್ತಿ ಅಮೈನೋ ಆಮ್ಲಗಳಿಂದಾಗಿ ಸ್ನಾಯು ನಿರ್ಮಾಣಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯಕಾರರು ಹೆಚ್ಚಾಗಿ ಮೊಟ್ಟೆಗಳನ್ನು ಸೇವಿಸುತ್ತಾರೆ.
ಇನ್ನು, ತೂಕ ನಷ್ಟಕ್ಕೆ, ಮೊಟ್ಟೆಗಳು ಮತ್ತು ಬಾದಾಮಿ ಎರಡೂ ಪ್ರಯೋಜನಕಾರಿಯಾಗಬಹುದು. ಮೊಟ್ಟೆಗಳಲ್ಲಿ ಕ್ಯಾಲೋರಿಗಳು ಕಡಿಮೆ ಆದರೆ ಪ್ರೋಟೀನ್ ಅಧಿಕವಾಗಿರುತ್ತದೆ. ಬಾದಾಮಿಗಳು ಹೆಚ್ಚಿನ ಕ್ಯಾಲೋರಿ ಹೊಂದಿದ್ದರೂ ಅತ್ಯಾಧಿಕತೆಯನ್ನು ಉತ್ತೇಜಿಸುವ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜೊತೆಗೆ ತೂಕ ನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ.
ಬಾದಾಮಿ ಹೃದಯದ ಆರೋಗ್ಯಕ್ಕೆ ಹೆಚ್ಚಾಗಿ ಶಿಫಾರಸು ಮಾಡಲ್ಪಡುತ್ತವೆ. ಏಕೆಂದರೆ ಅವುಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುವ ಅಪರ್ಯಾಪ್ತ ಕೊಬ್ಬಿನ ಹೆಚ್ಚಿನ ಅಂಶವನ್ನು ಹೊಂದಿವೆ. ಹೆಚ್ಚುವರಿಯಾಗಿ, ಅವುಗಳ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕ ಅಂಶವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಾದಾಮಿ ಅತ್ಯುತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿದ್ದು, ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ಮಧ್ಯೆ, ಮೊಟ್ಟೆಗಳು ಕೊಲೆಸ್ಟ್ರಾಲ್ ಅಂಶದಿಂದಾಗಿ ವಿವಾದಾತ್ಮಕವಾಗಿದ್ದರೂ ಮಿತವಾಗಿ ಸೇವಿಸಿದಾಗ ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡಬಹುದು!