Walking Benefits : ನಿಮಗೆ ಸಮಯವಿಲ್ಲದಿದ್ದರೆ ಬರೇ 10 ನಿಮಿಷ ನಡೆದರೆ ಸಾಕು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ನಡಿಗೆ ತೂಕ ಇಳಿಸಲು ಹಾಗೂ ಇನ್ನಿತರ ಆರೋಗ್ಯ ಪ್ರಯೋಜನ (Health Benefits) ಪಡೆದುಕೊಳ್ಳಲು ಪರಿಣಾಮಕಾರಿ ವ್ಯಾಯಾಮ (Exercise) ಎಂದೆನಿಸಿದೆ. ಹೃದಯದ ಆರೋಗ್ಯವನ್ನು ಸುಧಾರಿಸುವ ನಡಿಗೆ ನಮ್ಮ ಸಂಪೂರ್ಣ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ಖಾತ್ರಿಪಡಿಸಿವೆ. ಬರೇ 10 ನಿಮಿಷ ನಡೆದರೂ ಸಾಕು ಅದು ಕೂಡ ನಿಮ್ಮನ್ನು ನಿಬ್ಬೆರಗಾಗಿಸುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
10 ನಿಮಿಷದ ನಡಿಗೆಯಿಂದಿದೆ ಸಾಕಷ್ಟು ಪ್ರಯೋಜನಗಳು
ನಿಮಗೆ ಸಮಯವಿಲ್ಲದಿದ್ದರೆ ಬರೇ 10 ನಿಮಿಷ ನಡೆದರೆ ಸಾಕು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಹೇಳುವಂತೆ ಕಡಿಮೆ ಅವಧಿಯ ದೈಹಿಕ ಚಟುವಟಿಕೆಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಅಂತೆಯೇ ಹೃದಯದ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದಾಗಿದೆ. ಇನ್ನು ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯೋಲಜಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವು ಸಣ್ಣ ಹಾಗೂ ಮಧ್ಯಮ ಗತಿಯ ವ್ಯಾಯಾಮವು ಹೃದಯರಕ್ತನಾಳದ ಸಮಸ್ಯೆಗಳ ಅಪಾಯಗಳನ್ನು 14% ದಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ನಡಿಗೆ ಸದೃಢ ಮೂಳೆಗಳು ಹಾಗೂ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ಮೂಳೆಗಳ ಹಾಗೂ ಸ್ನಾಯುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ವಾರ್ಮ್ ಅಪ್: ನಿಮ್ಮ ದೇಹವನ್ನು ಸಜ್ಜುಗೊಳಿಸುವುದು
ನಡಿಗೆಗೂ ಮುನ್ನ ನಿಮ್ಮ ಸ್ನಾಯುಗಳನ್ನು ಸಜ್ಜುಗೊಳಿಸುವುದು ಮುಖ್ಯವಾಗಿದೆ. ಎರಡು ನಿಮಿಷಗಳ ಸರಳ ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನು ನಿರ್ವಹಿಸಿ.
ಮುಖ್ಯವಾಗಿ ಮೀನ ಖಂಡ, ಮಂಡಿ, ತೊಡೆಗಳಿಗೆ ಗಮನ ಹರಿಸಿ. ಇಂತಹ ಸ್ಟ್ರೆಚ್‌ಗಳು ಗಾಯವಾಗದಂತೆ ತಡೆಯುತ್ತದೆ ಹಾಗೂ ವೇಗವಾಗಿ ನಡೆಯುವುದಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ.
ವಾರ್ಮ್ ಅಪ್ ಸಮಯದಲ್ಲಿ ದೇಹದ ಭಂಗಿಗಳಿಗೆ ಗಮನ ಹರಿಸಿ. ಉದ್ದಕ್ಕೆ ನಿಂತುಕೊಂಡು ಕೋರ್ ಅನ್ನು ಎಂಗೇಜ್ ಮಾಡಿಕೊಳ್ಳಿ ಹಾಗೂ ಭುಜಗಳನ್ನು ವಿಶ್ರಾಂತಿಗೊಳಿಸಿ. ಸರಿಯಾದ ಭಂಗಿಯು ಆಯಾಸವನ್ನು ತಡೆಯುವುದು ಮಾತ್ರವಲ್ಲ ನಿಮ್ಮ ನಡಿಗೆಯ ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸುತ್ತದೆ.
ನಡಿಗೆಯ ಪದ್ಧತಿ ಹೇಗಿರಬೇಕು
ಆರು ನಿಮಿಷಗಳ ತ್ವರಿತ ನಡಿಗೆಗೆ ಗಮನ ಹರಿಸಿ. ಈ ತೀವ್ರ ಗತಿಯ ನಡಿಗೆ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಡೆಯುವಾಗ ಹೆಚ್ಚು ಶಕ್ತಿಯನ್ನು ನಿರ್ವಹಿಸಲು ತ್ವರಿತ ಹೆಜ್ಜೆಗಳನ್ನಿರಿಸಿ ಇದು ಆಯಾಸವನ್ನು ತಡೆಯುತ್ತದೆ. 90 ಡಿಗ್ರಿ ಆ್ಯಂಗಲ್‌ನಲ್ಲಿ ತೋಳುಗಳನ್ನು ಬೀಸುತ್ತಾ ನಡೆದಾಡಿ ಇದು ನಡಿಗೆಯ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಸರಳ ವ್ಯಾಯಾಮಗಳನ್ನು ಅಳವಡಿಸಿ
ತೋಳುಗಳನ್ನು ವೃತ್ತಾಕಾರವಾಗಿ ತಿರುಗಿಸುವುದು
ಒಂದು ನಿಮಿಷಗಳ ಕಾಲ ನಿಮ್ಮ ತೋಳುಗಳನ್ನು ಸಣ್ಣ ವೃತ್ತಾಕಾರದಲ್ಲಿ ತಿರುಗಿಸಿ. ಇದು ನಿಮ್ಮ ದೇಹದ ಮೇಲ್ಭಾಗದ ಅಂಗಗಳಿಗೆ ಚಲನೆಯನ್ನೊದಗಿಸುತ್ತದೆ ಹಾಗೂ ಹೃದಯದ ದರವನ್ನು ಹೆಚ್ಚಿಸುತ್ತದೆ.
ಕಾಲುಗಳನ್ನು ಎತ್ತುವುದು (ಹೈ ನೀಸ್)
ಮುಂದಿನ ಕೆಲವು ನಿಮಿಷ ನಿಮ್ಮ ಕಾಲುಗಳನ್ನು ಸೊಂಟದವರೆಗೆ ಎತ್ತಿ. ಈ ಚಲನೆಯು ನಿಮ್ಮ ಮೀನ ಖಂಡ ಹಾಗೂ ಕಾಲುಗಳಿಗೆ ಉತ್ತಮ ವ್ಯಾಯಾಮವಾಗಿದೆ ಇದೊಂದು ಪೂರ್ಣ ದೇಹ ವ್ಯಾಯಾಮವೂ ಹೌದು.
ಕೂಲ್ ಡೌನ್ ಮಾಡುವುದು ಎಷ್ಟು ಮುಖ್ಯ
ನಡಿಗೆಯಲ್ಲಿ ಕೊನೆಯ ಘಟ್ಟ ನಿಧಾನವಾಗಿ ನಡೆಯುವುದಾಗಿದೆ. ಈ ಸಮಯದಲ್ಲಿ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಮರಳಬೇಕು. ಇನ್ನೊಂದು ಕೆಲವು ನಿಮಿಷ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುತ್ತಾ ನೀವು ಹೆಚ್ಚು ವರ್ಕೌಟ್ ಮಾಡಿದ ದೇಹದ ಭಾಗಗಳಿಗೆ ವಿಶ್ರಾಂತಿ ನೀಡಿ. ಕೂಲಿಂಗ್ ಡೌನ್ ಸ್ನಾಯುಗಳ ಬಿಗಿತವನ್ನು ತಡೆಯುತ್ತದೆ ಹಾಗೂ ಚೇತರಿಕೆಗೆ ಅನುಕೂಲವನ್ನೊದಗಿಸುತ್ತದೆ.