Women’s Hockey Junior Asia Cup 2023: ಚೊಚ್ಚಲ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ವೀರ ವನಿತೆಯರು..!

ಜೂನ್ 3 ರಿಂದ 11 ರ ನಡುವೆ 10 ತಂಡಗಳ ನಡುವೆ ನಡೆದ ಜೂನಿಯರ್ ಮಹಿಳಾ ಹಾಕಿ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ ಮಹಿಳಾ ತಂಡ ಚೊಚ್ಚಲ ಬಾರಿಗೆ ಹಾಕಿ ಜೂನಿಯರ್ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.  ಇನ್ನೊಂದು ಪ್ರಮುಖ ವಿಚಾರದವೆಂದರೆ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ಇಡೀ ಟೂರ್ನಿಯಲ್ಲಿ ಒಟ್ಟು 40 ಗೋಲು ಗಳಿಸಿದ್ದು, ಎದುರಾಳಿ ತಂಡಗಳಿಗೆ ಕೇವಲ 4 ಗೋಲು ಗಳಿಸಲು ಮಾತ್ರ ಅವಕಾಶ ನೀಡಿದೆ. ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ನಡೆದ ಈ ಫೈನಲ್ ಪಂದ್ಯದ ಮೊದಲ 20 ನಿಮಿಷಗಳಲ್ಲಿ ಒಂದೇ ಒಂದು ಗೋಲು ದಾಖಲಾಗಲಿಲ್ಲ. 22ನೇ ನಿಮಿಷದಲ್ಲಿ ಅಣ್ಣು ಪೆನಾಲ್ಟಿ ಸ್ಟ್ರೋಕ್ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. 3 ನಿಮಿಷಗಳ ನಂತರ ಕೊರಿಯಾಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಕೊರಿಯಾ ಆಟಗಾರ್ತಿಯರು ಪಂದ್ಯದಲ್ಲಿ 1-1ರ ಸಮಬಲ ಸಾಧಿಸಿದರು.ಆ ಬಳಿಕ 41ನೇ ನಿಮಿಷದಲ್ಲಿ ಭಾರತ ತಂಡಕ್ಕೆ ಕಾರ್ನರ್ ಸಿಕ್ಕಿತು. ಟೀಂ ಇಂಡಿಯಾ ಆಟಗಾರ್ತಿಯರು ಕೂಡ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ 2-1 ರ ಮುನ್ನಡೆ ನೀಡಿದರು. ಆ ಬಳಿಕ ಎದುರಾಳಿಗೆ ಯಾವುದೇ ಗೋಲು ಗಳಿಸಲು ಭಾರತ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 2-1 ಅಂತರದಿಂದ ಗೆದ್ದು ಬೀಗಿತು.ಭಾರತೀಯ ಜೂನಿಯರ್ ಮಹಿಳಾ ತಂಡದ ಈ ಐತಿಹಾಸಿಕ ಗೆಲುವಿನ ನಂತರ ಇಡೀ ತಂಡ ಏಷ್ಯಾಕಪ್‌ನ ಚಿನ್ನದ ಪದಕ ಮತ್ತು ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿತು. ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡದ ಪ್ರತಿ ಜೂನಿಯರ್ ಮಹಿಳಾ ಆಟಗಾರ್ತಿಗೆ ತಲಾ 2 ಲಕ್ಷ ಬಹುಮಾನ ಸಿಕ್ಕಿದ್ದು, ತಂಡದ ಸಹಾಯಕ ಸಿಬ್ಬಂದಿಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.ಇದು ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಟೂರ್ನಿಯ 8ನೇ ಸೀಸನ್ ಆಗಿತ್ತು. ಭಾರತ ಈ ಟೂರ್ನಿಯಲ್ಲಿ ಗೆದ್ದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ತಂಡ ಅತಿ ಹೆಚ್ಚು 4 ಬಾರಿ ಚಾಂಪಿಯನ್ ಆಗಿದೆ. ಇನ್ನು ಚೀನಾ 3 ಬಾರಿ ಗೆದ್ದಿದೆ. ಕರೋನಾದಿಂದಾಗಿ 2021 ರಲ್ಲಿ ಈ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.ಇನ್ನೊಂದು ಹೆಮ್ಮೆಯ ವಿಚಾರವೆಂದರೆ ವನಿತಾ ಜೂನಿಯರ್ ಹಾಕಿ ಏಷ್ಯಾಕಪ್​ಗೂ ಮುನ್ನ ನಡೆದ ಪುರುಷರ ಜೂನಿಯರ್ ಹಾಕಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸುವ ಮೂಲಕ ಭಾರತ ಪುರುಷರ ತಂಡವೂ ಕೂಡ ಚಾಂಪಿಯನ್ ಆಗಿತ್ತು.

source https://tv9kannada.com/photo-gallery/womens-hockey-junior-asia-cup-2023-india-beat-south-korea-in-final-and-won-trophy-1st-time-psr-599275.html

Leave a Reply

Your email address will not be published. Required fields are marked *