ನಮ್ಮ ಜೀವನದಲ್ಲಿ ಸಂಗೀತ ಯಾವ ರೀತಿ ಪರಿಣಾಮ ಬೀರುತ್ತದೆ. ಸಂಗೀತದ ಮಹತ್ವ ಏನು ಎಂಬುದನ್ನು ತಿಳಿಸುವ ಉದ್ದೇಶದಿಂದ ಜೂನ್ 21ರಂದು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ.
ಬೆಂಗಳೂರು: ಬಿಡುವಿಲ್ಲದ ದಿನಚರಿಯಲ್ಲಿ ಸಂಗೀತ ಕೇಳುವುದರಿಂದ ಮನಸಿಗೆ ನೆಮ್ಮದಿ ಭಾವ ಉಂಟಾಗುತ್ತದೆ.
ಮನಸ್ಸಿನ ಖುಷಿ ವಿಚಾರದಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ಸಂಗೀತ ಮಾನವ ಮಾತ್ರವಲ್ಲದೇ, ಪರಿಸರದ ಮೇಲೂ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಈ ಹಿನ್ನೆಲೆ ಇದರ ಮಹತ್ವ ಅರಿತು, ಜೂನ್ 21ರಂದು ವಿಶ್ವ ಸಂಗೀತ ದಿನವನ್ನು ಜಾಗತಿಕವಾಗಿ ಆಚರಣೆ ಮಾಡಲಾಗುವುದು.
ವಿಶ್ವ ಸಂಗೀತ ದಿನವನ್ನು ಮೊದಲ ಬಾರಿಗೆ 1982ರಲ್ಲಿ ಪ್ರಾನ್ಸ್ನಲ್ಲಿ ಜೂನ್ 21ರಂದು ಆಚರಣೆ ಮಾಡಲಾಯಿತು. ಫ್ರೆಂಚ್ ಸಾಂಸ್ಕೃತಿಕ ಸಚಿವ ಮೌರೈಸ್ ಫ್ಲುರೆಟ್ ವಿಶ್ವ ಸಂಗೀತ ದಿನ ಆಚರಣೆ ಸಂಬಂಧ ಮೊದಲ ಬಾರಿಗೆ ಅಧಿಸೂಚನೆ ಮಂಡನೆ ಮಾಡಿದರು. ಅವರ ಈ ಮಂಡನೆಯನ್ನು ಫ್ರಾನ್ಸ್ ಸಾಂಸ್ಕೃತಿಕ ಸಚಿವರಾದ ಜಾಕ್ವೆಸ್ ಲ್ಯಾಂಗ್ 1981ರಲ್ಲಿ ಅಂಗೀಕರಿಸಿ, ಮುಂದಿನ ವರ್ಷದಿಂದ ಅಂದರೆ 1982ರಿಂದ ಈ ದಿನ ಆಚರಣೆಗೆ ಘೋಷಿಸಿದರು. ಈ ದಿನದ ಮತ್ತೊಂದು ವಿಶೇಷ ಎಂದರೆ, ವಿಶ್ವ ಸಂಗೀತ ದಿನದಂದು ಅಂತಾರಾಷ್ಟ್ರೀಯ ಯೋಗ ದಿನ ಕೂಡ ಆಚರಣೆ ಮಾಡಲಾಗುವುದು. ಅಲ್ಲದೇ, ಇದು ವರ್ಷದಲ್ಲೇ ದೀರ್ಘ ದಿನ ಎಂಬ ಖ್ಯಾತಿಯನ್ನು ಹೊಂದಿದೆ.
ವಿಶ್ವ ಸಂಗೀತ ದಿನದಂದು ವಿಶ್ವದ ಅನೇಕ ಸಂಗೀತಗಾರರು ಮತ್ತು ಸಂಗೀತ ಸಂಯೋಜಕರ ಕೆಲಸವನ್ನು ಪ್ರಶಂಸೆ ಮಾಡಲಾಗುತ್ತದೆ. ಅನೇಕ ಸಂಗೀತ ಸಂಬಂಧಿತ ಕಾರ್ಯಕ್ರಮಗಳನ್ನು ಈ ದಿನ ಆಚರಿಸಲಾಗುತ್ತದೆ. ಅನೇಕ ಕಾರ್ಯಕ್ರಮಗಳಕ್ಕು ಭಾಗಿಯಾಗುವ ಮೂಲಕ ಜನರಲ್ಲಿ ಸಂಗೀತ ಮತ್ತು ಸಂಗೀತ ಸಂಯೋಜನಕರ ಬಗ್ಗೆ ತಿಳಿಸುವ ಸಂಗೀತದ ಮಾಂತ್ರಿಕ ಶಕ್ತಿಯನ್ನು ಪರಿಚಯ ಮಾಡಿಕೊಡುವ ಕೆಲಸ ನಡೆಸಲಾಗುವುದು.
ಸಾಂಸ್ಕೃತಿಕ ಬೆಸುಗೆ: ಇನ್ನು ಸಂಗೀತ ಎಂದರೆ ಏನು ಎಂಬ ಬಗ್ಗೆ ಜಾಗತಿಕವಾಗಿ ವಿವಿಧ ವ್ಯಾಖ್ಯಾನಗಳಿವೆ. ಆದಾಗ್ಯೂ, ಎಲ್ಲ ಮಾನವ ಸಮಾಜದ ಸಾಂಸ್ಕೃತಿಕ ಮತ್ತು ಸಾರ್ವತ್ರಿಕ ಅಂಶ ಸಂಗೀತವಾಗಿದೆ. ಸಾಮಾಜಿಕ ಚಟುವಟಿಕೆ, ಸಂಪ್ರದಾಯ, ಹಬ್ಬ ಹರಿದಿನ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ಸಂಗೀತದ ಮೂಲಕ ಪ್ರದೇಶಗಳ ಸಾಂಸ್ಕೃತಿಕ ಭಿನ್ನತೆಯನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆ ಸಂಗೀತವೂ ಮಾನವ ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಪರಿಗಣಿಸಲಾಗಿದೆ.
ಸಂಗೀತದಲ್ಲಿ ಹಲವು ವಿಧಗಳಿದೆ. ಆದರೆ, ಬಹುತೇಕ ಎಲ್ಲರಿಗೂ ಚಿರಪರಿಚಿತ ಮತ್ತು ಪ್ರಖ್ಯಾತಿ ಹೊಂದಿರುವ ಸಂಗೀತ ಎಂದರೇ ಅದು ವಾಣಿಜ್ಯ ಉದ್ದೇಶದ ಸಂಗೀತಗಳು. ವಿಭಿನ್ನ ಬಗೆಯ ಸಂಗೀತಗಳಾದ ಪಾಪ್, ಜಾಸ್, ಹಿಪ್-ಹಾಪ್, ಎಡಿಎಂ, ಕ್ಲಾಸಿಕ್, ಇನ್ಸ್ಟುಮೆಂಟಲ್, ಜಾನಪದ ಮುಂತಾದ ಪ್ರಕಾರಗಳಿವೆ. ಸಂಗೀತವು ಪ್ರತಿಯೊಬ್ಬರಿಗೂ ಅವರ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸಂತೋಷದ ಅನುಭವವನ್ನು ನೀಡುತ್ತದೆ.
ಬಹುದೊಡ್ಡ ಉದ್ಯಮ: ಸಂಗೀತವು ಬಿಲಿಯನ್ ಡಾಲರ್ ಉದ್ಯಮವಾಗಿದ್ದು, ವಿಶ್ವಾದ್ಯಂತ ಅನೇಕ ಮಿಲಿಯನ್ ಜನರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ಉದ್ಯಮ
ವೈವಿಧ್ಯತೆಯಿಂದ ಕೂಡಿದ್ದು, ಇದರಲ್ಲಿ ಕಲೆಗಾರರು, ಪ್ರದರ್ಶಕರು, ಸಂಗೀತಗಾರರು ಮತ್ತು ಕೊರಿಯೋಗ್ರಾಫರ್, ಡಿಜೆಗಳು, ಸಂಗೀತಗಾರರು ಮತ್ತು ಸಂಗೀತ ವಾದ್ಯಗಳ ನಿರ್ವಹಕರಿಗೆ ಜೀವನೋಪಾಯವಾಗಿದೆ. ಸಂಗೀತ ಜಾಗತಿಕವಾಗಿ ಆರ್ಥಿಕತೆಯಲ್ಲೂ ಬಹುದೊಡ್ಡ ಪಾಲನ್ನು ಹೊಂದಿದೆ. ವಿಶ್ವ ಸಂಗೀತ ದಿನವು ಒಂದು ಪ್ರಮುಖ ಘಟನೆಯಾಗಿದೆ. ಏಕೆಂದರೆ ನಮ್ಮ ಸಂಸ್ಕೃತಿ, ಭಾಷೆ, ಜನಾಂಗ ಅಥವಾ ಪಂಥದ ವ್ಯತ್ಯಾಸಗಳನ್ನು ಲೆಕ್ಕಿಸದೆ, ಎಲ್ಲ ಮಾನವರು ಸಂಗೀತದ ರಾಗವನ್ನು ಪ್ರೀತಿಸು, ಒಂದುಗೂಡಿಸುವ ಶಕ್ತಿ ಅದಕ್ಕಿದೆ.