
Royal Challengers Bengaluru Vs Mumbai Indians – ಭಾರತ ಮಹಿಳಾ ತಂಡದ ಇಬ್ಬರು ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಎದುರು ಬದುರಾದರೆ ತೀವ್ರ ಸ್ಪರ್ದೆ ಏರ್ಪಡುತ್ತದೆ ಎಂಬುದು ತಿಳಿದೇ ಇರುವ ಸಂಗತಿ. ಇದೀಗ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ. ಸ್ಮೃತಿ ಮಂದಾನ ನೇತೃತ್ವದ ಆರ್ ಸಿಬಿ ಹ್ಯಾಟ್ರಿಕ್ ಜಯದ ತವಕದಲ್ಲಿದೆ.
ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯೂಪಿಎಲ್‌ನ ತನ್ನ ಮೂರನೇ ಪಂದ್ಯದಲ್ಲಿ ಶುಕ್ರವಾರ ಬಲಿಷ್ಠ ಮುಂಬಯಿ ಇಂಡಿಯನ್ಸ್ ತಂಡದ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದೆ.
ಹಿಂದಿನ ಎರಡು ಪಂದ್ಯಗಳಲ್ಲಿ ಗುಜರಾತ್ ಜಯಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿರುವ ಸ್ಮೃತಿ ಮಂದಾನ ಬಳಗ, ಮಾಜಿ ಚಾಂಪಿಯನ್ ವಿರುದ್ಧವು ಅದೇ ಲಯವನ್ನು ಮುಂದುವರಿಸುವ ಗುರಿಯಲ್ಲಿದೆ. ಐದು ತಂಡಗಳ ಅಂಕಪಟ್ಟಿಯಲ್ಲಿ ಉತ್ತಮ ರನ್‌ರೇಟ್ ಹೊಂದಿರುವ ಆರ್‌ಸಿಬಿ 4 ಅಂಕಗಳೊಂದಿಗೆ ಸದ್ಯ ಮೊದಲ ಸ್ಥಾನದಲ್ಲಿದೆ. ಹಾಲಿ ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಆರ್‌ಸಿಬಿ, ಮನೆಯಂಗಳ ಚಿನ್ನಸ್ವಾಮಿ ಕ್ರೀಡಾಂಗಣದ ಎಲ್ಲಾ ಲಾಭವನ್ನು ಪಡೆಯಲು ಎದುರು ನೋಡುತ್ತಿದೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 47 ಎಸೆತಗಳಲ್ಲಿ 81 ಸಿಡಿಸಿದ ಮಂದಾನ, ಮತ್ತೊಮ್ಮೆ ಅದೇ ಲಹರಿಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಹಾದಿಯಲ್ಲಿ
2024ರ ಐಸಿಸಿ ಮಹಿಳಾ ಒಡಿಐ ಕ್ರಿಕೆಟ್ ಪ್ರಶಸ್ತಿ ಗೆಲ್ಲುವ ಜತೆಗೆಐಸಿಸಿ ಮಹಿಳಾ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಉಪನಾಯಕಿ ಮಂದಾನ, ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಂಡರೆ, ಆರ್‌ಸಿಬಿಗೆ ಸತತ ಮೂರನೇ ಜಯ ಸುಲಭವಾಗಲಿದೆ. ಇವರ ಜತೆಗೆ ಎಲಿಸ್ ಪೆರ್ರಿ, ರಘಿಘ್ವಿ ಬಿಸ್ಟ್, ರಿಚಾ ಘೋಷ್ ಮತ್ತು ಯುವ ಆಟಗಾರ್ತಿ ಕನಿಕಾ ಅಹುಜಾ ಹಿಂದಿನ ಪ್ರದರ್ಶನವನ್ನು ಮುಂದುವರಿಸಿದರೆ, ಆರ್‌ಸಿಬಿಯ ಗೆಲುವಿನ ನಾಗಲೋಟ ಮುಂದುವರಿಯಲಿದೆ. ಆದರೆ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಮುಂಬಯಿ ಇಂಡಿಯನ್ಸ್ , ಹಾಲಿ ಋುತುವಿನಲ್ಲಿ ಸೋಲು -ಗೆಲುವಿನ ಮಿಶ್ರ ಫಲ ಅನುಭವಿಸಿದೆ. ಮುಂಬಯಿ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಆತಿಥೇಯ ತಂಡವನ್ನು ಕಟ್ಟಿಹಾಕಲು ಹೇಗೆ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- ಪಂದ್ಯ ಆರಂಭ: ರಾತ್ರಿ 7.30
- ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಆರ್ ಸಿಬಿ ತಂಡ
ಸ್ಮೃತಿ ಮಂದಾನ( ನಾಯಕಿ), ಕನಿಕಾ ಅಹುಜಾ, ಏಕ್ತಾ ಬಿಸ್ಟ್, ಚಾರ್ಲಿ ಡೀನ್, ಕಿಮ್ ಗರ್ತ್, ರಿಚಾ ಘೋಷ್, ಹೆದರ್ ಗ್ರಹಾಂ, ವಿಜೆ ಜೋಶಿತಾ, ಸಬ್ಬನೇನಿ ಮೇಘನಾ, ನುಸ್ರತ್ ಪರ್ವೀನ್, ಜಾಗ್ರವಿ ಪವಾರ್, ಏಲ್ಸಿ ಪೆರ್ರಿ, ರಾಘ್ವಿ ಬಿಸ್ಟ್, ಸ್ನೇಹ್ ರಾಣಾ, ಪ್ರೇನಾ ರಾವತ್, ರೇಣುಕಾ ಸಿಂಗ್, ಜಾರ್ಜಿಯಾ ವಾರೆಹಾಮ್, ಡ್ಯಾನಿ ವೇಟ್ ಹಾಡ್ಜ್.
ಮುಂಬೈ ಇಂಡಿಯನ್ಸ್
ಹರ್ಮನ್ ಪ್ರೀತ್ ಕೌರ್ (ನಾಯಕಿ), ಯಾಶ್ತಿಕಾ ಭಾಟಿಯಾ, ನೇದಿನ್ ಡಿ ಕ್ಲರ್ಕ್, ಸಂಸ್ಕೃತಿ ಗುಪ್ತಾ, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್, ಜಿಂತಿಮಣಿ ಕಲಿತಾ, ಜಿ ಕಮಲಿನಿ, ಅಮನ್ ದೀಪ್ ಕೌರ್, ಅಮನಜೋತ್ ಕೌರ್, ಸತ್ಯಮೂರ್ತಿ ಕೀರ್ತನಾ, ಅಮೇಲಿಯಾ ಕೆರ್, ಅಕ್ಷಿತಾ ಮಹೇಶ್ವರಿ, ಹೇಲಿ ಮ್ಯಾಥ್ಯೂಸ್, ಸಂಜೀವನ್ ಸಜನಾ, ನಾಟ್ ಸಿವಿಯರ್ ಬ್ರಂಟ್, ಪರುಣಿಕ ಸಿಸೋಡಿಯಾ ಚೋಲೆ, ಟ್ರಯನ್.