ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಬಹುತೇಕ ಆಸೀಸ್ ಪರ ವಾಲಿದೆ. WTC ಫೈನಲ್‌ನ ಮೊದಲ ಎರಡು ದಿನಗಳ ಆಟದಲ್ಲಿ ಆಸ್ಟ್ರೇಲಿಯಾ ತಂಡವು ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಎರಡನೇ ದಿನದ ಎರಡನೇ ಸೆಷನ್ನಲ್ಲಿ ಆಸ್ಟ್ರೇಲಿಯಾ ತಂಡವವನ್ನು 469 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಆದರೆ ಆಸೀಸ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಟಾಪ್ ಆರ್ಡರ್ ಅಲ್ಪ ಮೊತ್ತಕ್ಕೆ ಕುಸಿದಿದೆ. ತಂಡದ ಆಧಾರ ಸ್ತಂಭಗಳಾದ ರೋಹಿತ್ ಶರ್ಮಾ, (15) ಶುಭ್ಮನ್ ಗಿಲ್, (13) ವಿರಾಟ್ ಕೊಹ್ಲಿ, (14) ಚೇತೇಶ್ವರ ಪೂಜಾರ (14) ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಮುಂದೆ ಮಂಡಿಯೂರಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದ ರವೀಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ನಡುವಿನ 73 ರನ್‌ಗಳ ಜೊತೆಯಾಟವು ದಿನದ ಅಂತ್ಯಕ್ಕೆ ಟೀಂ ಇಂಡಿಯಾವನ್ನು 150 ರನ್ ಗಡಿ ದಾಟುವಂತೆ ಮಾಡಿತ್ತು. ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ ಕೇವಲ 151 ರನ್ ಕಲೆಹಾಕಿದೆ. ಹೀಗಾಗಿ ಟೀಂ ಇಂಡಿಯಾ ಫಾಲೋ ಆನ್ ಭೀತಿಯನ್ನು ಎದುರಿಸುತ್ತಿದೆ.
ಆಸ್ಟ್ರೇಲಿಯಾ ನೀಡಿರುವ 469 ರನ್‌ಗಳ ಗುರಿ ಮುಂದೆ ಕೇವಲ 151 ರನ್ ಕಲೆಹಾಕಿರುವ ಭಾರತ ಇನ್ನೂ 318 ರನ್ಗಳಿಗಿಂತ ಹಿಂದಿದೆ. ಹೀಗಾಗಿ ಟೀಂ ಇಂಡಿಯಾ ಫಾಲೋ ಆನ್ ತಪ್ಪಿಸಬೇಕೆಂದರೆ ಇನ್ನು 100ಕ್ಕೂ ಅಧಿಕ ರನ್ಗಳನ್ನು ಬಾರಿಸಬೇಕಾಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ 5 ದಿನಗಳ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 200 ರನ್‌ಗಳ ಮುನ್ನಡೆ ಸಾಧಿಸಿದರೆ ಆಗ ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರಬಹುದಾಗಿದೆ. ಅಂದರೆ, ಫಾಲೋ ಆನ್ ತಪ್ಪಿಸಲು ಭಾರತ ತಂಡ ಒಟ್ಟಾರೆ 270 ರನ್ ಬಾರಿಸಬೇಕಾಗಿದೆ. ಸದ್ಯಕ್ಕೆ ರೋಹಿತ್ ಶರ್ಮಾ ಪಡೆ 5 ವಿಕೆಟ್‌ಗೆ 151 ರನ್ ಕಲೆಹಾಕಿದೆ. ಇದರಿಂದಾಗಿ ಟೀಂ ಇಂಡಿಯಾ ಇನ್ನೂ 119 ರನ್ ಬಾರಿಸಬೇಕಿದ್ದು, ಆಗ ಮಾತ್ರ ಫಾಲೋ ಆನ್ ಅಪಾಯದಿಂದ ಪಾರಾಗಬಹುದಾಗಿದೆ.
ಟಾಪ್ ಆರ್ಡರ್ ಮತ್ತೆ ವಿಫಲ
ಮೊದಲ ದಿನ ಭಾರತದ ಬೌಲರ್‌ಗಳು ಮಾಡಿದ ತಪ್ಪನ್ನು ಆಸ್ಟ್ರೇಲಿಯಾ ವೇಗಿಗಳು ಪುನರಾವರ್ತಿಸಲಿಲ್ಲ. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಶಾರ್ಟ್ ಬಾಲ್ಗಳ ಮೂಲಕ ದಾಳಿ ಆರಂಭಿಸಿ, ಮೊದಲು ಭಾರತೀಯ ಬ್ಯಾಟ್ಸ್ಮನ್ಗಳನ್ನು ಬಲೆಗೆ ಕೆಡವಿ ನಂತರ ಲಾಂಗ್ ಬಾಲ್ಗಳಲ್ಲಿ ಅಗತ್ಯ ಸ್ವಿಂಗ್ ಪಡೆಯುವ ಮೂಲಕ ವಿಕೆಟ್ ಪಡೆದರು. ಅದೇ ರೀತಿ ರೋಹಿತ್ ಶರ್ಮಾ (15) ಅವರನ್ನು ಪ್ಯಾಟ್ ಕಮಿನ್ಸ್ ಎಲ್ ಬಿಡಬ್ಲ್ಯು ಬಲೆಗೆ ಕೆಡವಿದರು.
ಬಳಿಕ ಶುಭ್ಮನ್ ಗಿಲ್ (13) ಮತ್ತು ಚೇತೇಶ್ವರ ಪೂಜಾರ (14) ಕೂಡ ಚೆಂಡನ್ನು ಆಫ್ ಸ್ಟಂಪ್ ಹೊರಗೆ ಬಿಡುವ ಪ್ರಕ್ರಿಯೆಯಲ್ಲಿ ಬೌಲ್ಡ್ ಆದರು. ಇನ್ನು ಈ ಪಂದ್ಯಕ್ಕೆ ಅತ್ಯುತ್ತಮ ಫಾರ್ಮ್‌ನೊಂದಿಗೆ ಆಗಮಿಸಿದ್ದ ವಿರಾಟ್ ಕೊಹ್ಲಿ (14) ಸ್ಟಾರ್ಕ್ ಅವರ ಗುಡ್ ಲೆಂಗ್ತ್ ಬಾಲ್ನಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್ಗೆ ಕ್ಯಾಚಿತ್ತು ಔಟಾದರು.
ಇನ್ನಿಂಗ್ಸ್ ನಿಭಾಯಿಸಿದ ಜಡೇಜಾ-ರಹಾನೆ
ಟೀಂ ಇಂಡಿಯಾ ಕೇವಲ 71 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಪರಿಸ್ಥಿತಿ ಕಷ್ಟಕರವಾಗಿತ್ತು ಆದರೆ ಮೂರನೇ ಸೆಷನ್ನಲ್ಲಿ ಆಸೀಸ್ ದಾಳಿಗೆ ದಿಟ್ಟ ಉತ್ತರ ನೀಡಿದ ರವೀಂದ್ರ ಜಡೇಜಾಗೆ ಸುಮಾರು ಒಂದೂವರೆ ವರ್ಷಗಳ ನಂತರ ತಂಡಕ್ಕೆ ಮರಳಿದ ಅಜಿಂಕ್ಯ ರಹಾನೆ ಉತ್ತಮ ಬೆಂಬಲ ನೀಡಿದರು. ದಿನದ ಅಂತ್ಯದವರೆಗೂ ತಂಡವನ್ನು ಉಳಿಸುವಲ್ಲಿ ಇಬ್ಬರೂ ಬಹುತೇಕ ಯಶಸ್ವಿಯಾಗಿದ್ದರು. ಆದರೆ ದಿನದಂತ್ಯದಲ್ಲಿ ಜಡೇಜಾ (48) ಅವರನ್ನು ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಔಟ್ ಮಾಡಿದರು. ಅಷ್ಟರಲ್ಲಿ ಜಡೇಜಾ ಮತ್ತು ರಹಾನೆ ನಡುವೆ 71 ರನ್‌ಗಳ ಜೊತೆಯಾಟ ನಡೆದಿತ್ತು.