WTC Final 2023: ಫೈನಲ್ ಪಂದ್ಯದಲ್ಲಿ ಕೈ ಕೊಡುವ ರೋಹಿತ್ ಶರ್ಮಾ..!

WTC Final 2023: ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಜೂನ್ 7 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.ಈ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಹೇಗಿರಲಿದೆ ಎಂಬುದೇ ಈಗ ದೊಡ್ಡ ಚಿಂತೆಯಾಗಿದೆ. ಏಕೆಂದರೆ ಹಿಟ್​ಮ್ಯಾನ್ ಅದ್ಭುತ ಫಾರ್ಮ್​ನಲ್ಲಿದ್ದರೂ ಐಸಿಸಿ ಫೈನಲ್​ನಲ್ಲಿ ಕೈ ಕೊಡುವ ಪ್ರವೃತಿ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಕೆಳಗಿನ ಅಂಕಿ ಅಂಶಗಳು.ರೋಹಿತ್ ಶರ್ಮಾ ಇದುವರೆಗೆ ಭಾರತದ ಪರ 5 ಐಸಿಸಿ ಫೈನಲ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. 2007ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಹಿಟ್​ಮ್ಯಾನ್ 30 ರನ್​ಗಳಿಸಿ ಔಟಾಗಿದ್ದರು.ಇನ್ನು 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ್ದು ಕೇವಲ 9 ರನ್​ ಮಾತ್ರ. ಹಾಗೆಯೇ 2014ರ ಫೈನಲ್ ಪಂದ್ಯದಲ್ಲಿ 29 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು.2015 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಕಳೆದ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯದಲ್ಲೂ ವಿಫಲರಾಗಿದ್ದರು.ನ್ಯೂಜಿಲೆಂಡ್ ವಿರುದ್ಧ ನಡೆದ WTC 2021 ರ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ 34 ರನ್​ಗಳಿಸಿ ಔಟಾಗಿದ್ದ ರೋಹಿತ್ ಶರ್ಮಾ, 2ನೇ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 30 ರನ್ ಮಾತ್ರ. ಅಂದರೆ ಭಾರತದ ಪಾಲಿಗೆ ನಿರ್ಣಾಯಕವಾಗಿರುವ ಯಾವುದೇ ಪಂದ್ಯದಲ್ಲೂ ಹಿಟ್​ಮ್ಯಾನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.ಇದಾಗ್ಯೂ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪೈನಲ್​ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾ ತಮ್ಮ ಹಳೆಯ ವೈಫಲ್ಯಕ್ಕೆ ತೀಲಾಂಜಲಿ ಹಾಡಲಿದ್ದಾರಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/wtc-final-2023-rohit-sharma-in-icc-finals-kannada-news-zp-594853.html

Leave a Reply

Your email address will not be published. Required fields are marked *