“ಯೂಟ್ಯೂಬ್‌, ಎಟಿಎಂ, ಮೊಬೈಲ್‌ ಇಂಟರ್‌ನೆಟ್‌ ಇಲ್ಲದ ವಿಶ್ವದ ವಿಶೇಷ ದೇಶ”

ಇಂಟನರ್‌ನೆಟ್‌ ಇಲ್ಲದೆ ನಮ್ಮ ಜೀವನವನ್ನು ನಾವಿಂದು ಊಹಿಸಿಕೊಳ್ಳಲಾರೆವು. ನಾವು ಎಲ್ಲೋ ಹೋಗಬೇಕಾದರೆ ಅಥವಾ ಏನನ್ನಾದರೂ ಹುಡುಕಬೇಕಾದರೆ ತಕ್ಷಣ ಗೂಗಲ್‌ಗೆ ನುಗ್ಗುತ್ತೇವೆ. ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನಾವು ಬಳಸುವ ಹೆಚ್ಚಿನ ಅಪ್ಲಿಕೇಶನ್‌ಗಳು ಇಂಟರ್ನೆಟ್ ಆಧಾರಿತ.

ಭಾರತ ಮಾತ್ರವಲ್ಲ, ಪ್ರಪಂಚದ ಬಹುತೇಕ ಪ್ರತಿಯೊಂದು ದೇಶವೂ ಇಂಟರ್ನೆಟ್ ಅನ್ನು ಬಳಸುತ್ತದೆ. ಆದರೂ, ಜಗತ್ತಿನಲ್ಲಿ ಇನ್ನೂ ಇಂಟರ್ನೆಟ್ ಪ್ರವೇಶವಿಲ್ಲದ ಒಂದು ವಿಚಿತ್ರ ದೇಶವಿದೆ.

ಈ ದೇಶವನ್ನು ಉತ್ತರ ಕೊರಿಯಾಕ್ಕೆ ಕೆಲವೊಮ್ಮೆ ಹೋಲಿಸಲಾಗುತ್ತದೆ. ಅದಕ್ಕೆ ಕಾರಣವೂ ಇದೆ. ಸಾಮಾನ್ಯ ನಾಗರಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಇಂಟರ್ನೆಟ್ ಡೇಟಾ ಪಡೆಯಲಾರದ ವಿಶ್ವದ ಏಕೈಕ ದೇಶ ಎರಿಟ್ರಿಯಾ. ಮೊಬೈಲ್ ಡೇಟಾ ಮತ್ತು ಅಂತಹ ತಂತ್ರಜ್ಞಾನಗಳು ಈ ದೇಶದಲ್ಲಿ ವಿರಳ. ಎರಿಟ್ರಿಯಾ ವಿಶ್ವದ ಅತ್ಯಂತ ರಹಸ್ಯ ದೇಶಗಳಲ್ಲಿ ಒಂದು. ಎರಿಟ್ರಿಯಾ ಪೂರ್ವ ಆಫ್ರಿಕಾದಲ್ಲಿ ಕೆಂಪು ಸಮುದ್ರದಲ್ಲಿದೆ. ಜಿಬೌಟಿ, ಸುಡಾನ್ ಮತ್ತು ಇಥಿಯೋಪಿಯಾ ಇದರ ಗಡಿಗಳಲ್ಲಿವೆ. ಎರಿಟ್ರಿಯಾದ ಸರ್ವಾಧಿಕಾರಿ ಆಡಳಿತದಿಂದಾಗಿ ಅದನ್ನು ʼಆಫ್ರಿಕಾದ ಉತ್ತರ ಕೊರಿಯಾʼ ಎಂದು ಬಣ್ಣಿಸಲಾಗುತ್ತದೆ.

ಎರಿಟ್ರಿಯಾ 117,000 ಚದರ ಕಿಲೋಮೀಟರ್ ವಿಸ್ತೀರ್ಣ, ಸುಮಾರು 35 ಲಕ್ಷ ನಿವಾಸಿಗಳನ್ನು ಹೊಂದಿರುವ ದೇಶ. ಗುಡ್ ನ್ಯೂಸ್ ಟುಡೇ ವರದಿಯ ಪ್ರಕಾರ ಇದು ಯಾವುದೇ ಅಧಿಕೃತ ಭಾಷೆಯನ್ನು ಹೊಂದಿಲ್ಲ. ಎರಿಟ್ರಿಯಾದ ಜನರು ಸಾಮಾನ್ಯವಾಗಿ ಟಿಗ್ರಿನ್ಯಾ, ಅರೇಬಿಕ್ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಕೆಲವರು ಕುಶಿಟಿಕ್ ಅಥವಾ ಆಫ್ರೋ-ಏಷ್ಯಾಟಿಕ್ ಭಾಷೆಗಳನ್ನು ಸಹ ಮಾತನಾಡುತ್ತಾರೆ. ಎರಿಟ್ರಿಯಾದ ರಾಜಧಾನಿ ಅಸ್ಮಾರಾ. ಅಸ್ಮಾರಾವನ್ನು ʼಲಿಟಲ್ ರೋಮ್ʼ ಎಂದು ಕರೆಯಲಾಗುತ್ತದೆ. ಈ ದೇಶ ಅನೇಕ ಶ್ರೇಷ್ಠ ಇಟಾಲಿಯನ್ ಕಟ್ಟಡಗಳನ್ನು ಹೊಂದಿದೆ.

ಸ್ವಾತಂತ್ರ್ಯ ಪಡೆದಾಗಿನಿಂದ, ಈ ದೇಶ ಎಂದಿಗೂ ಚುನಾವಣೆಯನ್ನು ನಡೆಸಿಲ್ಲ. ಇಸಾಯಾಸ್ ಅಫ್ವೆರ್ಕಿ 1993ರಿಂದ ಅಧ್ಯಕ್ಷರಾಗಿದ್ದಾರೆ. ಎರಿಟ್ರಿಯಾ ದೇಶವು ಇಥಿಯೋಪಿಯಾ ಮತ್ತು ಇಟಲಿಯ ದೀರ್ಘಕಾಲೀನ ಆಳ್ವಿಕೆಯಲ್ಲಿತ್ತು. ಎರಿಟ್ರಿಯಾವನ್ನು 1962ರಲ್ಲಿ ಇಥಿಯೋಪಿಯಾ ಸ್ವಾಧೀನಪಡಿಸಿಕೊಂಡಿತು. 1993ರಲ್ಲಿ ತನ್ನದೇ ಆದ ಸ್ವತಂತ್ರ ದೇಶವಾಯಿತು.

ಸಾಮಾನ್ಯ ಜನರಿಗೆ ಇಂಟರ್ನೆಟ್ ಕೊರತೆಯಿರುವ ವಿಶ್ವದ ಏಕೈಕ ದೇಶ ಎರಿಟ್ರಿಯಾ. ಜನಸಂಖ್ಯೆಯ ಕೇವಲ 1% ಜನತೆ ಮಾತ್ರ ಕೆಲವೊಮ್ಮೆ ಇಂಟರ್ನೆಟ್ ಬಳಸಿದ್ದಾರೆಂದು ತಿಳಿದುಬಂದಿದೆ. ಎರಿಟ್ರಿಯಾದಲ್ಲಿ ಮೊಬೈಲ್ ಡೇಟಾ ಸೇವೆ ಇಲ್ಲ ಮತ್ತು ಜನರ ಮನೆಗಳಲ್ಲಿ ಇಂಟರ್ನೆಟ್ ಬಳಸಲು ಯಾವುದೇ ಮಾರ್ಗವಿಲ್ಲ. ಇಂಟರ್ನೆಟ್ ಬಳಕೆ ದೇಶಾದ್ಯಂತ ಹರಡಿರುವ ಕೆಲವೇ ಕೆಫೆಗಳಿಗೆ ಸೀಮಿತ. ಜನ ತಮ್ಮ ಮೊಬೈಲ್ ಸಾಧನಗಳನ್ನು ಬಳಸಿಕೊಂಡು ವೈ-ಫೈ ಮೂಲಕ ಇಂಟರ್ನೆಟ್‌ಗೆ ಸಂಪರ್ಕಿಸಲು ಈ ಕೆಫೆಗಳನ್ನು ಬಳಸುತ್ತಾರೆ. ಆದರೂ ಈ ಕೆಫೆಗಳಲ್ಲಿ ಇಂಟರ್ನೆಟ್ ಸಂಪರ್ಕದ ತುಂಬಾ ನಿಧಾನ. ಸಾಮಾನ್ಯವಾಗಿ 2Gಗಿಂತ ಕಡಿಮೆ.

ಎರಿಟ್ರಿಯಾದಲ್ಲಿ ಹೆಚ್ಚಿನ ಜನರು ಈ ಕೆಫೆಗಳು ದುಬಾರಿ ಆಗಿರುವುದರಿಂದ ನಿಯಮಿತವಾಗಿ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಿಲ್ಲ. ಏಕೆಂದರೆ ಇದು ವೈ-ಫೈ ಬಳಸಲು ಗಂಟೆಗೆ ಸುಮಾರು 100 ಎರಿಟ್ರಿಯನ್ ನಕ್ಫಾ (ರೂ. 100 ಕ್ಕಿಂತ ಸ್ವಲ್ಪ ಹೆಚ್ಚು) ಶುಲ್ಕ ವಿಧಿಸುತ್ತದೆ. ದೇಶದ ಕಠಿಣ ಆರ್ಥಿಕ ಸ್ಥಿತಿಯಿಂದಾಗಿ ಇದು ಎಲ್ಲರಿಗೂ ಸುಲಭವಲ್ಲ. ಎರಿಟ್ರಿಯಾದಲ್ಲಿ ಯಾವುದೇ ಎಟಿಎಂ ಸೇವೆಗಳಿಲ್ಲ. ಆದ್ದರಿಂದ ನೀವು ಹೋದಲ್ಲೆಲ್ಲಾ ಹಣವನ್ನು ಕೊಂಡೊಯ್ಯಬೇಕಾಗುತ್ತದೆ. ನಗದು ಇಲ್ಲದೆ ನೀವು ಏನನ್ನೂ ಖರೀದಿಸಲು ಸಾಧ್ಯವಿಲ್ಲ.

ಮುಖ್ಯವಾಗಿ ಈ ದೇಶ ಅತ್ಯಂತ ಕಟ್ಟುನಿಟ್ಟಾದ ಸರ್ವಾಧಿಕಾರಿ ಆಡಳಿತದಲ್ಲಿದೆ. ಅದರ ನಾಗರಿಕರು ಕಡ್ಡಾಯ ಮಿಲಿಟರಿ ಸೇವೆ ಮಾಡಲೇಬೇಕು. ಎರಿಟ್ರಿಯಾದಲ್ಲಿ ನಿಜವಾಗಿಯೂ ಖಾಸಗಿಯಾದ ಯಾವುದೂ ಇಲ್ಲ- ಆಸ್ಪತ್ರೆಗಳು, ವಿಮಾನಯಾನ ಸಂಸ್ಥೆಗಳು, ಸಾರಿಗೆ ಮತ್ತು ದೂರದರ್ಶನ ಎಲ್ಲವನ್ನೂ ಸರ್ಕಾರ ನಡೆಸುತ್ತದೆ. ಎರಿಟ್ರಿಯಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದೆ. ಯಾವುದೇ ಸ್ವತಂತ್ರ ಸುದ್ದಿಸಂಸ್ಥೆ ಮತ್ತು ಸ್ವತಂತ್ರ ಪತ್ರಕರ್ತರೂ ಇಲ್ಲ. ಏಕೈಕ ಪ್ರಸಾರ ಸೇವೆಯೆಂದರೆ ಒಂದು ಸರ್ಕಾರಿ ಟಿವಿ ಚಾನೆಲ್. ಯಾವುದೇ ವಿದೇಶಿ ಚಾನೆಲ್‌ಗಳಿಗೆ ಅನುಮತಿ ಇಲ್ಲ.

ಸರ್ಕಾರದ ಅನುಮತಿಯಿಲ್ಲದೆ ಜನರು ದೇಶವನ್ನು ಬಿಡಲು ಸಾಧ್ಯವಿಲ್ಲ. ಯಾರಾದರೂ ಹೊರಹೋಗಲು ಪ್ರಯತ್ನಿಸುತ್ತಿರುವುದು ಕಂಡುಬಂದರೆ ಅವರನ್ನು ತಕ್ಷಣ ಗುಂಡು ಹಾರಿಸಿ ಸಾಯಿಸಲಾಗುತ್ತದೆ. ಎರಿಟ್ರಿಯಾಕ್ಕೆ ಪ್ರವಾಸಿಗರ ಪ್ರವೇಶವನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ. ಅದಕ್ಕಾಗಿಯೇ ಇದನ್ನು ವಿಶ್ವದ ಅತ್ಯಂತ ಕಡಿಮೆ ಭೇಟಿ ನೀಡುವ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

Views: 30

Leave a Reply

Your email address will not be published. Required fields are marked *