​ಕೊಲಂಬೊ ಟೆಸ್ಟ್: ಲಂಕಾ ನೆಲದಲ್ಲಿ ಐತಿಹಾಸಿಕ ಶತಕ ಸಿಡಿಸಿದ ಧ್ರುವ್ ಜುರೇಲ್, ಟೀಂ ಇಂಡಿಯಾ ಬೃಹತ್ ಮೊತ್ತ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳ ಅಬ್ಬರ ಮುಂದುವರೆದಿದೆ. ಪಂದ್ಯದ ಮೊದಲನೇ ದಿನ ಕನ್ನಡಿಗ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದರೆ, ಎರಡನೇ ದಿನ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೇಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದ್ದಾರೆ.

​ಈ ಇಬ್ಬರು ಆಟಗಾರರ ಶತಕದ ಬಲದಿಂದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದ ಜುರೇಲ್, ಇದೀಗ ಕೊಲಂಬೊದಲ್ಲಿ ಶತಕದ ಸಂಭ್ರಮ ಆಚರಿಸಿದ್ದಾರೆ.

ಲಂಕಾ ನೆಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಜುರೇಲ್!

ಧ್ರುವ್ ಜುರೇಲ್ ಅವರ ಈ ಶತಕ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಮೊಟ್ಟಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಜುರೇಲ್ ಪಾತ್ರರಾಗಿದ್ದಾರೆ. ಈ ಹಿಂದೆ 2010ರಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ಗಳಿಸಿದ್ದ 76 ರನ್‌ಗಳೇ ವಿಕೆಟ್ ಕೀಪರ್ ಒಬ್ಬರ ಗರಿಷ್ಠ ಮೊತ್ತವಾಗಿತ್ತು.

​ಅಷ್ಟೇ ಅಲ್ಲದೆ, ಶ್ರೀಲಂಕಾ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದು ಟೆಸ್ಟ್ ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ಸಾಧನೆಗೂ ಜುರೇಲ್ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ 2017ರಲ್ಲಿ ಪಲ್ಲೆಕೆಲೆಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 108 ರನ್ ಗಳಿಸಿ ಈ ಸಾಧನೆ ಮಾಡಿದ್ದರು.

ರೋಚಕವಾಗಿತ್ತು ಶತಕದ ಓಟ

ರಿಷಭ್ ಪಂತ್ ಅವರೊಂದಿಗೆ ಅತ್ಯಮೂಲ್ಯ ಶತಕದ ಜೊತೆಯಾಟವಾಡಿದ ಜುರೇಲ್, 97 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಂತ್ ನಿರ್ಗಮನದ ಬಳಿಕವೂ ಎಚ್ಚರಿಕೆಯ ಆಟವಾಡಿದ ಅವರು, 9 ಬೌಂಡರಿಗಳ ನೆರವಿನಿಂದ ಶತಕದ ಗಡಿ ದಾಟಿದರು. ವಿಶೇಷವೆಂದರೆ, ಶತಕದ ಅಂಚಿನಲ್ಲಿದ್ದಾಗ ಜುರೇಲ್ ರನೌಟ್ ಆಗುವ ಭೀತಿಯಲ್ಲಿದ್ದರು. ಆದರೆ, ಲಂಕಾ ಫೀಲ್ಡರ್ ಎಸೆದ ಚೆಂಡು ವಿಕೆಟ್‌ಗೆ ತಾಗದ ಕಾರಣ ಕೂದಲೆಳೆಯ ಅಂತರದಲ್ಲಿ ಪಾರಾಗಿ ಅಭಿಮಾನಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದರು.

​ವಿದೇಶಿ ನೆಲದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಶತಕ ಬಾರಿಸಿದ 7ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಜುರೇಲ್ ಪಾತ್ರರಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (2022) ಅವರಂತಹ ದಿಗ್ಗಜರು ಈ ಸಾಧನೆ ಮಾಡಿದ್ದರು.

Leave a Reply

Your email address will not be published. Required fields are marked *