ಚಿತ್ರದುರ್ಗದಲ್ಲಿ ಪರಿಸರ ಸ್ನೇಹಿ ಗಣೇಶನ ಆರಾಧನೆ: ಶ್ರೇಯಸ್ಸ್ ಗುಜ್ಜರ್ ಅವರ ವಿಶಿಷ್ಟ ಪ್ರಯತ್ನ.

ಚಿತ್ರದುರ್ಗ, ಸೆ.15:

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ರಾಸಾಯನಿಕ ವಸ್ತುಗಳು ಮತ್ತು ಕೃತಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಕೆ ಇನ್ನೂ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿ ಆರಾಧಿಸುವ ಮೂಲಕ ಕೋಟೆನಾಡು ಚಿತ್ರದುರ್ಗದ ಯುವಕ ಶ್ರೇಯಸ್ಸ್ ಗುಜ್ಜರ್ ಅವರು ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ.

ಚಿತ್ರದುರ್ಗ ನಗರದ ದೊಡ್ಡಪೇಟೆ ನಿವಾಸಿಯಾಗಿರುವ ಶ್ರೇಯಸ್ಸ್ ಗುಜ್ಜರ್ ಅವರು ಬಾಲ್ಯದಿಂದಲೇ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸುವ ಸಂಕಲ್ಪ ಮಾಡಿ, ಅರಿಶಿಣ, ಜೇಡಿಮಣ್ಣು ಸೇರಿದಂತೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಮೂರ್ತಿಯನ್ನು ಸ್ವತಃ ತಯಾರಿಸಿದ್ದಾರೆ.

ಸುಮಾರು ಒಂದು ತಿಂಗಳ ಕಾಲ ಶ್ರಮವಹಿಸಿ ಗಣೇಶ ಮೂರ್ತಿಯನ್ನು ರೂಪಿಸಿರುವ ಅವರು, ಮೂರ್ತಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಆಕರ್ಷಕವಾಗಿ ಅಲಂಕರಿಸಿದ್ದಾರೆ. ರಾಸಾಯನಿಕ ಬಣ್ಣ ಹಾಗೂ ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸದೆ ಮೂರ್ತಿ ತಯಾರಿಸಿರುವುದು ವಿಶೇಷವಾಗಿದೆ.

ಇದರ ಜೊತೆಗೆ ಥರ್ಮಕೋಲ್, ಹಳೆಯ ದಿನಪತ್ರಿಕೆ ಮತ್ತು ಹತ್ತಿಯಂತಹ ವಸ್ತುಗಳನ್ನು ಬಳಸಿ ಪುರಾತನ ದೇಗುಲದ ಮಾದರಿಯನ್ನೂ ನಿರ್ಮಿಸಿದ್ದಾರೆ. ದೇಗುಲದ ಮುಂಭಾಗದಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹಗಳನ್ನು ಕಲಾತ್ಮಕವಾಗಿ ರೂಪಿಸಿ ಅಲಂಕರಿಸಿದ್ದಾರೆ. ಈ ಕಲಾಕೃತಿ ಸಹಜ ಕಲ್ಲಿನಿಂದ ನಿರ್ಮಿಸಲಾದ ಪುರಾತನ ದೇಗುಲದ ಮಾದರಿಯಂತೆ ಕಾಣುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಗೂ ಪಾತ್ರವಾಗಿದೆ.

ಭಕ್ತಿಯ ಆಚರಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಶ್ರೇಯಸ್ಸ್ ತಮ್ಮ ಕಲೆಯ ಮೂಲಕ ಸಾರುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ವಸ್ತುಗಳಿಂದ ಮೂರ್ತಿಗಳನ್ನು ತಯಾರಿಸಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬ ಆಚರಿಸಬಹುದು ಎಂಬುದನ್ನು ತಮ್ಮ ಪ್ರಯತ್ನದ ಮೂಲಕ ತೋರಿಸಿಕೊಟ್ಟಿದ್ದಾರೆ.

ಯೋಗಗುರು ಶ್ರೀಧರ್ ಹಾಗೂ ಶ್ರೀಮತಿ ಶಾರದ ದಂಪತಿಯ ಪುತ್ರರಾದ ಶ್ರೇಯಸ್ಸ್ ಗುಜ್ಜರ್ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್. ವೃತ್ತಿಯ ಜೊತೆಗೆ ಚಿತ್ರಕಲೆ, ವಿಗ್ರಹ ತಯಾರಿಕೆ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಅವರು, ತಮ್ಮ ಸೃಜನಶೀಲತೆಯನ್ನು ಪರಿಸರ ಕಾಳಜಿಯೊಂದಿಗೆ ಬೆಸೆದುಕೊಂಡಿದ್ದಾರೆ.

ಭಕ್ತಿಯ ಜೊತೆಗೆ ಪರಿಸರ ಕಾಳಜಿಯೂ ಇರಲಿ” ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೇಯಸ್ಸ್ ಗುಜ್ಜರ್ ಅವರು ಕೈಗೊಂಡಿರುವ ಈ ಪ್ರಯತ್ನವು ಗಣೇಶ ಹಬ್ಬದ ಆಚರಣೆಯಲ್ಲಿ ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಯುವಜನತೆಗೆ ಪ್ರೇರಣೆಯಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *