ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ 2 ಚರಣಗಳ ಗಾಯನವಷ್ಟೇ ಕಡ್ಡಾಯ: ಸರ್ಕಾರದ ಹೊಸ ಆದೇಶ.

ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಹಾಡುವ ಕುರಿತಂತೆ ಕರ್ನಾಟಕ ಸರ್ಕಾರ ಮಹತ್ವದ ಹಾಗೂ ಪರಿಷ್ಕೃತ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ ಸಾಮಾನ್ಯ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಕಡ್ಡಾಯವಾಗಿ ಹಾಡಲು ಸೂಚಿಸಲಾಗಿದೆ.

ಶಿಷ್ಟಾಚಾರದಲ್ಲಿ ವಿನಾಯಿತಿ ಮತ್ತು ನಿಯಮಗಳು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ರಾಜ್ಯಪಾಲರು ಭಾಗವಹಿಸುವ ಅಧಿಕೃತ ಹಾಗೂ ಉನ್ನತ ಮಟ್ಟದ ಕಾರ್ಯಕ್ರಮಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಈ ಗಣ್ಯರು ಉಪಸ್ಥಿತರಿರುವ ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಗೀತೆಯ ಸಂಪೂರ್ಣ 6 ಚರಣಗಳನ್ನು ಹಾಡಬೇಕು ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೇಂದ್ರದ ಆದೇಶಕ್ಕೆ ಪ್ರತಿಯಾಗಿ ರಾಜ್ಯದ ಕ್ರಮ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರಗೀತೆಗೆ ನೀಡುವ ಸಮಾನ ಗೌರವ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ‘ವಂದೇ ಮಾತರಂ’ ಗೀತೆಗೂ ವಿಸ್ತರಿಸಿ, ಗೀತೆಯ 6 ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ರಾಜ್ಯದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸ್ವರೂಪ, ಏಕರೂಪತೆ, ಗೌರವ ಹಾಗೂ ಸೂಕ್ತ ಶಿಷ್ಟಾಚಾರವನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಪರಿಷ್ಕೃತ ತೀರ್ಮಾನ ಕೈಗೊಂಡಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ದೇಶಭಕ್ತಿ ಮೂಡಿಸಿದ ಈ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯದ ಸಂದರ್ಭಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕಾಂಗ್ರೆಸ್ ಪಕ್ಷದ ಐತಿಹಾಸಿಕ ನಿಲುವು ರಾಜ್ಯ ಸರ್ಕಾರದ ಈ ನಿರ್ಧಾರದ ಹಿಂದೆ ಕಾಂಗ್ರೆಸ್ ಪಕ್ಷದ ಸುದೀರ್ಘ ರಾಜಕೀಯ ನಿಲುವು ಅಡಗಿದೆ. 1937ರ ಕಾಂಗ್ರೆಸ್ ಪ್ರಣಾಳಿಕೆಯಂತೆ, ಕೋಮು ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಏಕರೂಪತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡುವ ತೀರ್ಮಾನಕ್ಕೆ ಪಕ್ಷವು ಹಿಂದಿನಿಂದಲೂ ಬದ್ಧವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ 88 ಹಿರಿಯ ನಾಯಕರು ಭಾಗವಹಿಸಿದ್ದ ಇತ್ತೀಚಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಇದೇ ನಿರ್ಧಾರವನ್ನು ದೃಢಪಡಿಸಲಾಗಿತ್ತು.

Leave a Reply

Your email address will not be published. Required fields are marked *