IPL 2023: KKR ವಿರುದ್ಧದ ಪಂದ್ಯಕ್ಕೂ RCB ತಂಡ ಮೂವರು ಅಲಭ್ಯ..!

RCB vs KKR: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್​ನ 9ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಪರ ಮೂವರು ಆಟಗಾರರು ಅಲಭ್ಯರಾಗಿದ್ದಾರೆ.ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದ ವೇಗಿ ರೀಸ್ ಟೋಪ್ಲಿ 2ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಟೋಪ್ಲಿ ವಿಶ್ರಾಂತಿಯ ಕಾರಣ ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.ಇನ್ನು ಆರ್​ಸಿಬಿ ತಂಡದಲ್ಲಿರುವ ಶ್ರೀಲಂಕಾ ಸ್ಪಿನ್ನರ್​ ವನಿಂದು ಹಸರಂಗ ಇನ್ನೂ ಕೂಡ ತಂಡವನ್ನು ಸೇರಿಕೊಂಡಿಲ್ಲ. ಹಸರಂಗ ಸದ್ಯ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುತ್ತಿದ್ದು, ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.ಹಾಗೆಯೇ ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜೋಶ್ ಹ್ಯಾಝಲ್​ವುಡ್ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರು ಆರ್​ಸಿಬಿ ತಂಡವನ್ನು ಏಪ್ರಿಲ್ 14 ರ ಬಳಿಕ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ಕೂಡ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಆಡುತ್ತಿಲ್ಲ.ಇದಲ್ಲದೆ ಆರ್​ಸಿಬಿ ತಂಡದಲ್ಲಿದ್ದ ರಜತ್ ಪಾಟಿದಾರ್ ಪಾದದ ನೋವಿನ ಸಮಸ್ಯೆಯ ಕಾರಣ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿ ಪರ ಪಾಟಿದಾರ್ ಕಣಕ್ಕಿಳಿಯುವುದಿಲ್ಲ. ಅಲ್ಲದೆ ರಜತ್ ಪಾಟಿದಾರ್ ಅವರ ಬದಲಿ ಆಟಗಾರನನ್ನು ಆರ್​ಸಿಬಿ ಇನ್ನಷ್ಟೇ ಆಯ್ಕೆ ಮಾಡಬೇಕಿದೆ.ಒಟ್ಟಿನಲ್ಲಿ ಪ್ರಸ್ತುತ ಆರ್​ಸಿಬಿ ತಂಡದಲ್ಲಿರುವ ಮೂವರು ಆಟಗಾರರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದು, ಇದಾಗ್ಯೂ ಬಲಿಷ್ಠ ಪಡೆಯನ್ನೇ ಹೊಂದಿರುವ ಆರ್​ಸಿಬಿ ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.RCB ತಂಡದ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ , ಮೈಕಲ್ ಬ್ರೇಸ್‌ವೆಲ್ , ಶಹಬಾಜ್ ಅಹ್ಮದ್ , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) , ಕರ್ಣ್ ಶರ್ಮಾ , ಹರ್ಷಲ್ ಪಟೇಲ್ , ಆಕಾಶ್ ದೀಪ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.

source https://tv9kannada.com/sports/ipl-2023-rcb-players-unavailable-for-kkr-match-kannada-news-zp-au50-549949.html

Leave a Reply

Your email address will not be published. Required fields are marked *