IND vs BAN 2nd Test: ಭಾರತ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲಿ ಆರ್. ಅಶ್ವಿನ್ ಏನು ಮಾಡಿದ್ರು ನೋಡಿ

R Ashwin IND vs BAN 2nd Test

ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ಪ್ರವಾಸವನ್ನು ಅದ್ಭುತವಾಗಿ ಮುಗಿಸಿದೆ. ಏಕದಿನ ಸರಣಿಯನ್ನು ಕಳೆದುಕೊಂಡರೂ ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿತು. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಬಾಂಗ್ಲಾ ನೀಡಿದ್ದ 145 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರವಿಚಂದ್ರನ್ ಅಶ್ವಿನ್ (R Ashwin) ಎಚ್ಚರಿಕೆಯ ಜೊತೆಯಾಟ ಆಡಿ ತಂಡಕ್ಕೆ ಆಧಾರವಾಗಿ ನಿಂತು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಆರ್. ಅಶ್ವಿನ್ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಮೈದಾನದಲ್ಲಿ ಜಿಗಿದು ವಿಶೇಷವಾಗಿ ಸಂಭ್ರಮ ಪಟ್ಟರು. ಗೆಲುವಿಗೆ 4 ರನ್ ಬೇಕಾಗಿದ್ದಾಗ ಫೋರ್ ಬಾರಿಸಿದ ಇವರು, ಚೆಂಡು ಬೌಂಡರಿ ಗೆರೆ ತಲುಪುತ್ತಿದ್ದಂತೆ ಓಡುತ್ತಲೇ ಮೇಲೆ ಹಾರಿ ಖುಷಿ ವ್ಯಕ್ತಪಡಿಸಿದರು. ಅತ್ತ ಭಾರತದ ಡ್ರೆಸ್ಸಿಂಗ್ ರೂಮ್ ಕೂಡ ಗೆಲುವಿಗೆ ಕಾದು ಕುಳಿತಿತ್ತು. ಜಯ ಸಾಧಿಸುತ್ತಿದ್ದಂತೆ ಕೋಚ್ ರಾಹುಲ್ ದ್ರವಿಡ್, ನಾಯಕ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಕೂತಲ್ಲಿಂದ ಎದ್ದು ಸಂಭ್ರಮಾಚರಣೆ ಮಾಡಿದರು. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ.

ದಾಖಲೆ ಸೃಷ್ಟಿಸಿದ ಆರ್. ಅಶ್ವಿನ್:

ಶ್ರೇಯಸ್ ಅಯ್ಯರ್ ಜೊತೆಗೂಡಿದ ಅಶ್ವಿನ್ ಅಜೇಯ 42 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಈ ಮೂಲಕ ಪಂದ್ಯಶ್ರೇಷ್ಠ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು. ಜೊತೆಗೆ ಟೆಸ್ಟ್​ ಕ್ರಿಕೆಟ್​ ವೃತ್ತಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆರ್​ ಅಶ್ವಿನ್​ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಮರಣೀಯ ಬ್ಯಾಟಿಂಗ್ ಮಾಡುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಒಟ್ಟು 3043 ರನ್ ಬಾರಿಸಿದ ಸಾಧನೆ ಮಾಡಿದರು. ಅವರ ಖಾತೆಯಲ್ಲಿ 449 ವಿಕೆಟ್​ಗಳು ಕೂಡ ಇವೆ. ಹೀಗಾಗಿ ಟೆಸ್ಟ್​ ಮಾದರಿಯಲ್ಲಿ 400ಕ್ಕಿಂತ ಅಧಿಕ ವಿಕೆಟ್​ ಹಾಗೂ 3000ಕ್ಕೂ ಹೆಚ್ಚು ರನ್​ ಬಾರಿಸಿದ ವಿಶ್ವದ ಆರನೇ ಆಟಗಾರ ಎಂಬ ಮೈಲುಗಲ್ಲು ಸೃಷ್ಟಿಸಿದರು. ಆರ್​ ಅಶ್ವಿನ್ ಅವರು 88 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

PSL ನಲ್ಲಿ ಲಕ್ಷ ಪಡೆದ ಆಟಗಾರ IPL ನಲ್ಲಿ ಕೋಟ್ಯಧಿಪತಿ

ಎರಡನೇ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಮೊದಲ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್​ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ಟೀಮ್ ಇಂಡಿಯಾ 86.3 ಓವರ್​ಗಳಲ್ಲಿ 314 ರನ್​ಗೆ ಆಲೌಟ್ ಆಯಿತು. ಪಂತ್ 105 ಎಸೆತಗಳಲ್ಲಿ 7 ಫೋರ್, 5 ಭರ್ಜರಿ ಸಿಕ್ಸರ್​ನೊಂದಿಗೆ 93 ರನ್ ಸಿಡಿಸಿ ಔಟಾದರು. ಅಯ್ಯರ್ 87 ರನ್​ ಚಚ್ಚಿದರು.

ಎರಡನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ 70.2 ಓವರ್​ಗಳಲ್ಲಿ 231 ರನ್ ಕಲೆಹಾಕಿತು. ಜಾಕಿರ್‌ ಹಸನ್‌ 135 ಎಸೆತಗಳಲ್ಲಿ 51 ರನ್ ಗಳಿಸಿದರು. ಲಿಟನ್ ದಾಸ್ ತಂಡಕ್ಕೆ ಆಧಾರವಗಿ 73 ರನ್ ಬಾರಿಸಿದರು. ಹೀಗೆ 145 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಆಸರೆಯಾಗಿದ್ದು ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 71 ರನ್​ಗಳ ಜೊತೆಯಾಟ ಆಡಿ ಕೊನೆಯವರೆಗೂ ನಿಂತು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಯ್ಯರ್ 46 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರೆ, ಅಶ್ವಿನ್ 62 ಎಸೆತಗಳಲ್ಲಿ ಅಜೇಯ 42 ರನ್ ಕಲೆಹಾಕಿದರು. ಭಾರತ 47 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/india-vs-bangladesh-second-test-watch-the-winning-moment-from-the-dramatic-game-in-dhaka-viral-video-vb-au48-490931.html

Leave a Reply

Your email address will not be published. Required fields are marked *