ನಾಯಕನಹಟ್ಟಿ ಪಟ್ಟಣದ ಸಮೀಪವಿರುವ ಹಿರಿ ಕೆರೆಯಲ್ಲಿ ಗುರುವಾರ ಮಳೆಗಾಗಿ ಪ್ರಾರ್ಥಿಸಿ, ಗಂಗಾ ಪೂಜೆ ಮಾಡಲಾಯಿತು. ತಿಪ್ಪೇರುದ್ರಸ್ವಾಮಿ ದೇವಾಲಯದ ಅಲಂಕೃತ ಪಟ್ಟದ ಬಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ದೇವಾಲಯದ ಮಂಗಳವಾದ್ಯಗಳು ಮಹಿಳೆಯರು ಹಾಗೂ ಭಕ್ತಾದಿಗಳು ದೇವಾಲಯದಿಂದ ಆರು ಕಿಲೋಮೀಟರ್ ದೂರವಿರುವ ಹಿರೇ ಕೆರೆಗೆ ಮೆರವಣಿಗೆಯಲ್ಲಿ ಸಾಗಿದರು. ದೇವಾಲಯ ಅರ್ಚಕರು ಹಾಗೂ ಪುರೋಹಿತರು ಬಸವಣ್ಣನಿಗೆ ಕೆರೆಯ ನೀರಿನಿಂದ 108 ಕುಂಭಗಳ ಜಲದಿಂದ ಬಿಲ್ವಾರ್ಚನೆ ಹಾಗೂ ಅಭಿಷೇಕ ನೆರವೇರಿಸಿದರು. ಉತ್ತಮವಾಗಿ ಮಳೆ ಬಂದು ಚಿಕ್ಕಕೆರೆ ಹಾಗೂ ದೊಡ್ಡ ಕೆರೆ ತುಂಬಲಿ ಎಂದು ಭಕ್ತಾದಿಗಳು ವಿಶೇಷ ಪೂಜೆ ನೆರವೇರಿಸಿದರು. ದೇವಾಲಯದ ಸಿಬ್ಬಂದಿ ಸತೀಶ್ ಧರ್ಮ ಕಾರ್ಯಕರ್ತರಾದ ದಳವಾಯಿ ರುದ್ರಮುನಿ, ಶಿವು ಮತ್ತಿತರರು ಇದ್ದರು.