La Liga Clash: ಫುಟ್​ಬಾಲ್ ಆಟಗಾರರ ನಡುವೆ ಮೈದಾನದಲ್ಲೇ ಜಂಗೀಕುಸ್ತಿ

Ferran Torres - Stefan Savic Fight

La Liga 2023: ಲಾ ಲೀಗಾ ಫುಟ್​ಬಾಲ್ ಲೀಗ್​ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್  ಹಾಗೂ ಬಾರ್ಸಿಲೋನಾ (Atletico Madrid-Barcelona) ಆಟಗಾರರು ಮೈದಾನದಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ಕಂಡು ಬಂತು. ಅತ್ತ 1-0 ಅಂತರದಿಂದ ಮುನ್ನಡೆ ಹೊಂದಿದ್ದ ಬಾರ್ಸಿಲೋನಾ ತಂಡವು ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುವಲ್ಲಿ ಮುನ್ನಡೆದರೆ, ಇತ್ತ ಅಂತಿಮ ಹಂತದಲ್ಲಿ ಅಟ್ಲೆಟಿಕೊ ಆಟಗಾರರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು.

ಈ ಜಿದ್ದಾಜಿದ್ದಿನ ಹೋರಾಟದ ನಡುವೆ ಫೆರಾನ್ ಟೊರೆಸ್ ಹಾಗೂ ಸ್ಟೀಫನ್ ಸಾವಿಚ್ ಕುಸ್ತಿಯಲ್ಲಿ ತೊಡಗಿಸಿಕೊಂಡ ವಿಲಕ್ಷಣ ಘಟನೆ ಕೂಡ ನಡೆಯಿತು. ಪಂದ್ಯ 92ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಟೊರೆಸ್ ಪಾಸ್ ನೀಡುವ ಯತ್ನದಲ್ಲಿದ್ದರು. ಮತ್ತೊಂದೆಡೆಯಿಂದ ಡಿಫೆನ್ಸ್​ಗೆ ಮುಂದಾದ ಅಟ್ಲೆಟಿಕೊ ಆಟಗಾರ ಸಾವಿಚ್, ಬಾರ್ಸಿಲೋನಾ ಆಟಗಾರನನ್ನು ಬೆನ್ನು ನೀಡಿ ಬೀಳಿಸಲು ಮುಂದಾದರು.

ಇದನ್ನೂ ಓದಿ: Cristiano Ronaldo: ದಿನಕ್ಕೆ 4.8 ಕೋಟಿ ರೂ: 5ನೇ ಕ್ಲಬ್ ಪರ ಕಣಕ್ಕಿಳಿಯಲಿರುವ ಕ್ರಿಸ್ಟಿಯಾನೊ ರೊನಾಲ್ಡೊ

ಇದರಿಂದ ಕುಪಿತಗೊಂಡ ಟೊರೆಸ್ ಮೈದಾನದಲ್ಲೇ ಸಾವಿಚ್ ಜೊತೆ ಕಿತ್ತಾಟಕ್ಕೆ ಇಳಿದರು. ಒಂದೆಡೆ ಪಂದ್ಯ ಮುಂದುವರೆಯುತ್ತಿದ್ದರೂ, ಇಬ್ಬರು ಆಟಗಾರರು ಮಾತ್ರ ಜಂಗೀಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ಕ್ರೀಡಾಸ್ಪೂರ್ತಿ ಮೆರೆತು ಮೈದಾನದಲ್ಲಿ ಕಿತ್ತಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಮ್ಯಾಚ್ ರೆಫ್ರಿ ಇಬ್ಬರಿಗೂ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಇದೀಗ ಟೊರೆಸ್ ಹಾಗೂ ಸಾವಿಚ್​ರ ಜಂಗೀಕುಸ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರೀಡಾಸ್ಪೂರ್ತಿ ಮರೆತ ಇಬ್ಬರ ನಡೆಗೆ ಫುಟ್​ಬಾಲ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯದದ 22ನೇ ನಿಮಿಷಯದಲ್ಲಿ ಉಸ್ಮಾನೆ ಡೆಂಬೆಲೆ ಬಾರಿಸಿದ ಗೋಲಿನಿಂದ ಬಾರ್ಸಿಲೋನಾ ತಂಡವು 1-0 ಅಂತರದಿಂದ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು ಸೋಲಿಸಿತು. ಅಲ್ಲದೆ ಪ್ರಸ್ತುತ ಲಾ ಲೀಗಾದ ಪಾಯಿಂಟ್ ಟೇಬಲ್​ನಲ್ಲಿ ಬಾರ್ಸಿಲೋನಾ ಅಗ್ರಸ್ಥಾನಕ್ಕೇರಿದೆ.

 

 

 

source https://tv9kannada.com/sports/ferran-torres-stefan-savic-shown-red-cards-after-being-involved-in-ugly-fight-kannada-news-zp-au50-498154.html

Leave a Reply

Your email address will not be published. Required fields are marked *