ಗೂಡ್ಸ್ ವಾಹನ ಅಪಘಾತದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್ ಚಾಲಕನ ಎದೆಗೆ ಹೊಕ್ಕಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ: ಭೀಕರ ಅಪಘಾತವೊಂದರಲ್ಲಿ ಲಾರಿ ಚಾಲಕನ ಎದೆಗೆ ಕಬ್ಬಿಣದ ಪೈಪ್ ಹೊಕ್ಕ ಘಟನೆ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರೋಡ್ಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್ ಚಾಲಕನ ಎದೆಗೆ ಹೊಕ್ಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಗ್ನಿಶಾಮಕದಳದ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸಪಟ್ಟರು. ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣದ ಪೈಪ್ನ್ನು ತುಂಡರಿಸಿ, ಎದೆಯಲ್ಲಿ ಸಿಕ್ಕಿರುವ ಕಬ್ಬಿಣದ ಪೈಪ್ನೊಂದಿಗೆ ಲಾರಿ ಚಾಲಕನನ್ನು ಕಳುಹಿಸಲಾಯಿತು.
ಎದೆಯಲ್ಲಿ ಸಿಕ್ಕಿ ಹಾಕಿಕೊಂಡ ಕಬ್ಬಿಣದ ಪೈಪ್ ಕಂಡು ಎಲ್ಲರೂ ದಂಗಾಗಿದ್ದರು. 27 ವರ್ಷದ ಚಾಲಕ ಶಿವಾನಂದ ಬಡಗಿ ಎದೆಗೆ ಕಬ್ಬಿಣದ ಪೈಪ್ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ರವಾನಿಸಲು ಸಹಕರಿಸಿದ್ದಾನೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.