‘ನಿಲ್ಲಿ, ಯೋಚಿಸಿ, ಮುಂದುವರಿಯಿರಿ’: ಡಿಜಿಟಲ್‌ ಅರೆಸ್ಟ್​ ತಡೆಗೆ ಪ್ರಧಾನಿ ಮೋದಿ 3 ಸೂತ್ರ.

ನವದೆಹಲಿ: ಆಧುನಿಕ ಯುಗದಲ್ಲಿ ಡಿಜಿಟಲ್​ ವಂಚನೆಗಳು ಹೆಚ್ಚುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆ, ಜಾಗೃತಿ ಅಗತ್ಯ. ಡಿಜಿಟಲ್​ ಅರೆಸ್ಟ್​ನಿಂದ ತಪ್ಪಿಸಿಕೊಳ್ಳಲು ನಾವು ‘ನಿಲ್ಲಿ, ಯೋಚಿಸಿ, ಮುಂದುವರಿಯಿರಿ’ (stop, think and take action) ಎಂಬ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್​​ ಕಿ ಬಾತ್​ನ 115ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಸೈಬರ್​ ಅಪರಾಧಗಳು ಸಮಾಜದ ಎಲ್ಲ ವರ್ಗದವರನ್ನು ಸಂಕಷ್ಟಕ್ಕೀಡು ಮಾಡಿವೆ. ತನಿಖಾ ಸಂಸ್ಥೆಗಳು ಡಿಜಿಟಲ್​ ವಂಚನೆ ವಿರುದ್ಧ ಹೋರಾಟ ನಡೆಸುತ್ತಿವೆ. ಆದರೆ, ಈ ಮೋಸದ ಜಾಲದಿಂದ ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಜಾಗೃತರಾಗಿರಬೇಕು. ಯಾವುದೇ ತನಿಖಾ ಸಂಸ್ಥೆಗಳು ವಿಚಾರಣೆಗಾಗಿ ಫೋನ್ ಅಥವಾ ವಿಡಿಯೋ ಕಾಲ್​ ಮೂಲಕ ಯಾರನ್ನೂ ಸಂಪರ್ಕಿಸುವುದಿಲ್ಲ ಎಂದು ತಿಳಿಸಿದರು.

ಸೈಬರ್​ ವಂಚನೆ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲು- ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಎರಡನೇಯದಾಗಿ- ಭಯದ ವಾತಾವರಣ ಸೃಷ್ಟಿಸಲು ಪೊಲೀಸ್​ ಅಧಿಕಾರಿಯ ವೇಷ, ನಕಲಿ ಸರ್ಕಾರಿ ಕಚೇರಿ, ಪೊಲೀಸ್​ ಠಾಣೆಯನ್ನು ತೋರಿಸುವ ಮೂಲಕ ಹೆದರಿಸುತ್ತಾರೆ. ಮೂರನೇಯದಾಗಿ- ಬಳಿಕ ಮಾನಸಿಕ ಒತ್ತಡ ಹಾಕಿ ನಿಮ್ಮನ್ನು ವಂಚನೆಗೆ ಗುರಿ ಮಾಡುತ್ತಾರೆ ಎಂದು ಪ್ರಧಾನಿ ವಿವರಿಸಿದರು.

ಹೀಗಾಗಿ ನೀವು ತಾಳ್ಮೆಯಿಂದ ವಿದ್ಯಮಾನವನ್ನು ಗಮನಿಸಿ, ಬುದ್ಧಿವಂತಿಕೆಯಿಂದ ಅಂಥವರನ್ನು ನಿರ್ವಹಿಸಬೇಕು. ಅವರ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಕು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ, ರಾಷ್ಟ್ರೀಯ ಸೈಬರ್ ಸಹಾಯವಾಣಿಯಾದ 1930 ಡಯಲ್ ಮಾಡಲು ಅಥವಾ ಸೈಬರ್​​ ಪೋರ್ಟಲ್‌, ಪೊಲೀಸರಿಗೆ ದೂರು ನೀಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ಮೇಡ್​​ ಇನ್​ ಇಂಡಿಯಾ, ಮೇಡ್​ ಬೈ ಇಂಡಿಯನ್ಸ್​: ಇದಲ್ಲದೇ, ಆತ್ಮನಿರ್ಭರ ಭಾರತದ ಬಗ್ಗೆಯೂ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ನಾವೀನ್ಯತೆಯ ಜಾಗತಿಕ ಶಕ್ತಿ ಕೇಂದ್ರವಾಗಿ ನಮ್ಮ ದೇಶವನ್ನು ರೂಪಿಸುವ ಅಗತ್ಯವಿದೆ. ಹೀಗಾಗಿ ಮೇಕ್​ ಇನ್​ ಇಂಡಿಯಾ, ಮೇಡ್​ ಬೈ ಇಂಡಿಯನ್ಸ್​ ಅಭಿಯಾನ ಮಹತ್ವದ್ದಾಗಿದೆ ಎಂದರು.

ಅನಿಮೇಷನ್ ಕ್ಷೇತ್ರದಲ್ಲಿ ಭಾರತೀಯ ಪ್ರತಿಭೆಗಳು ಮಿಂಚುತ್ತಿದ್ದಾರೆ. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಈ ಕ್ಷೇತ್ರದಲ್ಲಿ ಮೇಡ್ ಬೈ ಇಂಡಿಯಾ ಹೆಚ್ಚು ಪ್ರಕಾಶಿಸುತ್ತಿದೆ. ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪಟ್ಲು ಮುಂತಾದ ಭಾರತೀಯ ಅನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಈ ಸೃಜನಶೀಲತೆಯನ್ನು ಜಗತ್ತೇ ಇಷ್ಟಪಡುತ್ತಿದೆ ಎಂದು ಹೇಳಿದರು.

ಮನ್​ ಕಿ ಬಾತ್‌ಗೆ ದಶಕದ ಸಂಭ್ರಮ: ಮನ್​ ಕಿ ಬಾತ್ 10 ವರ್ಷಗಳನ್ನು ಪೂರೈಸಿದೆ. ಈ ಕಾರ್ಯಕ್ರಮವನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಹಾಗೂ 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆಲ್ ಇಂಡಿಯಾ ರೇಡಿಯೋದ 500ಕ್ಕೂ ಹೆಚ್ಚು ಕೇಂದ್ರಗಳಿಂದಲೂ ಪ್ರಸಾರ ಮಾಡಲಾಗುತ್ತದೆ.

Source : https://www.etvbharat.com/kn/!bharat/pm-modi-on-115th-episode-of-his-monthly-radio-program-mann-ki-baat-karnataka-news-kas24102701889

Leave a Reply

Your email address will not be published. Required fields are marked *