ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ.

ಚಿಕ್ಕಮಗಳೂರು: ಚಾರಣಕ್ಕೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ (Mudigere) ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ನಡೆದಿದೆ.

ಚಿತ್ರದುರ್ಗದ (Chitradurga) ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದು, ಡ್ರೈವರ್ ಸೇರಿ 11 ಜನ ಚಾರಣಕ್ಕೆ ಹೊರಟಿದ್ದರು. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾದಲ್ಲಿ ಟಿಕೆಟ್ ಬುಕ್ ಮಾಡಿಸಿ ದಾರಿ ತಿಳಿಯದೆ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದರು. 

ಕಾಡಿನಲ್ಲಿ ದಾರಿ ತಪ್ಪಿ ಇಡೀ ಕಾಡು ಸುತ್ತಿ ವಿದ್ಯಾರ್ಥಿಗಳು ನಿತ್ರಾಣಗೊಂಡಿದ್ದರು. ವಿಷಯ ತಿಳಿದ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಸಂಜೆಯಿಂದ ಮಧ್ಯರಾತ್ರಿಯ 2 ಗಂಟೆವರೆಗೂ ಕಗ್ಗತ್ತಲಿನ ಕಾಡಿನಲ್ಲಿ ಕಲ್ಲು-ಮುಳ್ಳುಗಳ ದುರ್ಗಮ ಹಾದಿಯಲ್ಲಿ 11 ಜನ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. 

ಬಾಳೂರು ಪೊಲೀಸರ (Baluru Police) ಜೊತೆ ಮೂಡಿಗೆರೆ ಸ್ಥಳೀಯ ಯುವಕರು ಹುಡುಕಾಟಕ್ಕೆ ಕೈ ಜೋಡಿಸಿದ್ದರು. ನಿರಂತರ 6 ಗಂಟೆಗಳ ಹುಡುಕಾಟದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಡ್ರೈವರ್ ಸೇರಿ 11 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸಿಕ್ಕಿದ್ದಾರೆ.

ಪೊಲೀಸರು ಅವರನ್ನು ಗುಡ್ಡದಿಂದ ಕೆಳಗಡೆ ಕರೆತಂದು ನಿತ್ರಾಣಗೊಂಡಿದ್ದವರಿಗೆ ಊಟ ಮಾಡಿಸಿ, ವಾಪಸ್ ಚಿತ್ರದುರ್ಗಕ್ಕೆ ಕಳುಹಿಸಿದ್ದಾರೆ. ಬಾಳೂರು ಪಿಎಸ್‌ಐ ದಿಲೀಪ್ ಹಾಗೂ ಯುವಕರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Public TV

Leave a Reply

Your email address will not be published. Required fields are marked *