
ಮಾದಕ ವಸ್ತುಗಳು (narcotics) ಅದಕ್ಕೆ ದಾಸನಾಗಿರುವ ವ್ಯಕ್ತಿಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಇದರ ಬಗ್ಗೆ ತಿಳಿದಿದ್ದರೂ ಹೆಚ್ಚಾಗಿ ಯುವ ಜನರೇ ಮಾದಕ ವ್ಯಸನದ ಅಮಲಿನಲ್ಲಿ ತೇಲುತ್ತಿದ್ದಾರೆ.
ಡ್ರಗ್ಸ್ ಇತ್ಯಾದಿ ಮಾದಕ ವಸ್ತುಗಳಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಜೊತೆಗೆ ಈ ವ್ಯಸನವು ಅವರ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತಿದೆ. ಇದರ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡು ಮಾದಕ ವಸ್ತು ಮುಕ್ತ ಜಗತ್ತನ್ನು ನಿರ್ಮಿಸಬೇಕು, ಮಾದಕ ವಸ್ತುಗಳ ಕಳ್ಳಸಾಗಾಣಿಕೆಯನ್ನು ತಡೆಯಬೇಕು, ಇದರ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ (International Day Against Drug Abuse) ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಇತಿಹಾಸ:
ಪ್ರತಿ ವರ್ಷ ಜೂನ್ 26 ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 7, 1987 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ನಿರ್ದಿಷ್ಟ ಆಚರಣೆಯನ್ನು ಜಾರಿಗೆ ತರಬೇಕು ಎಂದು ಒಂದು ನಿರ್ಣಯವನ್ನು ಅಂಗೀಕರಿಸಿತು. ಆ ಬಳಿಕ ಈ ದಿನವನ್ನು ಮೊದಲು 1989 ರಲ್ಲಿ ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಮಹತ್ವ:
ಈ ವ್ಯಸನವು ಎನ್ನುವಂತಹದ್ದು,ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ಜನರು ಮಾದಕ ವಸ್ತುಗಳು ವ್ಯಸನಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು . ಈ ದಿನದ ಪ್ರಮುಖ ಉದ್ದೇಶ ಜನರನ್ನು ಮಾದಕ ವಸ್ತುಗಳಿಂದ ದೂರವಿಡುವುದು ಮತ್ತು ಮಾದಕ ವಸ್ತು ಕಳ್ಳಸಾಗಣೆ ತಡೆಯುವುದು. ಈ ಕ್ರಮವು ಮಕ್ಕಳು ಮತ್ತು ಯುವ ಜನರ ಭವಿಷ್ಯವನ್ನು ಉಜ್ವಲವಾಗಿಸುಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಈ ದಿನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಇದರಲ್ಲಿ ಜನರಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
Views: 5