ದಿನಾಂಕ 31.8.2025 ರಂದು ಮಾನಂದವಾಡಿ ರಸ್ತೆಯಲ್ಲಿರುವ ಎನ್‌ಐಇ ಕಾಲೇಜಿನ ಮುಂಭಾಗದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಅಂಗವಾಗಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ಶೋಷಣೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.

ಜಾಗೃತಿ ಕಾರ್ಯಕ್ರಮಕ್ಕೆ ಬೆಂಗಳೂರು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ ರಾಮರಾವ್ ಚಾಲನೆ ನೀಡಿದರು. ನಂತರ ಆರ್‌ಎಲ್ ಎಚ್ ಪಿ ಸಂಸ್ಥೆಯ ಮಕ್ಕಳು ವಿವಿಧ ಬಿತ್ತಿ ಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಪ್ರೊ.ಆರ್. ఇందిరా ರಾಮರಾವ್ ಅವರು, ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಾನಾ ರೀತಿಯ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಇದರ ವಿರುದ್ಧ ಯುವಜನರು ಧ್ವನಿಯೆತ್ತ ಬೇಕು. ಸಮಾಜದಲ್ಲಿ ಎಲ್ಲ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುವ ನಿಟ್ಟಿನಲ್ಲಿ ಯುವ ಜನರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.
ಕೌಟುಂಬಿಕ ದೌರ್ಜನ್ಯ, ಮೂಢನಂಬಿಕೆಗಳು, ಲಿಂಗ ತಾರತಮ್ಯ, ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜ ನ್ಯ.. ಹೀಗೆ ಸಮಾಜದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿದಿನ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ, ಹಿಂಸೆಗೆ ಒಳಗಾಗುತ್ತಿದ್ದಾರೆ. ಇದರ ವಿರುದ್ಧ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ವಿಸ್ತರಣಾಧಿಕಾರಿ ಕೆ.ಶಿಲ್ಪಾ, ರೋಟರಿ ಸೆಂಟ್ರಲ್ ಅಧ್ಯಕ್ಷ ಅಂಥೋಣಿ ಮೋಸೆಸ್, ಕಾರ್ಯದರ್ಶಿ ಜ್ಯೋತಿ ಅಶೋಕ್, ಆರ್‌ಎಲ್‌ಎಚ್‌ಪಿ ಕಾರ್ಯದರ್ಶಿ ಪ್ರೊ.ವಿ.ಕೆ.ಜೋಸ್, ನಿರ್ದೇಶಕರಾದ ಕೆ.ಸರಸ್ವತಿ ಮತ್ತಿತರರು ಹಾಜರಿದ್ದರು.