ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಜಯದೇವ ಹೃದ್ರೋಗ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ ಸ್ಥಾಪನೆಗೆ ಆಗ್ರಹ.

ಚಿತ್ರದುರ್ಗ ಆ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ ಪ್ರಾರಂಭಿಸುವಂತೆ ಆಗ್ರಹಿಸಿ ಚಿತ್ರದುರ್ಗದ ಸಾಹಿತಿಗಳು, ರೈತ ಮುಖಂಡರು, ನಿವೃತ್ತ ಪ್ರಾಧ್ಯಾಪಕರುಗಳು, ಅಧಿಕಾರಿಗಳು, ವಿದ್ವಾಂಸರುಗಳು ಸಮಿತಿಯನ್ನು ನಿರ್ಮಾಣ ಮಾಡಿಕೊಂಡು ಜಿಲ್ಲಾ ಉಸ್ತವಾರಿ ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‍ಆರ್. ಪಾಟೀಲ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಎಸ್. ರವೀಂದ್ರನಾಥ್ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರಾದ ಡಾ. ನವೀನ್. ಟಿ. ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ. ಯುವರಾಜ್ ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯು ಬಯಲುಸೀಮೆಯ ಬರದ ನಾಡು ಎಂಬ ಹಣೆ ಪಟ್ಟಿಯಿಂದ ಇಂದಿಗೂ ಮುಕ್ತವಾಗಿಲ್ಲ, ಮಧ್ಯಕರ್ನಾಟಕದಲ್ಲಿರುವ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸಾ ಸೌಲಭ್ಯಗಳು ಇರುವುದಿಲ್ಲ. ಆದ್ದರಿಂದ ವರ್ಷದಲ್ಲಿ ಸಾವಿರಾರು ಜನರು ಸಾವು ನೋವುಗಳಿಂದ ನಲುಗುತ್ತಿದ್ದಾರೆ. ನಿರುದ್ಯೋಗ ಮತ್ತು ಬಡತನಗಳಿಂದ ಜೀವನ ಮಾಡುವುದೇ ಕಷ್ಟಕರವಾಗಿರುವಾಗ ಬಹು ದೂರದ ನಗರಗಳಿಗೆ ಹೋಗಿ ಹೆಚ್ಚಿನ ಶುಲ್ಕವನ್ನು ಭರಿಸಿ ಈ ಎರಡು ಮಾರಾಣಾಂತಿಕ ರೋಗಗಳಿಂದ ಮುಕ್ತವಾಗುವುದು ಕಷ್ಟಕರವಾಗಿದೆ.

ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರದವತಿಯಿಂದ ಚಿತ್ರದುರ್ಗದಲ್ಲಿ ಈಗಾಗಲೇ ಆರಂಭವಾಗಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ ಸ್ಥಾಪಿಸುವುದರಿಂದ ಕಡಿಮೆ ವೆಚ್ಚದಲ್ಲಿ ಸಕಾಲಕ್ಕೆ ಚಿಕಿತ್ಸಾ ಸೌಲಭ್ಯ ದೊರೆಯಲು ಸಾಧ್ಯವಾಗುತ್ತದೆ. ಮತ್ತು ಈ ಘಟಕಗಳನ್ನು ಆರಂಭಿಸುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಬೋಧನಾ ಸೌಲಭ್ಯ ಕೂಡ ಲಭ್ಯವಾಗುತ್ತದೆ. ಈ ಎರಡು ಘಟಕಗಳ ರೋಗ ತಪಾಸಣಾ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಮತ್ತು ಮೊದಲಾದ ಸೌಲಭ್ಯಗಳು ಅಭಿವೃದ್ಧಿಗೊಳ್ಳುತ್ತವೆ.

ಮುಖ್ಯವಾಗಿ ಸಕಾಲಕ್ಕೆ ಕೈಗೆಟಕುವ ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳು ದೊರೆತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ. ಜಿಲ್ಲೆಯ ಶ್ರೀ ಜಯದೇವ ಜಗದ್ಗುರುಗಳು ಪೀಠಾಧ್ಯಕ್ಷರಾಗಿದ್ದಾಗ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಮೈಸೂರಿನ ವೈದ್ಯಕೀಯ ಕಾಲೇಜು ಮೊದಲಾದವುಗಳಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿರುವ ಉದಾಹರಣೆಗಳು ಇವೆ. ಈ ಎಲ್ಲಾ ಮಾಹಿತಿಯನ್ನು ಗಮನಿಸಿ ಚಿತ್ರದುರ್ಗ ಜಿಲ್ಲೆಯ ಗಣ್ಯರು, ರೈತರು, ವಿದ್ವಾಂಸರು, ವೈದ್ಯರು, ಸಮಾನ ಮನಸ್ಕರು ಈ ಎರಡು ಘಟಕಗಳನ್ನು ಸ್ಥಾಪನೆ ಮಾಡುವಂತೆ, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ|ಕೆ.ಎಸ್. ರವೀಂದ್ರನಾಥ್ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರಾದ ಡಾ|| ನವೀನ್ ಟಿ.ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಶರಣಪ್ರಕಾಶ್ ಆರ್.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲೆಯ ಎಲ್ಲಾ ವಿಧಾನಸಭೆಯ ಸದಸ್ಯರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಯೋಜನೆಯ ಸಭೆಯಲ್ಲಿ ಈ ಮನವಿಯನ್ನು ಪುರಸ್ಕರಿಸಿ, ನಿರ್ಣಯ ಮಾಡಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡುವ ಕ್ರಮವಹಿಸಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್‍ರವರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದಾಗ, ಈ ಎರಡು ಘಟಕಗಳಿಗೆ ಬೇಕಾದ ಅನುದಾನವನ್ನು ಬಜಟ್‍ನಲ್ಲಿ ಸೇರ್ಪಡೆ ಮಾಡಲಾಗುವುದೆಂದು ಭರವಸೆಯನ್ನು ನೀಡಿರುತ್ತಾರೆ.

ಚಿತ್ರದುರ್ಗದ ವೈದ್ಯಕೀಯ ಮಹಾವಿದ್ಯಾಲಯದ ಡೀನ್‍ರವರಾದ ಡಾ||ಯುವರಾಜ್‍ರವರು ಕೂಡ ಇದರಿಂದಾಗುವ ಚಿಕಿತ್ಸಾ ಮತ್ತು ಶೈಕ್ಷಣಿಕ ಅನುಕೂಲಗಳನ್ನು ಗಮನಿಸಿ ಪ್ರಸ್ತಾವನೆಯನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಿರುತ್ತಾರೆ. ಇದು ಇಷ್ಟಕ್ಕೆ ನಿಲ್ಲದೇ, ಪೂರ್ಣ ಪ್ರಮಾಣದಲ್ಲಿ ಈ ಘಟಕಗಳು ಆರಂಭವಾಗುವವರೆಗೂ ಸಕ್ರಿಯವಾಗಿ ಒತ್ತಡವನ್ನು ಹಾಕಲು ಜಿಲ್ಲೆಯ ಹಲವಾರು ಸಂಘ, ಸಂಸ್ಥೆಗಳು, ರಾಜಕೀಯ ಗಣ್ಯರು ಸಂಘಟನೆಗಳು ಮುಂದಾಗಲು ವಿನಂತಿ ಮಾಡಲಾಗಿದೆ.

ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಡಾ.ಸಿ.ಶಿವಲಿಂಗಪ್ಪ ಮೀರಸಾಬಿಹಳ್ಳಿ, ರೈತ ಸಂಘದ ಮುಖಂಡರಾದ ಕಸವನಹಳ್ಳಿ ರಮೇಶ್, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸಿ.ವೀರಣ್ಣ, ಪ್ರೊ.ಎಂ. ಶಿವಲಿಂಗಪ್ಪ, ಪ್ರೊ. ಸಿ. ಬಸವರಾಜು, ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ, ಜಾನಪದ ವಿದ್ವಾಂಸರಾದ ಡಾ.ಮೀರಸಾಬೀಹಳ್ಳಿ ಶಿವಣ್ಣ, ಪಶುಸಂಗೋಪನಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ.ದೊಡ್ಡ ಮಲ್ಲಯ್ಯ, ಪ್ರೊ. ಸಿ. ವೀರಾನಾಯ್ಕ,ಪ್ರೊ. ಜಿ. ಶರಣಪ್ಪರವರು ಸೇರಿದಂತೆ ಇತರರು ಚಿತ್ರದುರ್ಗದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ ಪ್ರಾರಂಭಿಸುವ ಹಿನ್ನಲೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

Leave a Reply

Your email address will not be published. Required fields are marked *