ಚಿತ್ರದುರ್ಗ ನ. 8
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಸಹಿತ ಭಾರತದಲ್ಲಿ ತನ್ನದೆಯಾದ ಛಾಪು ಮೂಡಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ವಿಭಿನ್ನ ಪ್ರಯೋಗಗಳ ಹೆಸರಲ್ಲಿ ಮತ್ತು ಅನಿಯಂತ್ರಿತ ಶಿಕ್ಷಣ ವ್ಯಾಪಾರೀಕರಣದ ದೆಸೆಯಿಂದಾಗಿ ಬಡವಾಗುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು.
ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹೊರಡಿಸಿದ ಜಂಟಿ ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೌನ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಾಂಶುಪಾಲರು, ಉಪನ್ಯಾಸಕರೊಂದಿಗೆ ಶುಕ್ರವಾರ ಸಂಜೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಕಲಿಸುವ ಉಪನ್ಯಾಸಕರ ಹಾಗೂ ಕಲಿಯುವ ವಿದ್ಯಾರ್ಥಿಗಳ ಸ್ಥಿತಿಗತಿಗಳನ್ನು ಅರಿಯದೆ ಆದೇಶಗಳನ್ನು ಜಾರಿಗೊಳಿಸುವುದರಿಂದ ಪದವಿ ಪೂರ್ವ ಕಾಲೇಜುಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪಿದೆ.ಇಲಾಖೆಯು ಉಪನ್ಯಾಸಕರನ್ನು ಹಾಗೂ ಪ್ರಾಚಾರ್ಯರನ್ನು ಸದಾ ಅನುಮಾನದಿಂದಲೇ ನೋಡಿ ಅವರ ಆತ್ಮವಿಶ್ವಾಸ ಕುಂದುವಂತೆ ಮಾಡಿದೆ.ನಮ್ಮದೇ ಕೇಡರ್ ಅಥವಾ ನಮಗಿಂತಲೂ ಕಡಿಮೆ ವಿದ್ಯಾರ್ಹತೆ ಹೊಂದಿರುವವರಿಗೆ ನಮ್ಮ ಮಾಹಿತಿ ನೀಡಬೇಕಾದ ಪರಿಸ್ಥಿತಿ ಒದಗಿದೆ. ಮೌಲ್ಯಮಾಪನ ಮಾಡಿ ತಿಂಗಳುಗಳೇ ಉರುಳಿದರೂ ಭತ್ಯೆ ಜಮೆಯಾಗುತ್ತಿಲ್ಲ. ಮುಂದೊಂದು ದಿನ ೯ ಮತ್ತು ೧೦ ನೇ ತರಗತಿಗಳಿಗೆ ಭೋದನೆ ಮಾಡುವ ಸಂದರ್ಭ ಕೂಡಾ ದೂರವಿಲ್ಲ. ಪದವಿ ಪೂರ್ವ ಇಲಾಖೆಯಲ್ಲಿ ಬಡ್ತಿ ಎಂಬುವುದು ಮರೀಚಿಕೆಯಾಗಿದೆ.ಮೂವತ್ತು ವರ್ಷಗಳಿಂದಲೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಉಪನ್ಯಾಸಕರು ಯಾವುದೇ ಬಡ್ತಿ ಹೊಂದದೆ ನಿವೃತ್ತಿಯಾಗುತ್ತಾರೆ. ಇದುವರೆಗೂ ನಮ್ಮ ಹೋರಾಟ ಆರ್ಥಿಕ ಅಸಮಾನತೆಗೆ ಸಂಬಂಧಿಸಿದ್ದರೆ ಈ ಬಾರಿಯ ಹೋರಾಟ ಇಲಾಖೆಯ ಅಸ್ಮಿತೆ ಮತ್ತು ನಮ್ಮ ಆತ್ಮ ಗೌರವಕ್ಕೆ ಸಂಬಂಧಿಸಿದುದ್ದಾಗಿದೆ. ಹೀಗಾಗಿ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಹೋರಾಟಕ್ಕೆ ಮಾನಸಿಕವಾಗಿ ಸಿದ್ದರಾಗಬೇಕಿದೆ ಎಂದು ಕರೆ ನೀಡಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪಿ.ಎಂ.ಜಿ.ರಾಜೇಶ್ ಮಾತನಾಡಿ ಸಂಖ್ಯಾಬಲವು ನಮ್ಮ ಹೋರಾಟದ ಪ್ರಮುಖ ಬೆನ್ನೆಲುಬು. ಈ ಬೆನ್ನೆಲುಬು ಗಟ್ಟಿಯಾಗಿರುವಂತೆ ನೋಡಿಕೊಳ್ಳುವ ಪ್ರಧಾನ ಪಾತ್ರ ನಿಮ್ಮದಾಗಿದೆ. ಇದು ಸಂಘಟನೆ ಕೊಡುತ್ತಿರುವ ಕರೆ ಮಾತ್ರವೆಂದು ಭಾವಿಸದೇ ನಿಮಗೆ ನೀವೇ ಕೊಡುತ್ತಿರುವ ಅಂತರಾತ್ಮದ ಕರೆಯೆಂದು ಭಾವಿಸಿಕೊಳ್ಳಬೇಕಿದೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೇಡಿಕೆ ಈಡೇರುವ ತನಕ ಅಹೋರಾತ್ರಿ ಹೋರಾಟಕ್ಕೆ ಅಣಿಯಾಗುವ ಸಂಕಲ್ಪ ನಾವುಗಳು ಮಾಡಬೇಕಿದೆ ಎಂದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾ ಅನುದಾನಿತ ಪಪೂ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ, ಖಜಾಂಚಿ ಡಾ.ಶಬ್ಬೀರ್ ಅಹಮ್ಮದ್ ಖಾನ್,ಕಾರ್ಯದರ್ಶಿ ವಸಂತಕುಮಾರ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಆರ್.ಚಂದ್ರಶೇಖರ್, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಯಾದ ಎ.ನಾಗರಾಜ್,ಪ್ರಾಂಶುಪಾಲರಾದ ಎಸ್.ದೇವೇಂದ್ರಪ್ಪ,ಕೆ.ನಾಗರಾಜ್ ಬ್ಯಾಲಾಳ್,ಡಾ.ಬಿ.ಕೃಷ್ಣಪ್ಪ, ಜಿ.ದೇವರಾಜ್, ಸಣ್ಣಪಾಲಯ್ಯ, ಉಪನ್ಯಾಸಕರಾದ ಡಾ.ತಿಪ್ಪೇಸ್ವಾಮಿ, ಎಂ.ಜೈ ಶ್ರೀನಿವಾಸ್, ಎನ್.ಸುಮ,ಆರ್.ಚಂದ್ರಿಕಾ, ರೇಣುಕಾ, ನಾಜಿಯಾತಾಜ್,ಟಿ.ಪೆನ್ನಯ್ಯ, ದೀಪಿಕಾ ವಿ.ಜೆ. ಯಶೋಧ ಆರ್.ಜ್ಯೋತಿ ಲಕ್ಷ್ಮಿ ಎಸ್.ವಿ. ಇಂದಿರಮ್ಮ, ಕೆ.ತಿಪ್ಪೇಸ್ವಾಮಿ,ಬಿ.ಸುರೇಶ್,ಸಿ.ಕಲ್ಲಪ್ಪ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಿಂದ ನೂರಾರು ಪ್ರಾಂಶುಪಾಲರು, ಉಪನ್ಯಾಸಕರು ಮೆರವಣಿಗೆಯಲ್ಲಿ ಪಾಲ್ಗೊಂಡರು