ನೀಟ್ ಹಗರಣ ಖಂಡಿಸಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮೇಣದಬತ್ತಿ ಮೆರವಣಿಗೆ: ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಆಗ್ರಹ.

ಚಿತ್ರದುರ್ಗ ಜು. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡದ ಸರ್ಕಾರ ಯಾವುದಾದರೂ ಇದ್ದರೆ ಅದು ನರೇಂದ್ರ ಮೋದಿ ಅವರ ಸರ್ಕಾರ. ನೆಹರೂ ಅವರ ಕಾಲದಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಪರಿಣಾಮ 1947ರಲ್ಲಿ 11% ಇದ್ದ ಸಾಕಷ್ರತೆ ಪ್ರಮಾಣ 76%ಗೆ ಏರಿಕೆಯಾಗಿದೆ. ಇದು ನೆಹರೂ ಅವರು ಹಾಕಿಕೊಟ್ಟ ಭದ್ರ ಬುನಾದಿ. ದೇಶದಲ್ಲಿ ವೈಜ್ಞಾನಿಕ ಶಿಕ್ಷಣ ವ್ಯವಸ್ಥೆಯನ್ನು ಹಾಕಿಕೊಡಲಾಗಿತ್ತು ಎಂದು ಮಾಜಿ ಸಂಸದ, ಅಸ್ಸಾಂ ಪ್ರದೇಶದ ಮಾಜಿ ರಾಜ್ಯಾಧ್ಯಕ್ಷ, ಏಐಸಿಸಿ ಪದಾಧಿಕಾರಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ರಿಪುಲ್ ಬೋಹರ ತಿಳಿಸಿದ್ದಾರೆ.

ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಅಮಾನುಷ ಹಲ್ಲೆಯನ್ನು ಖಂಡಿಸಿ ವಿದ್ಯಾರ್ಥಿಗಳಿಗೆ ಸ್ಥೈರ್ಯವನ್ನು ತುಂಬಿ ಅವರ ಬೆಂಬಲಕ್ಕೆ ನಾವಿದ್ದೇವೆಯೆಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಮೇಣದಬತ್ತಿ ಮೆರವಣಿಗೆಯನ್ನು ಕೈಗೊಂಡು ಸತ್ಯಾಗ್ರಹವನ್ನು ನಡೆಸಿ ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯವತಿಯಿಂದ ಹಮ್ಮಿಕೊಂಡಿದ್ದ ಮೇಣದಬತ್ತಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು 9 ವರ್ಷಗಳ ಕಾಲ ಶಿಕ್ಷಣ ಸಚಿವರಾಗಿದ್ದರು. ಆ ಸಮಯದಲ್ಲಿ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನವನ್ನು ವಿಶ್ವದರ್ಜೆಗೆ ಕೊಂಡೊಯ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ, ಜೆಎನ್ ಯು ವಿವಿಗಳನ್ನು ವಿಶ್ವ ಶ್ರೇಷ್ಠ ಮಾಡಿದ್ದರು. ಈಗ ಧರ್ಮೇಂದ್ರ ಪ್ರಧಾನ್‍ನಂತಹವರು ಈ ರಾಷ್ಟ್ರದಲ್ಲಿ ಶಿಕ್ಷಣ ಸಚಿವರಾಗಿರುವುದು ದುರಂತ ಎಂದ ಅವರು ಈಗ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಐಐಟಿ, ಐಐಎಂ, ಏಮ್ಸ್ ಸ್ಥಾಪಿಸಿ ಈ ದೇಶದ ಭವಿಷ್ಯವನ್ನು ಮಕ್ಕಳು ನಿರ್ಮಿಸಲು ಎಲ್ಲಾ ಸೌಕರ್ಯ ಕಲ್ಪಿಸಿದ್ದರು. ನಂತರದ ಸಮಯದಲ್ಲಿ ಮಹಾನ್ ಮುತ್ಸದ್ಧಿಗಳು ಶಿಕ್ಷಣ ಸಚಿವರಾಗಿದ್ದರು. ಕರ್ನಾಟಕದವರಾದ ವಿಕೆಆರ್ ವಿ ರಾವ್, ಎಸ್.ಆರ್ ಬೊಮ್ಮಾಯಿ, ಅರ್ಜುನ್ ಸಿಂಗ್ ಸೇರಿದಂತೆ ಅನೇಕರು ಅಪಾರ ಜ್ಞಾನ ಹೊಂದಿದ್ದರು. ಶಿಕ್ಷಣ ಇಲಾಖೆ ಈ ಹಿಂದೆ ಯಾರ ಕಾಲದಲ್ಲೂ ಭ್ರಷ್ಟಾಚಾರಕ್ಕೆ ಸಿಲುಕಿರಲಿಲ್ಲ. ಬಿಜೆಪಿಯ ಅವಿದ್ಯಾವಂತೆ ಸ್ಮೃತಿ ಇರಾನಿ ಕೂಡ ಶಿಕ್ಷಣ ಸಚಿವರಾಗಿದ್ದಾಗಲೂ ಭ್ರಷ್ಟಾಚಾರದ ಲೇಪ ಅವರಿಗೆ ಬಂದಿರಲಿಲ್ಲ. ವಾಜಪೇಯಿ ಅವರು, ನರಸಿಂಗ ರಾಯರು ಶಿಕ್ಷಣ ಸಚಿವರಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಈಗಲೂ 1.39 ಲಕ್ಷ ಕೋಟಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನೀಡಲಾಗಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದ ಮಹಾ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ರಾಜೀವ್ ಗಾಂಧಿ ಅವರು ಮಾಡಿದ್ದ ಮಾನವ ಸಂಪನ್ಮೂಲ ಇಲಾಖೆಯನ್ನು ಪುನಃ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದೇ ಮೋದಿ ಅವರ ಸಾಧನೆ. ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವರಾದ ಬಳಿಕ ಭ್ರಷ್ಟಾಚಾರ ಲೋಪ ಅಂಟಿಕೊಂಡಿತು. ದೇಶದ ಎಲ್ಲಾ ವಿವಿಗಳಲ್ಲಿ ನಾಗ್ಪುರ ವಿವಿ ಪ್ರೋಫೆಸರ್, ವಾಟ್ಸಪ್ ಯೂನಿವರ್ಸಿಟಿ ಪ್ರೋಫೆರ್ ಗಳನ್ನು ನೇಮಕ ಮಾಡಿ ಸಂಪೂರ್ಣವಾಗಿ ವಿವಿಗಳ ಸಾಮಥ್ರ್ಯ ಹಾಗೂ ಕುಸಿದು ಬಿದ್ದಿವೆ ಎಂದರು.

ದ್ರಾಕ್ಷರಸ ಮಂಡಳಿ ಅಧ್ಯಕ್ಷರಾದ ಯೋಗೇಶ್ ಬಾಬು ಮಾತನಾಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೊಡ್ಡ ವಿಚಾರವಲ್ಲ. ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ಮಾಡಿ, ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಇಡೀ ವಿಶ್ವಕ್ಕೆ ವಿದ್ಯಾರ್ಥಿಗಳ ಶಕ್ತಿ ಏನು ಎಂದು ಪರಿಚಯಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ 40 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಯಾವ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ? ನಾಗ್ಪುರ ವಿವಿಯಲ್ಲಿ ಕೆಲಸ ಮಾಡಿದ್ದಾರೆ ವಿನಃ ನಿಜವಾದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ, ಇವರು ಎಬಿವಿಪಿಯಿಂದ ಇಲ್ಲಿಗೆ ಬರುತ್ತಿರಲಿಲ್ಲ. ವಿದ್ಯಾರ್ಥಿ ನಾಯಕ ಎಂದು ಹೇಳಿಕೊಂಡವರಿಗೆ ವಿದ್ಯಾರ್ಥಿ ಕಷ್ಟ ಅರ್ಥವಾಗದೇ ಇರುವುದು ಹಾಸ್ಯಾಸ್ಪದ ಎಂದ ಅವರು ಪ್ರತಿಭಟನೆ ಎಂಬುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಈಗ ಆಗಿರುವ ಅನಾಹುತಗಳಿಗೆ ಪ್ರಧಾನ್ ರಾಜೀನಾಮೆ ಒಂದೇ ಪರಿಹಾರವಲ್ಲ, ರಾಹುಲ್ ಗಾಂಧಿ ಅವರು, ವಿದ್ಯಾರ್ಥಿ ಸಂಘ ಸಂಸ್ಥೆಗಳು ಇಟ್ಟಿರುವ ಎಲ್ಲಾ ಬೇಡಿಕೆ ಈಡೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ಇಂದು ರಾಜೀನಾಮೆ ನೀಡಿರುವುದು ಪ್ರಶ್ನೆ ಪತ್ರಿಕೆ ಸೋರಿಕೆ ಅನಾಹುತಕ್ಕೆ. ಈವರೆಗೂ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇದರ ವಿರುದ್ಧ ದೇಶದ ಪ್ರಜ್ಞಾವಂತ ನಾಗರಿಕರು ಹೋರಾಟ ಮಾಡಿದರು. ವಿದ್ಯಾರ್ಥಿಗಳ ಹೋರಾಟಕ್ಕೆ ಜಯವಾಗಿದೆ. ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಹೆಣ್ಣು ಮಕ್ಕಳ ಬಟ್ಟೆ ಹರಿದಿದ್ದರು. ಇದರಿಂದ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ಇದೆಲ್ಲದರಿಂದ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟಿದ್ದಾರೆ. ಧರ್ಮೇಂದ್ರ ರಾಜೀನಾಮೆ ಕೊಟ್ಟಿದ್ದರೂ ಪ್ರಧಾನ ಇನ್ನು ರಾಜೀನಾಮೆ ನೀಡಿಲ್ಲ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಗೃಹ ಸಚಿವರು ಹೊಣೆ ಹೊರಬೇಕು ಹೀಗಾಗಿ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು. 22 ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ, ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್‍ಐಆರ್ ಹಿಂಪಡೆಯಬೇಕು. ದೆಹಲಿ ಪೊಲೀಸರಿಗೆ ಎನ್‍ಎಸ್‍ಎ ಕಾಯ್ದೆಯಡಿ ಹೆಚ್ಚು ಅಧಿಕಾರ ನೀಡಿ ಯಾರನ್ನು ಬೇಕಾದರೂ ಬಂಧಿಸಬಹುದು ಎಂಬ ಹೆಚ್ಚುವರಿ ಅಧಿಕಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾರ್ಯಾದ್ಯಕ್ಷರಾದ ಹಾಲಸ್ವಾಮಿ ಮಾತನಾಡಿ, ದೇಶದ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ನೀತಿಗಳು, ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆಗಳು ಹಾಗೂ ವಿದ್ಯಾರ್ಥಿ ವಿರೋಧಿ ನಿರ್ಧಾರಗಳಿಂದ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಕೇಂದ್ರ ಸರ್ಕಾರವು ಕೇವಲ ಒಬ್ಬ ಸಚಿವರ ರಾಜೀನಾಮೆಗೆ ಸೀಮಿತವಾಗದೆ, ಶಿಕ್ಷಣ ಕ್ಷೇತ್ರದಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ವಿದ್ಯಾರ್ಥಿ ಸ್ನೇಹಿ ನೀತಿಗಳನ್ನು ಜಾರಿಗೆ ತರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಮುದಾಸಿರ್, ಖುದ್ದುಸ್, ಲಕ್ಷ್ಮೀಕಾಂತ್, ಚೋಟು, ಪ್ರಕಾಶ್ ರಾಮ ನಾಯ್ಕ್, ನಾಗರಾಜ್ ಪೈಲಟ್, ಸಾಧಿಕ್, ಉಪಾಧ್ಯಕ್ಷ ರವಿಕುಮಾರ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *