ಗ್ರಾಮೀಣ ಭಾರತದ ಅಭಿವೃದ್ಧಿಗೆ ಕೈಜೋಡಿಸಲು ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಉತ್ಸಾಹಿ ಯುವಜನರಿಗೆ ಎಸ್ಬಿಐ ಫೌಂಡೇಶನ್ ಅತ್ಯುತ್ತಮ ವೇದಿಕೆಯೊಂದನ್ನು ಕಲ್ಪಿಸಿದೆ. ಪ್ರತಿಷ್ಠಿತ ‘ಎಸ್ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್’ನ (SBI Youth for India Fellowship) 14ನೇ ಬ್ಯಾಚ್ಗೆ ಇದೀಗ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
13 ತಿಂಗಳ ಈ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಯುವಕರು, ನುರಿತ ಸರ್ಕಾರೇತರ ಸಂಸ್ಥೆಗಳ (NGO) ಜೊತೆಗೂಡಿ ದೇಶದ ವಿವಿಧ ಹಳ್ಳಿಗಳಲ್ಲಿ ನೇರವಾಗಿ ಕೆಲಸ ಮಾಡಲಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಗ್ರಾಮೀಣ ಉದ್ಯಮಶೀಲತೆ ಮತ್ತು ಜೀವನೋಪಾಯ ಸೇರಿದಂತೆ 12 ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇದಾಗಿದೆ. ಇದು ಕೇವಲ ಸಮಾಜ ಸೇವೆಯಲ್ಲ; ಬದಲಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಮತ್ತು ತಳಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುವ ವಿಶಿಷ್ಟ ಅನುಭವವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು):
- ವಯೋಮಿತಿ: 21 ರಿಂದ 32 ವರ್ಷದೊಳಗಿನ ಯುವಕರು.
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (ಅಕ್ಟೋಬರ್ 1, 2026ರೊಳಗೆ ಪದವಿ ಪೂರ್ಣಗೊಳಿಸಿರಬೇಕು).
- ಪೌರತ್ವ: ಭಾರತೀಯ ನಾಗರಿಕರು, OCI ಕಾರ್ಡ್ದಾರರು ಹಾಗೂ ನೇಪಾಳ ಮತ್ತು ಭೂತಾನ್ ಪ್ರಜೆಗಳೂ ಅರ್ಜಿ ಸಲ್ಲಿಸಲು ಅರ್ಹರು.
ಆರ್ಥಿಕ ನೆರವು ಮತ್ತು ಸೌಲಭ್ಯಗಳು: ಆಯ್ಕೆಯಾದ ಫೆಲೋಗಳಿಗೆ ಅತ್ಯುತ್ತಮ ಆರ್ಥಿಕ ಭದ್ರತೆ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತದೆ:
- ಮಾಸಿಕ ಸ್ಟೈಪೆಂಡ್: ₹16,000
- ಸ್ಥಳೀಯ ಪ್ರಯಾಣ ಭತ್ಯೆ: ₹2,000 (ಮಾಸಿಕ)
- ಯೋಜನಾ ವೆಚ್ಚ ಭತ್ಯೆ: ₹2,000 (ಮಾಸಿಕ)
- ವೃತ್ತಿಪರ ಕಲಿಕೆ ಮತ್ತು ಅಭಿವೃದ್ಧಿ ಭತ್ಯೆ: ₹1,000 (ಮಾಸಿಕ)
- ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ಒಮ್ಮೆ ನೀಡಲಾಗುವ ಪ್ರೋತ್ಸಾಹಧನ: ₹1,10,000
- ಆರೋಗ್ಯ ಮತ್ತು ಅಪಘಾತ ವಿಮೆ.
- ಕಾರ್ಯಕ್ರಮದ ಯಶಸ್ವಿ ಪೂರ್ಣಗೊಳಿಸಿದ ಬಳಿಕ ಅಧಿಕೃತ ಪ್ರಮಾಣಪತ್ರ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪಾಸಾದವರಿಗೆ ಗುಡ್ನ್ಯೂಸ್: ಆಧಾರ್ ಸೇವಾ ಕೇಂದ್ರಗಳಲ್ಲಿ ಬಂಪರ್ ಉದ್ಯೋಗಾವಕಾಶ.
ಆಯ್ಕೆ ಪ್ರಕ್ರಿಯೆ ಹೇಗೆ? ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲಿಗೆ ಆನ್ಲೈನ್ ನೋಂದಣಿ ಮತ್ತು ಪ್ರಾಥಮಿಕ ಮೌಲ್ಯಮಾಪನ ನಡೆಯಲಿದೆ. ಅಲ್ಲಿ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನೇರ ಅನುಭವ ಪಡೆಯಲು ಬಯಸುವ ಪದವೀಧರರಿಗೆ ಇದೊಂದು ಅಪರೂಪದ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.