ಯುವ ಮತದಾರರ ಸೇರ್ಪಡೆಗೆ ಒತ್ತು: ಬಿಜೆಪಿಗೆ ಸೋಲಿಲ್ಲ – ಸಂಸದ ಗೋವಿಂದ ಕಾರಜೋಳ ವಿಶ್ವಾಸ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 02

ಯುವ ಮತದಾರರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದರ ಜೊತೆ ಅನರ್ಹ ಮತದಾರರನ್ನು ಮತ ಪಟ್ಟಿಯಿಂದ ಹೊರತೆಗೆಯುವುದರ ಕಡೆಗೂ ಬಿಎಲ್‍ಓ-ಟುಗಳು ಹಾಗು ಕಾರ್ಯಕರ್ತರು ಗಮನ ಕೊಡಬೇಕು. ಈ ನಿಟ್ಟಿನಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕರ್ತರು ನಿಷ್ಟೆಯಿಂದ ಕೆಲಸ ಮಾಡಿದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ.ಗೆ ಸೋಲಿಲ್ಲ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.

ತುರುವನೂರು ರಸ್ತೆಯಲ್ಲಿರುವ ಕಮ್ಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದವಿಶೇಷ ಕಾರ್ಯಕಾರಿಣಿ ಸಭೆ, ಬಿಎಲ್‍ಓ-ಟು ಕಾರ್ಯಾಗಾರ, ವಿಬಿಜಿರಾಮ್‍ಜಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು. ಗಾಂಧಿ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆಯುತ್ತಿರುವುದನ್ನು ಕೇಂದ್ರ ಸರ್ಕಾರ ಪ್ರಶ್ನಿಸುತ್ತಿರುವುದಕ್ಕೆ ಹೊಟ್ಟೆ ಉರಿಯಿಂದ ವಿಬಿಜಿರಾಮ್‍ಜಿ ಯೋಜನೆ ವಿರುದ್ದ ಅಪ ಪ್ರಚಾರ ಮಾಡುತ್ತಿದೆ. ಇದರ ವಿರುದ್ದ ಕಾರ್ಯಕರ್ತರು ಜಾಗೃತರಾಗಬೇಕೆಂದು ಎಚ್ಚರಿಸಿದರು.

ಮುಡಾ ಹಗರಣದಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆರು ಸಾವಿರ ಕೋಟಿ ರೂ. ಅಬಕಾರಿ ಹಗರಣವಾಗಿದೆ. ಗುತ್ತಿಗೆದಾರರ ಹಣ ಬಾಕಿ ಉಳಿಸಿಕೊಂಡಿದೆ. ಒಂದೆ ಒಂದು ಪೈಸೆಯ ಅಭಿವೃದ್ದಿಯಾಗಿಲ್ಲ. ಕಾಂಗ್ರೆಸ್‍ನಲ್ಲಿ ಮೂರು ಗುಂಪಾಗಿರುವುದರಿಂದ ಐದು ವರ್ಷಗಳ ಅವಧಿ ಪೂರ್ಣಗೊಳ್ಳು ವುದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ.ಯನ್ನು ಸದೃಢಗೊಳಿಸಿ ಯುವಕರನ್ನು ಹುರಿದುಂಬಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಧೈರ್ಯ, ಅಭಿಮಾನದಿಂದ ಹೇಳ ಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿ ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಅನುಷ್ಟಾನಗೊಳಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಐದು ಪುಕ್ಕಟೆ ಗ್ಯಾರೆಂಟಿಗಳನ್ನು ಕೇಳುತ್ತ ಕೂರಬೇಡಿ. ಪ್ರಧಾನಿ ಮೋದಿರವರ ಒಳ್ಳೆ ಕೆಲಸಗಳನ್ನು ಜನರಿಗೆ ಮುಟ್ಟಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಬಿಎಲ್‍ಓ-ಟು ಕಾರ್ಯಾಗಾರದ ರಾಜ್ಯ ಸಂಚಾಲಕ ಜಗದೀಶ್ ಹಿರೆಮನಿ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‍ಗೆ ಒಬ್ಬ ಬಿಎಲ್‍ಎ-ಟುಗಳಿಗೆ ಕೆಲಸ ಮಾಡುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ದೇಶದಲ್ಲಿ ಹದಿಮೂರನೆ ಬಾರಿ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಇದನ್ನು ಸಹಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು. ನೈಜ ಮತದಾರರು ಮತ ಪಟ್ಟಿಯಲ್ಲಿ ಉಳಿಯಬೇಕು. ಬೋಗಸ್ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಅಭಿಯಾನದ ಉದ್ದೇಶ. ಬಿಎಲ್‍ಓ-ಟುಗಳಿಗೆ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಹಾಗು ಡಿಲಿಟ್ ಮಾಡಿಸುವ ಅಧಿಕಾರ ಕೊಟ್ಟಿದೆ. ಎರಡು ಕಡೆ ಒಬ್ಬ ಮತದಾರನ ಹೆಸರು ಪಟ್ಟಿಯಲ್ಲಿರಲು ಚುನಾವಣಾ ಆಯೋಗ ಬಿಡುವುದಿಲ್ಲ. ದೇಶದ ಸಂರಕ್ಷಣೆ, ಭದ್ರತೆಗಾಗಿ ಅರ್ಹ ಮತದಾರರು ಮತ ಪಟ್ಟಿಯಲ್ಲಿ ಉಳಿಯಬೇಕಾಗಿರುವುದರಿಂದ ಕಾರ್ಯಕರ್ತರು ಒಟ್ಟಾಗಿ ಮತಪಟ್ಟಿ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಮತಪಟ್ಟಿಯಲ್ಲಿರುವ ಬೋಗಸ್ ಓಟ್‍ಗಳಿಂದ ಬಿಜೆಪಿ.ಗೆ ಹಾಗೂ ಪಕ್ಷದ ಜನಪ್ರತಿನಿಧಿಗಳಿಗೆ ತೊಂದರೆಯಾಗುತ್ತಿದೆ. ಕೆ.ಎಂ.ಆರ್.ಸಿ.ಹಣ 1440 ಕೋಟಿ ರೂ. ನಮ್ಮ ಕ್ಷೇತ್ರದಲ್ಲಿದೆ. ಚಿತ್ರದುರ್ಗ, ಹಿರಿಯೂರು ಕುಡಿಯುವ ನೀರು ಯೋಜನೆಗೆ 593 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇವೆ. ರಸ್ತೆ, ಚೆಕ್‍ಡ್ಯಾಂಗಳಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎದೆಗುಂದದೆ ಧೈರ್ಯವಾಗಿ ಮನೆ ಮನೆಗೆ ಹೋಗಿ ಮತ ಕೇಳಿ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ನರೇಗಾ ಯೋಜನೆಯಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಿ ಕೇಂದ್ರ ಸರ್ಕಾರ ವಿಬಿಜಿರಾಮ್‍ಜಿ ಯೋಜನೆಯನ್ನು ಜಾರಿಗೆ ತಂದಿದೆ. ನೂರು ದಿನಗಳ ಕೂಲಿ ಬದಲಾಗಿ ವರ್ಷಕ್ಕೆ 125 ದಿನಗಳ ಕಾಲ ಕೆಲಸ ಸಿಗುವಂತ ಅವಕಾಶ ಒದಗಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿಯಡಿ ಅನೇಕ ವರ್ಷಗಳಿಂದಲೂ ಲೋಪಗಳು ನಡೆಯುತ್ತಿರುವುದನ್ನು ಗಮನಿಸಿ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. ಕಳೆದ ಹನ್ನೆರಡು ವರ್ಷಗಳಿಂದಲೂ ಭ್ರಷ್ಟಾಚಾರವಿಲ್ಲದೆ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿರವರ ದಿಟ್ಟತನದಿಂದ ಬಲಾಢ್ಯರ ಕೈಗೆ ಹಣ ಹೋಗುವುದು ನಿಂತಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಬಿಜಿರಾಮ್‍ಜಿ ಯೋಜನೆ ವಿರುದ್ದ ಅಪಪ್ರಚಾರದಲ್ಲಿ ತೊಡಗಿ ಜನರನ್ನು ದಿಕ್ಕುತಪ್ಪಿಸುತ್ತಿದೆ ಎಂದರು.

ಮಾಜಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡುತ್ತ ಬಾಂಗ್ಲಾದಿಂದ ಅಕ್ರಮವಾಗಿ ನಮ್ಮ ದೇಶದೊಳಗೆ ನುಸುಳಿರುವವರಿಂದ ಮತ ಹಾಕಿಸಿಕೊಂಡು ಇಲ್ಲಿಯವರೆಗು ಚುನಾವಣೆಗಳಲ್ಲಿ ಗೆಲ್ಲುತ್ತಾ ಬರುತ್ತಿರುವ ಕಾಂಗ್ರೆಸ್‍ಗೆ ಈಗ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿರುವುದು ಬಿಸಿತುಪ್ಪವಾಗಿ ಪರಿಣಾಮಿಸಿದೆ. ಅದಕ್ಕಾಗಿ ವಿಬಿಜಿರಾಮ್‍ಜಿ ಯೋಜನೆಯನ್ನು ಕಾರಣವಿಲ್ಲದೆ ವಿರೋಧಿಸುತ್ತಿದೆ. ದೇಶದ ಪ್ರಜಾಪ್ರಭತ್ವ ಉಳಿವಿಗೆ ಮತಪಟ್ಟಿ ಪರಿಷ್ಕರಣೆ ಅತಿ ಮುಖ್ಯವಾಗಿದೆ. ರಾಜ್ಯ ಸರ್ಕಾರದ ವಿಶ್ವಾಸದ್ರೋಹವನ್ನು ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ ಬಿಎಲ್‍ಓ-ಟುಗಳ ಮೇಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ದಿ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು.

ಬಿಜೆಪಿ.ಜಿಲ್ಲಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಧುಗಿರಿ ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್, ವೆಂಕಟೇಶ್‍ಯಾದವ್, ಮಾಧುರಿ ಗಿರೀಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಎಲ್‍ಓ-ಟು ಕಾರ್ಯಾಗಾರದ ರಾಜ್ಯ ಸಂಚಾಲಕ ಡಾ.ಮಂಜುನಾಥ್, ಬಿಜೆಪಿ. ನಗರ ಮಂಡಲ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಕಲ್ಲೇಶಯ್ಯ, ಜಿ.ಎಸ್. ಅನಿತ್‍ಕುಮಾರ್, ನಗರ ಮಂಡಲ ನಿಕಟ ಪೂರ್ವ ಅಧ್ಯಕ್ಷ ನವೀನ್ ಚಾಲುಕ್ಯ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *