IPL 2026: ಕೆಕೆಆರ್ ಮಣಿಸಿ 3ನೇ ಗೆಲುವು ದಾಖಲಿಸಿದ ಗುಜರಾತ್ ಟೈಟನ್ಸ್; ಗಿಲ್ ಪಡೆಯ ಭರ್ಜರಿ ಬೇಟೆ.

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 25ನೇ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಗುಜರಾತ್ ಟೈಟನ್ಸ್ (GT) 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಆಟದ ನೆರವಿನಿಂದ ಗುಜರಾತ್ ಟೂರ್ನಿಯಲ್ಲಿ 3ನೇ ಗೆಲುವು ತನ್ನದಾಗಿಸಿಕೊಂಡಿದೆ.

ಕೆಕೆಆರ್‌ಗೆ ಆರಂಭಿಕ ಆಘಾತ, ಗ್ರೀನ್ ಏಕಾಂಗಿ ಹೋರಾಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ನಿರ್ಧಾರ ಆರಂಭದಲ್ಲಿಯೇ ಕೈಕೊಟ್ಟಿತು. ಕೇವಲ 32 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ರೋವ್‌ಮನ್ ಪೊವೆಲ್ (27 ರನ್) ಹಾಗೂ ಕ್ಯಾಮರೂನ್ ಗ್ರೀನ್ ತಂಡಕ್ಕೆ ಆಸರೆಯಾದರು.

ಕ್ಯಾಮರೂನ್ ಗ್ರೀನ್ ಬಿರುಸಿನ ಬ್ಯಾಟಿಂಗ್ ಮೂಲಕ ತಮ್ಮ ಚೊಚ್ಚಲ ಅರ್ಧಶತಕ (79 ರನ್) ಸಿಡಿಸಿ ಮಿಂಚಿದರು. ಆದರೆ, ಕೊನೆಯ 5 ಓವರ್‌ಗಳಲ್ಲಿ ಗುಜರಾತ್ ಬೌಲರ್‌ಗಳು ಬಿಗಿಯಾದ ದಾಳಿ ಸಂಘಟಿಸಿದ ಪರಿಣಾಮ, ಕೋಲ್ಕತ್ತಾ ಕೇವಲ 32 ರನ್ ಕಲೆಹಾಕಲು ಮಾತ್ರ ಶಕ್ತವಾಗಿ ಅಂತಿಮವಾಗಿ 180 ರನ್‌ಗಳಿಗೆ ಆಲೌಟ್ ಆಯಿತು.

ಬೌಲಿಂಗ್ ಸಾಧನೆ: ಗುಜರಾತ್ ಪರ ಕಗಿಸೊ ರಬಾಡ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ ತಲಾ 2 ವಿಕೆಟ್ ಪಡೆದು ಮಿಂಚಿದರು.

ನಾಯಕ ಗಿಲ್ ಆಕರ್ಷಕ ಆಟ, ಕೊನೆಯ ಓವರ್‌ನಲ್ಲಿ ರೋಚಕ ಗೆಲುವು

181 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್‌ಗೆ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ (22 ರನ್) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ಮೂಡಿಬಂತು. ಬಳಿಕ ಬಂದ ಜೋಸ್ ಬಟ್ಲರ್ (25 ರನ್) ಕೂಡ ಉಪಯುಕ್ತ ಕಾಣಿಕೆ ನೀಡಿ ನಿರ್ಗಮಿಸಿದರು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಜವಾಬ್ದಾರಿಯುತ ಆಟವಾಡಿದ ನಾಯಕ ಗಿಲ್, ಸತತ ಮೂರನೇ ಅರ್ಧಶತಕ (86 ರನ್) ಸಿಡಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಶತಕದಂಚಿನಲ್ಲಿ ಗಿಲ್ ಔಟಾದರೂ, ಅಂತಿಮ ಓವರ್‌ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ರಾಹುಲ್ ಟೆವಾಟಿಯಾ ಸೇರಿ ತಂಡಕ್ಕೆ 5 ವಿಕೆಟ್‌ಗಳ ಜಯ ತಂದುಕೊಟ್ಟರು.

ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಗುಜರಾತ್

ಈ ಭರ್ಜರಿ ಜಯದೊಂದಿಗೆ ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಮತ್ತೊಂದೆಡೆ, ಟೂರ್ನಿಯಲ್ಲಿ ತನ್ನ ಮೊದಲ ಗೆಲುವಿಗಾಗಿ ಪರದಾಡುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸತತ ನಿರಾಸೆ ಎದುರಾಗಿದೆ. ತಂಡ ಇದುವರೆಗೆ ಆಡಿದ 6 ಪಂದ್ಯಗಳ ಪೈಕಿ 5ರಲ್ಲಿ ಮುಗ್ಗರಿಸಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

Leave a Reply

Your email address will not be published. Required fields are marked *