ಚಿತ್ರದುರ್ಗ, ಏ. 29:
ವರದಿ ಮತ್ತು ಪೋಟೋ ಕೃಪೆ,ಸುರೇಶ್ ಪಟ್ಟಣ್
ಏಪ್ರಿಲ್ 30ರಿಂದ ಮೇ 2ರವರೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರ ಬೆಟ್ಟದಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ ಎಂದು ಹೇಳಿದರು.
ಶಿಬಿರದ ಮುಖ್ಯ ಕಾರ್ಯಕ್ರಮಗಳು
ಏಪ್ರಿಲ್ 30:ಬೆಳಿಗ್ಗೆ 9ಕ್ಕೆ ಸಿದ್ದರ ಬೆಟ್ಟ ವೃತ್ತದಿಂದ ವೀರಗಾಸೆ, ಕಂಸಾಳೆ, ಪೂಜಾಗಣಿತ, ಧ್ವಜಕುಣಿತ ಸೇರಿದಂತೆ ಮಕ್ಕಳ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ 10ಕ್ಕೆ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ.
ಮೇ 1:ಶ್ರೀ ಕ್ಷೇತ್ರ ದರ್ಶನ, ಯೋಗ ಪ್ರದರ್ಶನ ಹಾಗೂ ಚಿಂತನ ಕಾರ್ಯಕ್ರಮಗಳು ನಡೆಯಲಿವೆ.ಸಂಗೀತ ಕಾರ್ಯಕ್ರಮದಲ್ಲಿ ಕಲಾಶ್ರೀ ಲಕ್ಷ್ಮಣ ಮತ್ತು ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ.ಎಸ್.ಪಿ. ಸಿದ್ದಲಿಂಗಸ್ವಾಮಿ ಜೀವನ ಮೌಲ್ಯಗಳ ಕುರಿತು, ಟಿ.ಎಸ್. ನಿರಂಜನ್ ಮಕ್ಕಳ ಕಾನೂನು ಅರಿವು ಕುರಿತು ಉಪನ್ಯಾಸ ನೀಡಲಿದ್ದಾರೆ.ಸಂಜೆ ವಿಜಯ ಕರ್ನಾಟಕದ “ಸೂಪರ್ ರೈತ” ಕಾರ್ಯಕ್ರಮ ಹಾಗೂ ಹುಣ್ಣಿಮೆ ಬೆಳದಿಂಗಳ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.ಹಾಸ್ಯ ಸಾಹಿತಿ ಜಗನ್ನಾಥ್ ಅವರಿಂದ ಹಾಸ್ಯ ಸಾಹಿತ್ಯ ದರ್ಶನ ಕಾರ್ಯಕ್ರಮವೂ ಇರುತ್ತದೆ.
ಮೇ 2:ಯೋಗ ಪ್ರದರ್ಶನ ಮತ್ತು ಚಿಂತನ ಕಾರ್ಯಕ್ರಮಗಳ ನಂತರ ಸಮಾರೋಪ ಸಮಾರಂಭ ನಡೆಯಲಿದೆ.ಡಾ. ಹನುಮಂತನಾಥ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಟಿ.ಎಸ್. ನಾಗರಾಜ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಕೆ.ಎಸ್. ಸಿದ್ದಲಿಂಗಪ್ಪ ವಹಿಸಲಿದ್ದಾರೆ.


ಶಿಬಿರದ ವಿಶೇಷತೆ
ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದು,
ಸಾಹಿತ್ಯ
ಸಂಸ್ಕೃತಿ
ಚಿತ್ರಕಲೆ
ಜಾನಪದ
ಕಲೆ
ಸಂಗೀತ
ನಾಟಕ
ಯೋಗ ಮತ್ತು ಕ್ರೀಡೆ
ಹೀಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಭಾಗವಹಿಸುವ ವಿದ್ಯಾರ್ಥಿಗಳು
ಚಿತ್ರದುರ್ಗ ಜಿಲ್ಲೆಯಿಂದ ಪರಿಣಕ ಆರ್.ವಿ., ಸೈಯದ್ ಆಯಾನ್, ಚಿನ್ನು ಕೆ., ಸಿಂಚನ ಜಿ., ರಾಜೇಶ್ವರಿ ಆರ್., ಸಿಂಚ ಟಿ., ಸುಮ ವಿ., ಸೈಯದ್ ತಲಹಾಹುದ್ದೀನ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಉಪಸ್ಥಿತಿ
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ. ವಿಜಯ್ ಕುಮಾರ್, ಕಾರ್ಯದರ್ಶಿ ಮಾರುತಿ ನಾಯ್ಕ್, ಚೈತ್ರ ಸಿ., ವಿನೋದ ಹಾಗೂ ಪೋಷಕರಾದ ಚಂದನ, ತಬ್ರೇಜ್, ಸೈಯದ್ ಮೊಹಿದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

