ಜಪಾನ್‌ನಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಕನಸು ಕಾಣುತ್ತಿರುವ ಭಾರತೀಯ ಪದವೀಧರರಿಗೆ ಜಪಾನ್ ಸರ್ಕಾರದ ಪ್ರತಿಷ್ಠಿತ ‘ಜೆಟ್’ (Japan Exchange and Teaching – JET) ಕಾರ್ಯಕ್ರಮವು ಅತ್ಯುತ್ತಮ ಅವಕಾಶವೊಂದನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ‘ಸಹಾಯಕ ಭಾಷಾ ಶಿಕ್ಷಕರು’ (ALT) ಮತ್ತು ‘ಅಂತರರಾಷ್ಟ್ರೀಯ ಸಂಬಂಧಗಳ ಸಂಯೋಜಕರು‘ (CIR) ಹುದ್ದೆಗಳಿಗೆ ಶೀಘ್ರದಲ್ಲೇ ಅರ್ಜಿ ಆಹ್ವಾನಿಸುವ ನಿರೀಕ್ಷೆಯಿದೆ.
ಏನಿದು JET ಕಾರ್ಯಕ್ರಮ?
ಜಪಾನ್‌ನಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಣವನ್ನು ಉತ್ತೇಜಿಸುವ ಮತ್ತು ವಿವಿಧ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುವ ಉದ್ದೇಶದಿಂದ ಜಪಾನ್ ಸರ್ಕಾರವು 1987ರಲ್ಲಿ ಈ ಅಧಿಕೃತ ಯೋಜನೆಯನ್ನು ಜಾರಿಗೆ ತಂದಿತು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಜಪಾನ್‌ನಲ್ಲಿ ವಾಸಿಸಲು, ಅಲ್ಲಿನ ಸಮಾಜದೊಂದಿಗೆ ಬೆರೆಯಲು ಮತ್ತು ಉತ್ತಮ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಇದು ವೇದಿಕೆ ಕಲ್ಪಿಸುತ್ತದೆ.
ಭಾರತೀಯರಿಗೆ ಇರುವ ಅವಕಾಶಗಳೇನು?
ಜಪಾನ್‌ನ 46 ಪ್ರಿಫೆಕ್ಚರ್‌ಗಳು ಹಾಗೂ 18 ನಗರಗಳ 1,000ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಜೆಟ್ ಕಾರ್ಯಕ್ರಮದಡಿ ಉದ್ಯೋಗಾವಕಾಶಗಳಿವೆ. ಇತ್ತೀಚೆಗಷ್ಟೇ ಭಾರತದಿಂದ 22 ಸಹಾಯಕ ಭಾಷಾ ಶಿಕ್ಷಕರು ಹಾಗೂ 4 ಅಂತರರಾಷ್ಟ್ರೀಯ ಸಂಬಂಧಗಳ ಸಂಯೋಜಕರನ್ನು ಜಪಾನ್‌ಗೆ ಕಳುಹಿಸಿಕೊಡಲಾಗಿದೆ. ಆಯ್ಕೆಯಾದವರನ್ನು ಸರ್ಕಾರಿ ಶಾಲೆಗಳು, ಸ್ಥಳೀಯ ಆಡಳಿತ ಕಚೇರಿಗಳು ಮತ್ತು ಅಗತ್ಯವಿದ್ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೇಮಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಅಭ್ಯರ್ಥಿಯು ಭಾರತೀಯ ನಾಗರಿಕರಾಗಿರಬೇಕು.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.
- ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಸಹ ಅರ್ಜಿ ಹಾಕಬಹುದು (ಆದರೆ ಜಪಾನ್‌ಗೆ ಪ್ರಯಾಣಿಸುವ ಮುನ್ನ ಪದವಿ ಪೂರ್ಣಗೊಂಡಿರಬೇಕು).
- ಇಂಗ್ಲಿಷ್ ಭಾಷೆಯಲ್ಲಿ ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
- ಜಪಾನಿನ ಸಂಸ್ಕೃತಿಯನ್ನು ಅರಿಯುವ ಆಸಕ್ತಿ ಇರಬೇಕು.
ಜಪಾನೀಸ್ ಭಾಷೆ ಕಡ್ಡಾಯವೇ?
- ಸಹಾಯಕ ಭಾಷಾ ಶಿಕ್ಷಕರು (ALT): ಈ ಹುದ್ದೆಗೆ ಜಪಾನೀಸ್ ಭಾಷೆ ಬರುವುದು ಕಡ್ಡಾಯವಲ್ಲ; ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತವಿದ್ದರೆ ಸಾಕು.
- ಅಂತರರಾಷ್ಟ್ರೀಯ ಸಂಬಂಧಗಳ ಸಂಯೋಜಕರು (CIR): ಈ ಹುದ್ದೆಗೆ ಮಾತ್ರ ಜಪಾನೀಸ್ ಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಇರುವುದು ಕಡ್ಡಾಯವಾಗಿದೆ.
ಸಹಾಯಕ ಭಾಷಾ ಶಿಕ್ಷಕರ (ALT) ಜವಾಬ್ದಾರಿಗಳೇನು?
ಈ ಹುದ್ದೆಗೆ ಆಯ್ಕೆಯಾದವರು ಜಪಾನ್‌ನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಲ್ಲಿನ ಸ್ಥಳೀಯ ಶಿಕ್ಷಕರ ಜೊತೆಗೂಡಿ ಕೆಲಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸುವುದರ ಜೊತೆಗೆ, ಅವರಿಗೆ ಭಾರತೀಯ ಸಂಸ್ಕೃತಿ, ಕಲೆ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಪರಿಚಯಿಸುವ ಮುಖ್ಯ ಜವಾಬ್ದಾರಿ ಇವರ ಮೇಲಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಈ ಕಾರ್ಯಕ್ರಮದ ಕುರಿತಾದ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಆಯ್ಕೆ ವಿಧಾನ ಮತ್ತು ಇತರ ನಿಖರ ಮಾಹಿತಿಗಳಿಗಾಗಿ ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j