ಒಳಮೀಸಲಾತಿ ಜಾರಿ: ಸರ್ಕಾರಕ್ಕೆ ಕೃತಜ್ಞತೆ; ಸಣ್ಣಪುಟ್ಟ ಲೋಪ ಸರಿಪಡಿಸಲು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹ

ಚಿತ್ರದುರ್ಗ, ಏ.30:

ಪೋಟೋ ಮತ್ತು ವರದಿ ಮಾರುತಿ
ಸಣ್ಣ ಸಹಾಯ ಮಾಡಿದರೆ ಕೃತಜ್ಞತೆ ಸಲ್ಲಿಸುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಯೊಂದಿಗೆ ಬಹುದೊಡ್ಡ ಸಹಾಯ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೇರಿ ಸಚಿವ ಸಂಪುಟದ ಸದಸ್ಯರನ್ನು ಗೌರವಿಸಲು ಶೀಘ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.


ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30 ವರ್ಷಗಳ ಹೋರಾಟದ ಫಲ, ಸುಪ್ರೀಂ ಕೋರ್ಟ್ ತೀರ್ಪು ಪರಿಣಾಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಂಡಿದೆ. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯವೇ ಕಾರಣ. ಒಳಮೀಸಲಾತಿ ಜಾರಿಗೊಂಡಿರುವುದು ಐತಿಹಾಸಿಕ ನಿರ್ಧಾರ ಎಂದರು.

ಶೀಘ್ರದಲ್ಲಿ ರಾಯಚೂರು, ಚಿತ್ರದುರ್ಗ ಅಥವಾ ಹೊಸಪೇಟೆಯಲ್ಲಿ ಮಾದಿಗರ ಒಳಮೀಸಲಾತಿ ಸಂಭ್ರಮೋತ್ಸವ ಆಯೋಜಿಸಿ, ಕೃತಜ್ಞತೆ ಸಲ್ಲಿಸಲಾಗುವುದು. ಈ ಸಂಬಂಧ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

ಬಹುವರ್ಷಗಳ ಹೋರಾಟದ ಫಲ ಒಳಮೀಸಲಾತಿ ಜಾರಿಗೊಂಡಿದೆ. ಆದರೆ, ಎಸ್ಸಿಗೆ 3ಕ್ಕಿಂತಲೂ ಕಡಿಮೆ ಹುದ್ದೆಗಳಿದ್ದ ವೇಳೆ ಎಸ್ಸಿ ಸಾಮಾನ್ಯ ಎಂದು ಪರಿಗಣಿಸಲಾಗುವುದು ಎಂಬ ಆದೇಶ ಒಳಮೀಸಲಾತಿ ಆಶಯಕ್ಕೆ ಧಕ್ಕೆ ಆಗಲಿದೆ. ಆದ್ದರಿಂದ ಇದನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರಲಾಗುವುದು ಎಂದರು.

ಈ ಸಂಬಂಧ ಮಾದಿಗ ಸಮುದಾಯದ ಚಿಂತಕರು, ನಿವೃತ್ತ ಅಧಿಕಾರಿಗಳು, ಹೋರಾಟಗಾರರ ದುಂಡು ಮೇಜಿನ ಸಭೆಯನ್ನು ಬೆಂಗಳೂರಿನಲ್ಲಿ ಮೇ.3ರ ಭಾನುವಾರ ನಡೆಸಲಿದ್ದು, ಒಳಮೀಸಲಾತಿ ಜಾರಿಯಲ್ಲಿ 400 ಬಿಂದು ಹಾಗೂ 3ಕ್ಕಿಂತ ಕಡಿಮೆ ಹುದ್ದೆಗಳಿಗೆ ಒಳಮೀಸಲಾತಿ ಅನ್ವಯಿಸುವುದಿಲ್ಲವೆಂಬ ನೀತಿ ಕುರಿತು ಚರ್ಚೆ ನಡೆಸಲಾಗುವುದು. ಬಳಿಕ ಲೋಪ ಸರಿಪಡಿಸುವಂತೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಎಸ್ಸಿ ಗುಂಪಿನಲ್ಲಿ 101 ಜಾತಿಗಳಲ್ಲಿ ಸ್ಪರ್ಧೆ ಮಾಡಿ ಸೌಲಭ್ಯ ಪಡೆಯಲು ಮಾದಿಗರಿಗೆ ಆಗುತ್ತಿಲ್ಲವೆಂದೇ ಒಳಮೀಸಲಾತಿಗೆ ಹೋರಾಟ ಆರಂಭಿಸಿದ್ದು. ಆದರೆ, ಈಗ 3ಕ್ಕಿಂತ ಕಡಿಮೆ ಹುದ್ದೆಗಳಿಗೆ ಸ್ಪರ್ಧೆ ಮಾಡಬೇಕೆಂಬ ನಿಯಮವೇ ಸರಿಯಲ್ಲ. 3ಕ್ಕಿಂತ ಕಡಿಮೆ ಹುದ್ದೆಗಳಿಗಿದ್ದಲ್ಲಿ ಅದನ್ನು ರೋಸ್ಟರ್ ಪ್ರಕಾರ ಎ, ಬಿ, ಸಿ ಗುಂಪಿಗೆ ಹಂಚಬಹುದು. ಇಲ್ಲದಿದ್ದರೆ 3ರ ಸಂಖ್ಯೆ ಆಗುವವರೆಗೂ ಹುದ್ದೆಗೆ ಅರ್ಜಿ ಆಹ್ವಾನಿಸದೇ ಇರುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಶ್ವವಿದ್ಯಾಲಯ, ಅನುದಾನ ಶಿಕ್ಷಣ ಸಂಸ್ಥೆ ಸೇರಿ ವಿವಿಧ ಇಲಾಖೆಗಳಲ್ಲಿ 1 ಅಥವಾ 2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಪ್ರಕ್ರಿಯೇ ಹೆಚ್ಚು. ಇಂತಹ ಸಂದರ್ಭ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಸ್ಸಿಯಲ್ಲಿನ ಕೆಲ ಸಮುದಾಯದವರು ಚೆನ್ನಾಗಿ ಓದಿ, ಉದ್ಯೋಗ-ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ಎತ್ತರಕ್ಕೆ ಹೋಗಿದ್ದಾರೆ. ಈ ಕುರಿತು ನಮಗೆ ಹೊಟ್ಟೆಕಿಚ್ಚು ಇಲ್ಲ. ಆದರೆ, ಮಾದಿಗರು ಚೆನ್ನಾಗಿ ಓದದೆ ಇರಲು ಅನೇಕ ಕಾರಣಗಳು ಇವೆ. ಚಮ್ಮಾರ, ಕಸ ಗುಡಿಸುವಿಕೆ, ಕಟ್ಟಡ-ಕೃಷಿ ಕಾರ್ಮಿಕರಾಗಿರುವ ಮಾದಿಗರು ಮಕ್ಕಳನ್ನು ಓದಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರು ಮತ್ತೊಬ್ಬರ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲವೆಂದು ಒಳಮೀಸಲಾತಿ ಜಾರಿಗೆ ಹೋರಾಟ ನಡೆಸಿದ್ದು, ಈಗ ಜಾರಿಗೊಂಡಿರುವುದು ಸಂತಸ. ಆದರೆ, ಸಣ್ಣಪುಟ್ಟ ಲೋಪ ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿ ಬಳಿಕ ವೈದ್ಯಕೀಯ ಎಂಡಿ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷೆಯೂ ಮಾಡದಷ್ಟು ಸೀಟುಗಳು ಮಾದಿಗರು ಪಡೆಯಲು ಸಾಧ್ಯವಾಗಿದೆ. ಅದೇ ರೀತಿ ಉದ್ಯೋಗದಲ್ಲೂ ಆಗಲಿದೆ.ಒಳಮೀಸಲಾತಿ ಜಾರಿಯಿಂದ ಒಟ್ಟಾರೆ ಅನುಕೂಲ ಆಗಿದ್ದು, ಇನ್ನಷ್ಟು ಕ್ಷೇತ್ರಕ್ಕೆ ವಿಸ್ತರಿಸಬೇಕಿದೆ. ಜಿಲ್ಲಾವಾರು ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸೌಲಭ್ಯಗಳ ಹಂಚಿಕೆ ಆಗಬೇಕು. ಆಗ ಮಾದಿಗ ಸಮುದಾಯ ಪ್ರಗತಿಯತ್ತ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

50ರಿಂದ 56ಕ್ಕೆ ಮೀಸಲಾತಿ ಏರಿಸಲು ಅವಕಾಶ ಇಲ್ಲದಿದ್ದರೂ ಈ ನಿರ್ಧಾರ ಕೈಗೊಂಡ ಬಿಜೆಪಿ ಈಗಲಾದರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮೀಸಲಾತಿ ಹೆಚ್ಚಳಕ್ಕೆ ಮುಂದಾಗಬೇಕು. ಒಂದು ವೇಳೆ ಮೀಸಲಾತಿ 56ಕ್ಕೆ ಏರಿದರೆ ಅದಕ್ಕೂ ಬದ್ಧವಾಗಿ ಬ್ಯಾಕ್‍ಲಾಗ್ ಆಗಿ ಹುದ್ದೆಗಳನ್ನು ತುಂಬಿಕೊಳ್ಳಲು ಸಿಎಂ ಆದೇಶ ಹೊರಡಿಸಿದ್ದಾರೆ. ಒಳಮೀಸಲಾತಿ ಜಾರಿ ತಡವಾಗಿದ್ದರೂ ಇಲ್ಲಿಯವರೆಗೂ ಒಂದೇ ಒಂದು ತುಂಬಿಲ್ಲ. ಈ ಮೂಲಕ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗೂ ನ್ಯಾಯ ಕಲ್ಪಿಸುವ ಗಟ್ಟಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಶೇ.6 ಮೀಸಲಾತಿ ಸಿಗಬೇಕಿತ್ತು ಎನ್ನುವ ವಾದ ಸರಿಯಿದೆ. ಆದರೆ, ಎಲ್ಲರನ್ನೂ ಸಮಾಧಾನಗೊಳಿಸಿ, ಒಪ್ಪಿಸಿಕೊಂಡು ಒಳಮೀಸಲಾತಿ ಜಾರಿಗೊಳಿಸಿರುವುದೇ ಐತಿಹಾಸಿಕ ನಿರ್ಧಾರ. ಅದರಲ್ಲೂ ಮಾದಿಗ ಸಮುದಾಯಕ್ಕೆ ಮೀಸಲಾತಿ ಶೂನ್ಯದಲ್ಲಿತ್ತು. ಈಗ ಶೇ.5.25ರಷ್ಟು ದೊರೆಯಲಿರುವುದು ಪ್ರಗತಿಗೆ ಬಹುದೊಡ್ಡ ಕೊಡುಗೆ ಆಗಲಿದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿ ಸಂಬಂಧ ನಮ್ಮ ಪರವಾಗಿ ಸಚಿವ ಸಂಪುಟದ ಎಲ್ಲ ಸದಸ್ಯರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದವರು, ಮಾಧ್ಯಮದವರು ಸೇರಿ ವಿವಿಧ ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ಮುಖಂಡರಾದ ಎಲ್‍ಐಸಿ ಹೀರಣ್ಣಯ್ಯ, ಕೆ.ಎಸ್.ನೇತ್ರಾನಂದ, ಕೆ.ರಾಜು, ರವೀಂದ್ರ, ಎಂ.ಜೆ.ಪ್ರಸನ್ನ, ಅನಿಲ್ ಕೋಟಿ ಇತರರಿದ್ದರು.

Leave a Reply

Your email address will not be published. Required fields are marked *