ಸಮಗ್ರ ಸುದ್ದಿ ಕ್ರೀಡಾ ಡೆಸ್ಕ್: ಐಪಿಎಲ್ 2026ರ (IPL 2026) ರೋಚಕ ಘಟ್ಟದಲ್ಲಿ ನಡೆದ 67ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ 2 ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿತ್ತು. ವಿಶೇಷವಾಗಿ ಹೈದರಾಬಾದ್ ತಂಡ ಅಗ್ರಸ್ಥಾನಕ್ಕೇರಲು ಆರ್‌ಸಿಬಿ ವಿರುದ್ಧ ಬೃಹತ್ ಅಂತರದ ಗೆಲುವಿನ ಅಗತ್ಯವಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ನಿಗದಿತ ಓವರ್‌ಗಳಲ್ಲಿ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಇತ್ತ ಬೃಹತ್ ಗುರಿ ಬೆನ್ನಟ್ಟುವಲ್ಲಿ ಎಡವಿ ಲೀಗ್‌ನ ಕೊನೆಯ ಪಂದ್ಯದಲ್ಲಿ ಸೋಲುಂಡರೂ, ಆರ್‌ಸಿಬಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರನ್ ಹೊಳೆ ಹರಿಸಿದ ಹೈದರಾಬಾದ್ ಬ್ಯಾಟರ್‌ಗಳು
ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ಪರ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಕೇವಲ 4 ಓವರ್‌ಗಳಲ್ಲಿ 45 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ ರಸಿಕ್ ಸಲಾಂ ದಾರ್ ಬೌಲಿಂಗ್‌ನಲ್ಲಿ ಹೆಡ್ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿಯಿತು.
ನಂತರ ಕ್ರೀಸ್‌ಗಿಳಿದ ಇಶಾನ್ ಕಿಶಾನ್ ಜೊತೆಗೂಡಿದ ಅಭಿಷೇಕ್ ಶರ್ಮಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಮೂರು ಬಾರಿ ಜೀವದಾನದ ಲಾಭ ಪಡೆದ ಅಭಿಷೇಕ್, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಒಟ್ಟು 22 ಎಸೆತಗಳಲ್ಲಿ 56 ರನ್ ಸಿಡಿಸಿ ನಿರ್ಗಮಿಸಿದರು. ಆ ಬಳಿಕ ಬಂದ ಹೆನ್ರಿಕ್ ಕ್ಲಾಸೆನ್ ಮತ್ತು ಇಶಾನ್ ಕಿಶಾನ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
- ಇಶಾನ್ ಕಿಶಾನ್: 79 ರನ್
- ಹೆನ್ರಿಕ್ ಕ್ಲಾಸೆನ್: 24 ಎಸೆತಗಳಲ್ಲಿ 51 ರನ್
- ನಿತೀಶ್ ರೆಡ್ಡಿ: 12 ಎಸೆತಗಳಲ್ಲಿ ಅಜೇಯ 29 ರನ್
ಆರ್‌ಸಿಬಿಗೆ 55 ರನ್‌ಗಳ ಸೋಲು
257 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ (19 ಎಸೆತಗಳಲ್ಲಿ 44 ರನ್) ಸ್ಫೋಟಕ ಆರಂಭ ಒದಗಿಸಿದರು. ಆದರೆ ಎಹ್ಸಾನ್ ಮಾಲಿಂಗ ಅವರು ವೆಂಕಟೇಶ್ ವಿಕೆಟ್ ಕೀಳುವ ಮೂಲಕ ರನ್ ವೇಗಕ್ಕೆ ಬ್ರೇಕ್ ಹಾಕಿದರು. ತದನಂತರ ಬಂದ ಶಕೀಬ್ ಹುಸೇನ್, ಕೇವಲ 15 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಆರ್‌ಸಿಬಿಗೆ ಬಹುದೊಡ್ಡ ಆಘಾತ ನೀಡಿದರು. ದೇವದತ್ ಪಡಿಕ್ಕಲ್ ಕೂಡ 14 ಎಸೆತಗಳಲ್ಲಿ 21 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಯಕನ ಆಟವಾಡಿದ ರಜತ್ ಪಾಟಿದಾರ್ 56 ರನ್ ಗಳಿಸಿದರೂ, ಅವರ ಇನ್ನಿಂಗ್ಸ್ ನಿಧಾನಗತಿಯಿಂದ ಕೂಡಿತ್ತು. ಅಂತಿಮ ಹಂತದಲ್ಲಿ ಕೃನಾಲ್ ಪಾಂಡ್ಯ (ಅಜೇಯ 41) ಮತ್ತು ಟಿಮ್ ಡೇವಿಡ್ (ಅಜೇಯ 15) ಹೋರಾಟ ನಡೆಸಿದರೂ, ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಗಿ 55 ರನ್‌ಗಳ ಸೋಲೊಪ್ಪಿಕೊಂಡಿತು.