ಚಿತ್ರದುರ್ಗ ಮೇ. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕೋಟೆನಾಡು ಚಿತ್ರದುರ್ಗದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ. ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ.ರಘುಮೂರ್ತಿ ಅವರ ಹೊರತಾಗಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು.
ಚಿತ್ರದುರ್ಗ ಡಿಸಿಸಿ ಬ್ಯಾಂಕ್ನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 14 ನಿರ್ದೇಶಕರ ಬಲವಿದೆ. ಈ ಪೈಕಿ ಗರಿಷ್ಠ ಸಂಖ್ಯೆಯ ನಿರ್ದೇಶಕರು ಈಗಾಗಲೇ ರಘುಮೂರ್ತಿ ಅವರಿಗೆ ಜೈ ಎಂದಿದ್ದಾರೆ. ಮುಖ್ಯವಾಗಿ, ದಿವಂಗತ ನಾಯಕ ಡಿ. ಸುಧಾಕರ್ ಅವರ ನಿಷ್ಠಾವಂತ ನಿರ್ದೇಶಕರ ದಂಡು ಈಗ ಸಂಪೂರ್ಣವಾಗಿ ರಘುಮೂರ್ತಿ ಅವರ ಕೈ ಹಿಡಿದಿದೆ. ಸುಧಾಕರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ರಘುಮೂರ್ತಿ ಅವರ ಕಾರ್ಯವೈಖರಿಗೆ ಇಡೀ ಬಣ ಮನಸೋತಿದೆ. ಈ ಹಿಂದೆ ಡಿ. ಸುಧಾಕರ್ ಅವರು ಸಹ ಚಳ್ಳಕೆರೆ ತಾಲೂಕಿನಿಂದಲೇ ಸ್ಪರ್ಧಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಸುದೀರ್ಘ ಕಾಲ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಈಗ ಅದೇ ಹಾದಿಯಲ್ಲಿ ರಘುಮೂರ್ತಿ ಅವರು ಹೆಜ್ಜೆ ಇಟ್ಟಿರುವುದು ವಿಶೇಷ. ಶಾಸಕ ಟಿ. ರಘುಮೂರ್ತಿ ಅವರ ಸುದೀರ್ಘ ರಾಜಕೀಯ ಅನುಭವ ಹಾಗೂ ಸಾರ್ವಜನಿಕ ರಂಗದ ಒಡನಾಟವು ಡಿಸಿಸಿ ಬ್ಯಾಂಕಿನ ಪ್ರಗತಿಗೆ ಮತ್ತಷ್ಟು ವೇಗ ನೀಡಲಿದೆ ಎಂದು ಸಹಕಾರಿ ವಲಯದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ರೈತರಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿನ ಮೂಲಕ ಸಿಗುವ ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುತ್ತಾರೆ ಎಂಬ ಮಾತು ಜನಸಾಮಾನ್ಯರಲ್ಲಿ ಕೇಳಿ ಬರುತ್ತಿದೆ. ಟಿ.ರಘುಮೂರ್ತಿ ಅವರ ಅವಿರೋಧ ಆಯ್ಕೆಗೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಸಹಕಾರಿ ಧುರೀಣರು, ಬ್ಯಾಂಕಿನ ನಿರ್ದೇಶಕರು ಹಾಗೂ ಅಭಿಮಾನಿಗಳು ತೀವ್ರ ಹರ್ಷ ವ್ಯಕ್ತಪಡಿಸಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನೂತನ ಅಧ್ಯಕ್ಷರಿಗೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.