ಚಿತ್ರದುರ್ಗ ಮೇ 31
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಈ ಮಹಾಪುರುಷರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂದಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಕರೆ ನೀಡಿದರು.
ಚಿತ್ರದುರ್ಗ ನಗರದಲ್ಲಿ ಸಂತೋಷ್ ಲಾಡ್ ಫೌಂಡೇಶನ್-ಧಾರವಾಡ ಇದರ ವತಿಯಿಂದ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಂದ ವೈಜ್ಞಾನಿಕ ಸಮಾಜ ನಿರ್ಮಾಣ ಸಾಧ್ಯ ಮುಗ್ಧ ಸಮಾಜವನ್ನು ಪ್ರಬುದ್ಧ ಸಮಾಜವನ್ನಾಗಿ ಪರಿವರ್ತಿಸಲು ಮತ್ತು ಸ್ತ್ರೀ ಸಮಾನತೆಗಾಗಿ ನಿರಂತರವಾಗಿ ಧ್ವನಿ ಎತ್ತಿದವರು ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು. ಈ ಮಹಾಪುರುಷರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂದಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಸ್ವಾಮೀಜಿ ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ ಸಿಗಬೇಕೆಂದು ಶ್ರಮಿಸಿದ ಮಹಾನ್ ಚೇತನಗಳು.ಅಜ್ಞಾನದಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನದ ಬೆಳಕು ನೀಡಿ ಪ್ರಬುದ್ಧತೆಯತ್ತ ಮುನ್ನಡೆಸಿದ ಕೀರ್ತಿ ಈ ಮೂವರು ಮಹನೀಯರಿಗೆ ಸಲ್ಲುತ್ತದೆ.ಇಂದಿನ ಯುವ ಪೀಳಿಗೆ ಮೂಢನಂಬಿಕೆಗಳಿಂದ ಹೊರಬಂದು ವೈಜ್ಞಾನಿಕ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂದಿನ ಸಮಾರಂಭಕ್ಕೆ ಬಂದಿರುವ ಸಾವಿರಾರು ವಿದ್ಯಾರ್ಥಿಗಳು ಯಾರೋ ಒತ್ತಾಯಪೂರ್ವಕವಾಗಿ ಕರೆತಂದವರಲ್ಲ. ಬದಲಿಗೆ ಜ್ಞಾನ ಮತ್ತು ಸಾಧನೆಯ ಹಸಿವಿನಿಂದ, ಸ್ವಪ್ರೇರಣೆಯಿಂದ ತಾವಾಗಿಯೇ ಒದಗಿ ಬಂದಿದ್ದಾರೆ. ಈ ಉತ್ಸಾಹವೇ ದೇಶದ ಪ್ರಗತಿಗೆ ಮುನ್ನುಡಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೂಸದುರ್ಗ ತಾ ಕುಂಚಿಟಿಗ ಸಂಸ್ಥಾನದ ಶ್ರೀ ಡಾ. ಶಾಂತವೀರ ಮಹಾಸ್ವಾಮೀಜೀ ಮಾತನಾಡಿ, ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ತತ್ವ ಮತ್ತು ಸಿದ್ಧಾಂತದಗಳಿಂದಲೇ ದೇಶದಲ್ಲಿ ಸಮಾನತೆ, ಸಹೋದರತೆ ಮತ್ತು ಪ್ರಗತಿ ಸಾಧಿಸಲು ಸಾಧ್ಯವಿದೆ ಸಮಾಜವನ್ನು ಗುಲಾಮಗಿರಿಯಲ್ಲಿ ಇಡಲು ಬಯಸುವ ಬಂಡವಾಳಶಾಹಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಹೊರಬರಲು ಬಾಬಾಸಾಹೇಬ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಸಮಾಜದಲ್ಲಿ ಇನ್ನೂ ಅಂಧಶ್ರದ್ಧೆ, ಮೂಢನಂಬಿಕೆ ಮತ್ತು ಕಂದಾಚಾರಗಳು ಜನರ ಮನಸ್ಸನ್ನು ಕತ್ತಲೆಯಲ್ಲಿಟ್ಟಿವೆ. ಶಿಕ್ಷಣವೇ ಮನುಷ್ಯನ ಬದುಕನ್ನು ಬದಲಾಯಿಸುವ ಮಹಾಶಕ್ತಿ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಂಡಾಗ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ಮಾತನಾಡಿ, ಇಂದಿನ ಯುವ ಪಿಳೀಗೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರ ಬಗ್ಗೆ ತಿಳಿಸುವುದರ ಅಗತ್ಯವಾಗಿದೆ, ಈಗಾಗಲೇ ಈ ರೀತಿಯಾದ ಮೂರು ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಾಲ್ಕನೇ ಕಾರ್ಯಕ್ರಮವಾಗಿದೆ, ಈ ಮೂರು ಜನ ಉತ್ತಮವಾದ ಸಂದೇಶಗಳನ್ನು ನಮಗೆ ನೀಡಿದ್ದಾರೆ ಅದರಂತೆ ನಡೆಯಬೇಕಿದೆ, ಇವರು ಕೇವಲ ತಮ್ಮ ಸಮುದಾಯಕ್ಕೆ ಮಾತ್ರವೇ ಸಂದೇಶವನ್ನು ನೀಡಲಿಲ್ಲ ಎಲ್ಲ ಸಮುದಾಯಗಳಿಗೂ ಸಹಾ ನೀಡಿದ್ದಾರೆ. ಇದನ್ನು ಎಲ್ಲರು ಸಹಾ ಬಳಕೆ ಮಾಡಬೇಕಿದೆ, ಬೇರೆ ಸಮುದಾಯದವರಿಗೂ ಸಹಾ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಸಂತೋಷ್ ಲಾಡ್ ಫೌಂಡೇಶನ್‍ನ ಸಂಚಾಲಕರಾದ ಕವಿತಾ ರೆಡ್ಡಿ ಮಾತನಾಡಿ, ಭಾರತದಲ್ಲಿ ಅಸಮಾನತೆ ಮತ್ತು ತಾರತಮ್ಯಗಳ ವಿರುದ್ಧ ಹೋರಾಡಿದ ಮಹಾ ನಾಯಕರಲ್ಲಿ ಮೂವರು ಪ್ರಮುಖವಾಗಿ ನಿಂತವರು ಭಗವಾನ್ ಬುದ್ಧ, ಬಸವೇಶ್ವರರು ಮತ್ತು ಬಿ. ಆರ್ ಅಂಬೇಡ್ಕರ್. ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಸಮಾಜಗಳಲ್ಲಿ ಹೋರಾಡಿದವರು. ಶಾಂತಿ, ಘನತೆ, ಗೌರವ, ದಯೆ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ನೆಲೆಗಟ್ಟಿನಲ್ಲಿ ನಿಂತು ಹೊಸ ಸಮಾಜವನ್ನು ಸೃಷ್ಟಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳನ್ನು ಗಟ್ಟಿಗೊಳಿಸಿ ಸಮಾಜವನ್ನು ಮುನ್ನಡೆಸಿದರು. ಇಂದು, ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನ ಇತರ ಭಾಗಗಳಲ್ಲಿ ಕೂಡ ಜಾತೀಯತೆ, ವರ್ಣಭೇಧ, ಧಾರ್ಮಿಕ ಮೂಲಭೂತವಾದ, ಉಗ್ರವಾದ ಮತ್ತು ಎತ್ತು ಅತಿ ಹಿಂಸಾತ್ಮಕತೆಯು ಸಮಾಜದ ಸಾಮಾಜಿಕ ರಚನೆಯನ್ನು ಅಭದ್ರಗೊಳಿಸುತ್ತಿವೆ. ಎಂದು ದೂರಿದರು.
ಬುದ್ದನ ಅಷ್ಠಾಂಗ ಮಾರ್ಗ ಒಂದು ವೈಜ್ಞಾನಿಕ ನೋಟದ ಬಗ್ಗೆ ಡಾ.ಸಂಜೀವ ಕುಲಕರ್ಣಿ, ಬುದ್ದನ ಧಮ್ಮ ಮತ್ತು ಮಹಿಳೆಯ ಬಗ್ಗೆ ಡಾ.ಅನುಸೂಯ ಕಾಂಬಳೆ, ಬಸವಣ್ಣನವರ ಅನನ್ಯ ಸಾಧನೆಗಳ ಬಗ್ಗೆ ರಂಜಾನ ದರ್ಗಾ, ಸಮಾನತೆ ಮತ್ತು ಅಂತರ್ಜಾತಿ ವಿವಾಹ ಬಸವಣ್ಣ ಉತ್ತುಂಗ ಸಾಧನೆಯ ಬಗ್ಗೆ ಡಾ.ವಿನಯ ವಕ್ಕುಂದ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪಯಣ ಸಂಕಲ್ಪದಿಂದ ಸಂವಿಧಾನದವರೆಗೆ ಬಗ್ಗೆ ಡಾ.ಅಪ್ಪಗೆರೆ ಸೋಮಶೇಖರ್ ಹಾಗೂ ಡಾ.ಬಿ. ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು 21ನೇ ಶತಮಾನದ ಭಾರತದಲ್ಲಿ ಪ್ರಸ್ತತತೆ ಬಗ್ಗೆ ಡಾ.ಜೆ ಸೋಮಶೇಖರ್ ಗೋಷ್ಟಿಗಳಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಶ್ರೀ ಡಾ.ಬಸವಪ್ರಭು ಮಹಾಸ್ವಾಮೀಜಿ ಭೋವಿಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಹರಿಹರದ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾವಿ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ. ಕೇತೇಶ್ವರ ಗುರುಪೀಠದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ ಭಾಗವಹಿಸಿದ್ದರು.