ಚಿತ್ರದುರ್ಗ ಜೂ. 02
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯಾದ್ಯಂತ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಶಾಲೆಗಳ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೀರ್ಘಾವಧಿಯ ಬೇಸಿಗೆ ರಜೆಯ ನಂತರ ವಿದ್ಯಾರ್ಥಿಗಳು ಮತ್ತೆ ಶಾಲೆಗಳತ್ತ ಮುಖ ಮಾಡಿದ್ದು, ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಸಂಭ್ರಮದಿಂದ ಆಚರಿಸಿವೆ.
ಬೇಸಿಗೆ ರಜೆಯ ಮೋಜು-ಮಸ್ತಿಯ ಬಳಿಕ ಮೊಬೈಲ್ ಮತ್ತು ದೂರದರ್ಶನದ ಪ್ರಪಂಚದಿಂದ ಹೊರಬಂದು ವಿದ್ಯಾರ್ಥಿಗಳು ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಶಾಲೆಗೆ ಮೊದಲ ದಿನ ಆಗಮಿಸಿದ ಮಕ್ಕಳನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕರು ಹೂವು ನೀಡಿ, ಸಿಹಿ ತಿನಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಇದರಿಂದ ಶಾಲಾ ಆವರಣಗಳಲ್ಲಿ ಹರ್ಷದ ವಾತಾವರಣ ಕಂಡುಬಂದಿತು.
ಹಲವು ಶಾಲೆಗಳಲ್ಲಿ ಮೊದಲ ದಿನವನ್ನು “ಮಕ್ಕಳ ಹಬ್ಬ”ದಂತೆ ಆಚರಿಸಲಾಯಿತು. ಶಾಲಾ ಆವರಣಗಳನ್ನು ಬಾಳೆ ಕಂದು, ತೋರಣಗಳು ಹಾಗೂ ಬಣ್ಣಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷ ಸಿಹಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಚಿತ್ರದುರ್ಗ ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ವತಿಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಸ್ವಾಗತ ಕೋರಲಾಯಿತು. ಮಕ್ಕಳಿಗೆ ಹೂವು ನೀಡಿ, ಆರತಿ ಬೆಳಗುವ ಮೂಲಕ ಶಾಲಾ ಕುಟುಂಬವು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು. ಶಾಲಾ ಕಟ್ಟಡ ಹಾಗೂ ಆವರಣವನ್ನು ವಿವಿಧ ರೀತಿಯ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಹಬ್ಬದ ಸಂಭ್ರಮ ಮನೆಮಾಡಿತ್ತು.
ಈ ಸಂದರ್ಭದಲ್ಲಿ ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್ಜೀ, ಕಾರ್ಯದರ್ಶಿ ಸುರೇಶ್ ಕುಮಾರ್ಜೀ, ಉಪಾಧ್ಯಕ್ಷ ಮುಖೇಶ್ಜೀ, ಸಹ ಕಾರ್ಯದರ್ಶಿ ಸುರೇಶ್ ಪಟಿಯಾತ್ಜೀ, ನಿರ್ದೇಶಕ ಜವೇರಿಲಾಲ್ಜೀ ಸೇರಿದಂತೆ ಶಾಲೆಯ ಮುಖ್ಯಸ್ಥರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಹೊಸ ಶೈಕ್ಷಣಿಕ ವರ್ಷದ ಆರಂಭದೊಂದಿಗೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ಹೊಸ ಗುರಿಗಳು ಮತ್ತು ಹೊಸ ಕನಸುಗಳು ಮೂಡಿದ್ದು, ಶಿಕ್ಷಣದ ಪಯಣ ಮತ್ತೊಮ್ಮೆ ಆರಂಭಗೊಂಡಿದೆ.