ಚಿತ್ರದುರ್ಗ:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸರ್ಕಾರಿ ಸೇವೆಯಲ್ಲಿ ಬಡ್ತಿ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಕನಸು. ವರ್ಷಗಳ ಶ್ರಮ, ಸೇವಾ ಹಿರಿತನ ಮತ್ತು ನಿಷ್ಠೆಗೆ ಸಿಗುವ ಮಾನ್ಯತೆಯೇ ಪದೋನ್ನತಿ. ಆದರೆ ಆ ಬಹುನಿರೀಕ್ಷಿತ ಬಡ್ತಿ ದೊರೆತ ಮರುದಿನವೇ ನಿವೃತ್ತಿಯಾಗಬೇಕಾದರೆ ಅದು ಸಂತಸದ ಜೊತೆಗೆ ಒಂದು ರೀತಿಯ ಬೇಸರವನ್ನೂ ಉಂಟುಮಾಡುತ್ತದೆ. ಇಂತಹ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಸೇವೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸ್ಕಿಲ್ ಟ್ರೇಡ್ಸ್‌ಮನ್ (ವೃಂದ–ಸಿ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈ.ಕೆ. ಮಲ್ಲಪ್ಪ ಅವರಿಗೆ ಹಲವು ವರ್ಷಗಳ ಸೇವೆಯ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ಸೇವಾ ಅಭಿಯಂತರರು (ವೃಂದ–ಬಿ) ಹುದ್ದೆಗೆ ಪದೋನ್ನತಿ ನೀಡಿ ಮೇ 29ರಂದು ಇಲಾಖೆ ಆದೇಶ ಹೊರಡಿಸಿತ್ತು. 1966ರ ಜೂನ್ 1ರಂದು ಜನಿಸಿದ ಮಲ್ಲಪ್ಪ ಅವರು ಮೇ 31ರಂದು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿವೃತ್ತಿಯಾಗಬೇಕಾಗಿತ್ತು. ಆದರೆ ಮೇ 31 ಭಾನುವಾರ ಸರ್ಕಾರಿ ರಜೆ ಆಗಿದ್ದರಿಂದ, ನಿಯಮಾನುಸಾರ ಮೇ 30ರ ಮಧ್ಯಾಹ್ನವೇ ಇಲಾಖೆಯು ಅವರನ್ನು ಸರ್ಕಾರಿ ಸೇವೆಯಿಂದ ವಿಮುಕ್ತಿಗೊಳಿಸಿದೆ.
ಹೀಗಾಗಿ ಮೇ 29ರಂದು ಪದೋನ್ನತಿ ಆದೇಶ ಪಡೆದ ಮಲ್ಲಪ್ಪ ಅವರು ಮೇ 30ರ ಬೆಳಗ್ಗೆ ಹೊಸ ಹುದ್ದೆಯ ಅಧಿಕಾರವನ್ನು ಸ್ವೀಕರಿಸಿ, ಕೇವಲ ಒಂದೇ ದಿನದೊಳಗೆ ಸಂಜೆ ನಿವೃತ್ತಿ ಹೊಂದುವ ಅಪರೂಪದ ಅನುಭವಕ್ಕೆ ಸಾಕ್ಷಿಯಾದರು. ವರ್ಷಗಳ ಕಾಲ ಪದೋನ್ನತಿಗಾಗಿ ಕಾಯುತ್ತಿದ್ದ ಮಲ್ಲಪ್ಪ ಅವರಿಗೆ ಕೊನೆ ಕ್ಷಣದಲ್ಲಿ ಬಡ್ತಿ ದೊರೆತಿರುವುದು ಸಂತಸದ ಸಂಗತಿಯಾದರೆ, ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಅವಕಾಶ ಸಿಗದಿರುವುದು ಸಹಜವಾಗಿಯೇ ಬೇಸರ ಮೂಡಿಸಿದೆ. ಆದರೂ ನಿವೃತ್ತಿಯ ಹೊತ್ತಿನಲ್ಲಿ ಉನ್ನತ ಹುದ್ದೆಯೊಂದಿಗೆ ಸೇವಾ ಬದುಕಿಗೆ ತೆರೆ ಎಳೆದಿರುವುದು ಅವರ ವೃತ್ತಿಜೀವನದ ವಿಶೇಷ ಅಧ್ಯಾಯವಾಗಿ ಉಳಿದಿದೆ.
ಸರ್ಕಾರಿ ಸೇವೆಯಲ್ಲಿ ಬಡ್ತಿ ಮತ್ತು ನಿವೃತ್ತಿ ಒಂದೇ ಸಂದರ್ಭದಲ್ಲಿ ಎದುರಾದ ಈ ಘಟನೆ ಇಲಾಖೆಯ ಸಿಬ್ಬಂದಿ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಬಡ್ತಿ ಸಿಕ್ಕ ಖುಷಿ, ಮರುದಿನವೇ ನಿವೃತ್ತಿಯ ಬೇಸರ ಎಂಬ ಅಪರೂಪದ ಕ್ಷಣಕ್ಕೆ ಮಲ್ಲಪ್ಪ ಅವರು ಸಾಕ್ಷಿಯಾಗಿದ್ದಾರೆ.