ಚಿತ್ರದುರ್ಗ ಜೂ. 04 3
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸರ್ಕಾರದಿಂದಾಗಲೀ, ಸಂಘಸಂಸ್ಥೆಯಿಂದಾಗಲಿ ಯಾವುದೇ ಒಂದು ವಸ್ತುವನ್ನು ಫಲಾನುಭವಿಗಳಿಗೆ ನೀಡಿದಾಗ ಅವರು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿ ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಿದರೆ ಅದೇ ನೀಡಿದವರಿಗೆ ನೀಡುವ ಕೊಡುಗೆ ಎಂದು ರೋಟರಿ ಕ್ಲಬ್ನ 3160 ಡಿಸ್ಟಿಕ್ ಗೌರ್ನರ್ ಎಂ.ಕೆ. ರವೀಂದ್ರ ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.

ಚಿತ್ರದುರ್ಗ ನಗರದ ಮೇದೇಹಳ್ಳಿ ರಸ್ತೆಯಲ್ಲಿನ ಆಧಿಶೇಷ ರೋಟರಿ ಭವನದಲ್ಲಿ ಬುಧವಾರ ಸಂಜೆ ರೋಟರಿ ಫೌಂಡೇಷನ್ ಇಂಡಿಯಾ, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ, ರೋಟರಿ ಕ್ಲಬ್ ಚಿತ್ರದುರ್ಗ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೂಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ರೋಟರಿ ಕ್ಲಬ್ ಸ್ಥಾಪನೆಯಾಗಿ 121 ವರ್ಷವಾಗಿದೆ, ಪ್ರಪಂಚದ 200 ದೇಶಗಳಲ್ಲಿ ಇದರ ಅಸ್ಥಿತ್ವ ಇದೆ, ಶಿಕ್ಷಣ, ಆರೋಗ್ಯ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಇದರೊಂದಿಗೆ ದೇಶದಲ್ಲಿ ಪೋಲಿಯೊವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಕಳೆದ 40 ವರ್ಷಗಳಿಂದ ರೋಟರಿ ಕ್ಲಬ್ ಖರ್ಚಿನಲ್ಲಿ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮಲ್ಲಿ 15 ವರ್ಷದಿಂದ ಪೋಲಿಯೊ ಪ್ರಕರಣಗಳು ಕಡಿಮೆಯಾಗಿವೆ ಎಂದರು.
ಚಿತ್ರದುರ್ಗ ರೋಟರಿ ಕ್ಲಬ್ನಲ್ಲಿನ ಸದಸ್ಯರು ತಾವು ಮಾಡುವ ವ್ಯವಹಾರದಲ್ಲಿ ಒಂದಿಷ್ಟು ಹಣವನ್ನು ಈ ರೀತಿಯಾದ ಸಮಾಜ ಮುಖಿಯಾದ ಕಾರ್ಯಗಳಿಗೆ ಬಳಕೆಯನ್ನು ಮಾಡುವ ಕಾರ್ಯವನ್ನು ಮಾಡಲಾ ಗುತ್ತಿದೆ. ಈ ಹಿನ್ನಲೆಯಲ್ಲಿ ಈಗ ನಾವು ನಿಮಗೆ ನೀಡುತ್ತಿರುವ ಹೊಲಿಗೆ ಯಂತ್ರಗಳನ್ನು ಸರಿಯಾದ ರೀತಿಯಲ್ಲಿ ಬಳಕೆಯನ್ನು ಮಾಡಿಕೊಳ್ಳಿ ಇದರಿಂದ ದುಡಿಮೆಯನ್ನು ಮಾಡುವುದರ ಮೂಲಕ ಅರ್ಥಿಕವಾಗಿ ಪ್ರಗತಿಯನ್ನು ಸಾಧಿಸುವುದರ ಮೂಲಕ ನೀವು ಸಹಾ ಎಲ್ಲರಂತೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಕರೆ ನೀಡಿದರು.

ಮಾಜಿ ಗೌರ್ನರ್ ಮಧುಪ್ರಸಾದ್ ಮಾತನಾಡಿ, ಈ ಒಂದು ಕಾರ್ಯಕ್ರಮ ನಡೆಯಬೇಕಾದರೆ ಇದಕ್ಕೆ ಹಲವಾರು ತಿಂಗಳುಗಳ ಶ್ರಮ ಇದೆ. ಇದ್ದಲ್ಲದೆ ಹಲವಾರು ಜನ ಇದಕ್ಕೆ ನೆರವಾಗಿದ್ದಾರೆ, ಇವರ ಸಹಾಯದಿಂದ ನಾವುಗಳು ನಿಮಗೆ ಈ ಹೊಲಿಗೆಯಂತ್ರವನ್ನು ನೀಡಲು ಸಹಾಯವಾಗಿದೆ. ನಮ್ಮ ಸಂಸ್ಥೆಯವತಿಯಿಂದ ರೋಟರಿ ಸಭಾ ಭವನದಲ್ಲಿ ಕಡಿಮೆ ದರದಲ್ಲಿ ಡಯಾಲಿಸಿಸ್, ಫಿಯೋಥೇರಪಿ, ಯುವ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗವನ್ನು ಕೂಡಿಸುವಲ್ಲಿ ಮುಂದಾಗಿದೆ, ಉಚಿತವಾದ ಚಿಕಿತ್ಸೆಯನ್ನು ಸಹಾ ನೀಡಲಾಗುತ್ತಿದೆ. ನಮ್ಮ ಮೂರು ಕ್ಲಬ್ಗಳಿಂದ ಈ ಹೊಲಿಗೆಯಂತ್ರವನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗೌರ್ನರ್ ಕಿರಣ್ ಕುಮಾರ್, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟನ ಅಧ್ಯಕ್ಷ ಶಶಿಧರ್ ಗುಪ್ತ, ಕಾರ್ಯದರ್ಶಿ ಶಿವಕುಮಾರ್, ರೋಟರಿ ಕ್ಲಬ್ನ ಅಧ್ಯಕ್ಷೆ ಶ್ರೀಮತಿ ಭಾಗ್ಯಲಕ್ಷ್ಮಿ, ಕಾರ್ಯದರ್ಶಿ ಅನುರಾಧ ವಿಶ್ವನಾಥ್, ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ದಿಲ್ಷಾದ್ ಉನ್ನಿಸ, ಕಾರ್ಯದರ್ಶಿ ಅಮೃತ ಸಂತೋಷ, ರೋ.ವೇದ ರವೀಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಮೇಶ್ ತುಪ್ಪದ್ ಭಾಗವಹಿಸಿದ್ದರು.