ಚಳ್ಳಕೆರೆ ಶಾಸಕ ರಘುಮೂರ್ತಿ ‘ಅಭಿವೃದ್ಧಿಯ ಹರಿಕಾರ’: ಸಚಿವ ಭಾಗ್ಯಕ್ಕಾಗಿ ವಿವಿಧ ಮಠಾಧೀಶರ ಹಾರೈಕೆ.

ಚಳ್ಳಕೆರೆ:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ತಾಲ್ಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಜಿಲ್ಲಾ ಕೇಂದ್ರವನ್ನು ಮೀರಿಸುವಂತಿದ್ದು, ಕ್ಷೇತ್ರದ ಸರ್ವಾಂಗೀಣ ಪ್ರಗತಿ ಕಣ್ಣಿಗೆ ಕಟ್ಟುವಂತೆ ಕಾಣಿಸುತ್ತಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಶ್ಲಾಘಿಸಿದ್ದಾರೆ.

ಶಾಸಕ ಟಿ. ರಘುಮೂರ್ತಿ ಅವರ ಜನ್ಮದಿನೋತ್ಸವದಲ್ಲಿ ಕಾರ್ಯವೈಖರಿ ಹಾಗೂ ತಾಲ್ಲೂಕಿನ ಪ್ರಗತಿಯ ಕುರಿತು ಮಾತನಾಡಿದ ಶ್ರೀಗಳು, ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇಲ್ಲಿನ ಅಭಿವೃದ್ಧಿ ಕುರಿತು ಕೇವಲ ಅಕ್ಷರಗಳು ಅಥವಾ ಮಾತುಗಳು ಮಾತನಾಡುತ್ತಿಲ್ಲ; ಬದಲಿಗೆ ಇಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡಗಳು, ಗುಣಮಟ್ಟದ ರಸ್ತೆಗಳು, ಅಭಿವೃದ್ಧಿಗೊಂಡಿರುವ ಜಲಮೂಲಗಳು, ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳು, ಸುಸಜ್ಜಿತ ಸಮುದಾಯ ಭವನಗಳು ಹಾಗೂ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡ-ಮರ-ಬಳ್ಳಿಗಳೇ ಇಲ್ಲಿನ ನೈಜ ಬೆಳವಣಿಗೆಯನ್ನು ಸಾರುತ್ತಿವೆ,” ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. ಕ್ಷೇತ್ರದಲ್ಲಿ ಭೌತಿಕ ಮೂಲಸೌಕರ್ಯಗಳ ಜೊತೆಗೆ ಪರಿಸರ ಕಾಳಜಿಗೂ ಆದ್ಯತೆ ನೀಡಿ, ಹಸಿರೀಕರಣಕ್ಕೆ ಒತ್ತು ಕೊಟ್ಟಿರುವುದು ತಾಲ್ಲೂಕಿನ ಸುಸ್ಥಿರ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, “ಅಭಿವೃದ್ಧಿ ಕೆಲಸಗಳಲ್ಲಿ ಅಪಾರ ದಕ್ಷತೆ ಹೊಂದಿರುವ, ಸೌಜನ್ಯ ಹಾಗೂ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ನಾಯಕರು ಚಳ್ಳಕೆರೆ ಶಾಸಕ ರಘುಮೂರ್ತಿ,” ಎಂದು ಬಣ್ಣಿಸಿದರು ಅವರು ಕೇವಲ ರಾಜಕಾರಣಿಯಲ್ಲ, ಹಠಗಾರ, ಛಲಗಾರ ಹಾಗೂ ಸದಾ ಹಸನ್ಮುಖಿಯಾಗಿರುವ ಅಪರೂಪದ ವ್ಯಕ್ತಿತ್ವದವರು. ಸದಾ ಸುಖಿಯಾಗಿರುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರಲ್ಲಿದೆ. ಛಲದ ಬಿಡದ ವ್ಯಕ್ತಿತ್ವ. ಸ್ವತಃ ಇಂಜಿನಿಯರ್ ಆಗಿರುವುದರಿಂದ ತಾಂತ್ರಿಕ ಜ್ಞಾನ ಅವರಲ್ಲಿದೆ. ಹೀಗಾಗಿಯೇ ಕ್ಷೇತ್ರದ ಪ್ರತಿ ಅಭಿವೃದ್ಧಿ ಹಂತಗಳಲ್ಲೂ ಅವರು ಅತ್ಯಂತ ದಕ್ಷತೆ ಹಾಗೂ ಪಾರದರ್ಶಕತೆಯನ್ನು ತುಂಬಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದ ಇಡೀ ಜಿಲ್ಲೆಗೆ ಮಾದರಿ ರಾಜಕಾರಣಿಯಾಗಿದ್ದಾರೆ. ಇಂತಹ ನಾಯಕರಿಗೆ ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಜನಪರ ಕೆಲಸಗಳು ಸಾಧ್ಯವಾಗುತ್ತವೆ. ಅವರಿಗೆ ಉನ್ನತ ಜವಾಬ್ದಾರಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಎಂದು ಶ್ರೀಗಳು ಹರಸಿದರು.

ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ ಕ್ಷೇತ್ರದ ಅಜಾತಶತ್ರು, ಅಭಿವೃದ್ಧಿಯ ಹರಿಕಾರರಾದ ಶಾಸಕ ಟಿ. ರಘುಮೂರ್ತಿ ಅವರಿಗೆ ಜನಪರ ಕಾರ್ಯಗಳನ್ನು ಇನ್ನಷ್ಟು ಹೆಚ್ಚಾಗಿ ಮಾಡಲು ಭಗವಂತನು ಹೆಚ್ಚಿನ ಶಕ್ತಿ ನೀಡಲಿ. ಅವರಿಗೆ ಶೀಘ್ರದಲ್ಲೇ ಸಚಿವ ಭಾಗ್ಯ ದೊರೆಯಲಿ,” ಎಂದು ಆಶೀರ್ವದಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುವ ಅಜಾತಶತ್ರು ಮತ್ತು ಸದಾ ಹಸನ್ಮುಖಿ ನಾಯಕ. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ ಅವರಲ್ಲಿದೆ. ಕ್ಷೇತ್ರದಾದ್ಯಂತ ಶೈಕ್ಷಣಿಕ ಸುಧಾರಣೆ ತರುವಲ್ಲಿ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅವರು ಶ್ರಮಿಸುತ್ತಿದ್ದಾರೆ. ಅವರೊಬ್ಬ ನಿಜವಾದ ಅಭಿವೃದ್ಧಿ ಹರಿಕಾರ ಹಾಗೂ ಶೈಕ್ಷಣಿಕ ಸುಧಾರಕ. ಬರಡಾಗಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ತರುವ ಮೂಲಕ ರೈತರ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಜನಪರ ನಾಯಕನಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಜವಾಬ್ದಾರಿ ಸಿಗಬೇಕು. ಅವರಿಗೆ ಸಚಿವ ಸ್ಥಾನ ಒದಗಿ ಬರಲಿ ಎಂದು ಹಾರೈಸುತ್ತೇನೆ,” ಎಂದರು.

ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಕ್ಷೇತ್ರದ ಯಾವುದೇ ಒಂದು ವರ್ಗ ಅಥವಾ ಪ್ರದೇಶಕ್ಕೆ ಸೀಮಿತವಾಗದೆ, ಎಲ್ಲಾ ರಂಗಗಳಲ್ಲೂ ಸಮಾನವಾಗಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿರುವ ಶಾಸಕರ ಕಾರ್ಯವೈಖರಿ ಶ್ಲಾಘನೀಯ. ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತಿರುವ ಇಂತಹ ದಕ್ಷ ನಾಯಕರಿಗೆ ರಾಜ್ಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಸಿಗಬೇಕಿದೆ. ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಅವರ ಜನಸೇವೆ ಹೀಗೆಯೇ ಮುಂದುವರಿಯಲಿ. ಶಾಸಕರಿಗೆ ಸಚಿವ ಭಾಗ್ಯ ಕೂಡಿಬರಲಿ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇನೆ,” ಎಂದು ಹರಸಿದರು.

ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ ಶಾಸಕ ರಘುಮೂರ್ತಿ ಅವರು ಕೇವಲ ಹೆಸರಿಗಷ್ಟೇ ಮೂರ್ತಿಯಲ್ಲ, ಸದಾ ಹಸನ್ಮುಖಿಯಾಗಿ ಜನರನ್ನು ಬರಮಾಡಿಕೊಳ್ಳುವ ಚಳ್ಳಕೆರೆಯ ‘ನಗುಮೂರ್ತಿ’. ಅವರ ಸೌಮ್ಯ ಸ್ವಭಾವವೇ ಕ್ಷೇತ್ರದ ಜನರನ್ನು ಅವರತ್ತ ಸೆಳೆಯುತ್ತದೆ. ಕ್ಷೇತ್ರದ ಪ್ರತಿಯೊಂದು ವರ್ಗದ, ಪ್ರತಿಯೊಬ್ಬ ಬಡವನ ಕಷ್ಟ ಸುಖಗಳಿಗೆ ಸ್ಪಂದಿಸುವ ಅಪಾರ ಜನಪರ ಕಾಳಜಿ ಅವರಿಗಿದೆ. ಜನರ ಕಣ್ಣೀರು ಒರೆಸುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಚಳ್ಳಕೆರೆ ಕ್ಷೇತ್ರವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ಅವರು, ಪ್ರತಿಯೊಂದು ಹಳ್ಳಿಗೂ ಮೂಲಸೌಕರ್ಯಗಳನ್ನು ತಲುಪಿಸುವ ಮೂಲಕ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ. ಇಂತಹ ನಾಯಕನಿಗೆ ಭಗವಂತನು ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ನೀಡಿ ಹರಸಲಿ,” ಎಂದು ಶ್ರೀಗಳು ಶುಭ ಹಾರೈಸಿದರು.

ಸಮಾರಂಭದಲ್ಲಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ, ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು, ಶ್ರೀ ಕುಂಬಾರ ಗುಂಡಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವ ಕುಂಬಾರಗುಂಡಯ್ಯಾ ಮಹಾಸ್ವಾಮಿಗಳು, ಶ್ರೀ ಹಡಪದ ಗುರುಪೀಠದ ಜಗದ್ಗುರು ಶ್ರೀ ಅನ್ನಧಾನಿ ಭಾರತೀ ಅಪ್ಪಣ್ಣ ಮಹಾಸ್ವಾಮಿಗಳು, ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಹಾವೇರಿಯ ಶಾಂತಲಿಂಗ ಸ್ವಾಮೀಜಿ, ಬೀದರ ಶಿವಾನಂದ ಸ್ವಾಮೀಜಿ, ತಿಳುವಳ್ಳಿಯ ನಿರಂಜನ ಸ್ವಾಮೀಜಿ, ಕೊಲ್ಲಾಪುರದ ಕಿರಣ ಸ್ವಾಮೀಜಿ, ಬೆಳಗಾವಿಯ ಜಯದೇವ ಸ್ವಾಮೀಜಿ, ಬಂಜಾರ ಸಮುದಾಯದ ನಂದಮಸಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *