ಚಿತ್ರದುರ್ಗ: ಜೂನ್ 12.
ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್,
ಇದೇ ಜೂನ್ 21ರಂದು ಆಚರಿಲಾಗುವ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ವತಿಯಿಂದ ನಗರದ ಕೆಳಗೋಟೆಯಲ್ಲಿರುವ ಜಿಲ್ಲಾ ಆಯುಷ್ ಕಛೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಕರೆಯಲಾಗಿತ್ತು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಅಧ್ಯಕ್ಷತೆ ವಹಿಸಿದ್ದರು.

ಸಭೆಗೆ ನಗರದ ಹಲವಾರು ಯೋಗ ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಜೂನ್ 21 ಭಾನುವಾರ ಹಮ್ಮಿಕೊಳ್ಳಲಾಗಿರುವ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಎಲ್ಲರ ಅಭಿಪ್ರಾಯದಂತೆ ಈ ಬಾರಿಯ ಯೋಗ ದಿನಾಚರಣೆ ಪ್ರಧಾನ ಕಾರ್ಯಕ್ರಮ ನಗರದ ಹೊರವಲಯದಲ್ಲಿರುವ ಮುರುಘಾ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು ಹಾಗೂ ನಗರದ ಜನರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 21ರ ಯೋಗ ದಿನಾಚರಣೆ ಮುನ್ನಾದಿನವಾದ ಜೂನ್ 20ರ ಶನಿವಾರ ನಗರದಾದ್ಯಂತ ಯೋಗ ಜಾಗೃತಿ ಜಾಥ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು ಈ ವಿಷಯವನ್ನು ಮುಂದೆ ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮತ್ತೊಮ್ಮೆ ಅನುಮೋದನೆ ಪಡೆದು ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ತಿಳಿಸಿದರು.
ಇದಕ್ಕೂ ಮುನ್ನ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ನಾರದಮುನಿ ಸಭೆಗೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ 2026 ಈ ಸಾಲಿನ ಯೋಗ ದಿನಾಚರಣೆಯ ವಿಶೇಷತೆಗಳ ಬಗ್ಗೆ ಸಭೆಯಲ್ಲಿ ಸಂಕ್ಷಿಪ್ತವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಟಿ ಅವರನ್ನು ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಚಿತ್ರದುರ್ಗ ಜನರೊಂದಿಗೆ ಯೋಗ ಸಂಸ್ಥೆಗಳೊಂದಿಗೆ ತಮಗಿದ್ದ ಆತ್ಮೀಯ ಒಡನಾಟವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಷ್ ಆಡಳಿತಾಧಿಕಾರಿ ಡಾ.ವಿಶ್ವನಾಥ್ ಹಿರೇಮಠ್ , ಆಯುಷ್ ಯೋಗ ತರಬೇತುದಾರರಾದ ರವಿ ಕೆ.ಅಂಬೇಕರ್, ತಿಪ್ಪೇಸ್ವಾಮಿ ಎಂ., ಜಿಲ್ಲಾ ಯೋಗ ಸಂಸ್ಥೆಯ ಚಿನ್ಮಯಾನಂದ ಜೀ, ಮುರಳಿ, ರಾಮಲಿಂಗಣ್ಣ ಇನ್ನಿತರರು ಸಭೆಯಲ್ಲಿ ಉಪಸ್ಥಿತಿ ಇದ್ದರು.