Tech: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ವೇದಿಕೆಗಳಲ್ಲಿ ಒಂದಾದ ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಮಹತ್ವದ ಸೌಲಭ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ ವ್ಯಾಟ್ಸಾಪ್ ವೆಬ್ ಬಳಸುವವರು ಪ್ರತ್ಯೇಕ ಡೆಸ್ಕ್ಟಾಪ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯವಿಲ್ಲದೆ ನೇರವಾಗಿ ವೆಬ್ ಬ್ರೌಸರ್ ಮೂಲಕವೇ ಗ್ರೂಪ್ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡಬಹುದಾಗಿದೆ.
ಈವರೆಗೆ ವಿಡಿಯೋ ಮತ್ತು ವಾಯ್ಸ್ ಕರೆಗಳ ಸೌಲಭ್ಯ ಮುಖ್ಯವಾಗಿ ಮೊಬೈಲ್ ಹಾಗೂ ಡೆಸ್ಕ್ಟಾಪ್ ಅಪ್ಲಿಕೇಶನ್ಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಹೊಸ ಅಪ್ಡೇಟ್ ಮೂಲಕ ವೆಬ್ ಬ್ರೌಸರ್ ಬಳಸುವವರಿಗೆ ಸಹ ಈ ಅನುಕೂಲವನ್ನು ವಿಸ್ತರಿಸಲಾಗಿದೆ.
32 ಮಂದಿ ಒಂದೇ ವೇಳೆ ಕಾಲ್ನಲ್ಲಿ ಭಾಗವಹಿಸಬಹುದು
ಹೊಸ ಫೀಚರ್ ಅಡಿಯಲ್ಲಿ ಗರಿಷ್ಠ 32 ಮಂದಿ ಒಂದೇ ಸಮಯದಲ್ಲಿ ಗ್ರೂಪ್ ವಿಡಿಯೋ ಅಥವಾ ವಾಯ್ಸ್ ಕಾಲ್ನಲ್ಲಿ ಸೇರಿಕೊಳ್ಳಬಹುದು. ಇದರಿಂದ ಕುಟುಂಬ, ಸ್ನೇಹಿತರು, ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿ ಸಿಬ್ಬಂದಿ ಸುಲಭವಾಗಿ ವರ್ಚುವಲ್ ಸಭೆಗಳನ್ನು ನಡೆಸಲು ಸಾಧ್ಯವಾಗಲಿದೆ.
ಸ್ಕ್ರೀನ್ ಶೇರಿಂಗ್ ಸೌಲಭ್ಯ
ವಾಟ್ಸಾಪ್ ವೆಬ್ನಲ್ಲಿ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನೂ ಸೇರಿಸಲಾಗಿದೆ. ಇದರ ಮೂಲಕ ಬಳಕೆದಾರರು ತಮ್ಮ ಪರದೆಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಆನ್ಲೈನ್ ತರಗತಿಗಳು, ಪ್ರಸ್ತುತಿಗಳು ಹಾಗೂ ಕಚೇರಿ ಸಭೆಗಳಲ್ಲಿ ಈ ಸೌಲಭ್ಯ ಹೆಚ್ಚು ಉಪಯುಕ್ತವಾಗಲಿದೆ.
ಮೀಟಿಂಗ್ ಲಿಂಕ್ ರಚನೆಗೆ ಅವಕಾಶ
ಜೂಮ್ ಮತ್ತು ಗೂಗಲ್ ಮೀಟ್ ಮಾದರಿಯಲ್ಲೇ ಇದೀಗ ವ್ಯಾಟ್ಸಾಪ್ ವೆಬ್ನಲ್ಲೂ ಮೀಟಿಂಗ್ ಲಿಂಕ್ ರಚಿಸುವ ವ್ಯವಸ್ಥೆ ಲಭ್ಯವಾಗಲಿದೆ. ಒಮ್ಮೆ ಸೃಷ್ಟಿಸಿದ ಲಿಂಕ್ ಸುಮಾರು 30 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಇದರಿಂದ ಸಭೆಗಳಿಗೆ ಸದಸ್ಯರನ್ನು ಸುಲಭವಾಗಿ ಆಹ್ವಾನಿಸಲು ಸಾಧ್ಯವಾಗಲಿದೆ.
ಆಯ್ದ ಸದಸ್ಯರಿಗೆ ಮಾತ್ರ ಕರೆ
ಗ್ರೂಪ್ನಲ್ಲಿ ಹೆಚ್ಚಿನ ಸದಸ್ಯರಿದ್ದರೂ, ಕರೆ ವೇಳೆ ನಿರ್ದಿಷ್ಟ ಸದಸ್ಯರನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಂಪರ್ಕಿಸುವ ಅವಕಾಶ ನೀಡಲಾಗಿದೆ. ಜೊತೆಗೆ ‘ವೇಟಿಂಗ್ ರೂಂ’ ವ್ಯವಸ್ಥೆಯನ್ನೂ ಸೇರಿಸಲಾಗಿದ್ದು, ಸಭೆಯ ನಿರ್ವಹಣೆಗೆ ಹೆಚ್ಚಿನ ನಿಯಂತ್ರಣ ಸಿಗಲಿದೆ.
ಸುರಕ್ಷತೆಗೆ ಆದ್ಯತೆ
ವಾಟ್ಸಾಪ್ನ ಎಲ್ಲಾ ಕರೆಗಳಂತೆ ವೆಬ್ ಮೂಲಕ ನಡೆಯುವ ವಿಡಿಯೋ ಮತ್ತು ವಾಯ್ಸ್ ಕರೆಗಳೂ ಸಂಪೂರ್ಣವಾಗಿ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಹೊಂದಿರುತ್ತವೆ. ಇದರಿಂದ ಬಳಕೆದಾರರ ಸಂಭಾಷಣೆ ಸುರಕ್ಷಿತವಾಗಿದ್ದು, ಹೊರಗಿನವರು ಅಥವಾ ಕಂಪನಿಯೂ ಸಹ ಕರೆಗಳ ವಿಷಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ಶೀಘ್ರದಲ್ಲೇ ಎಲ್ಲರಿಗೂ ಲಭ್ಯ
ಈ ಹೊಸ ಫೀಚರ್ ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಯಶಸ್ವಿ ಪರೀಕ್ಷೆಯ ಬಳಿಕ ಶೀಘ್ರದಲ್ಲೇ ವಿಶ್ವದಾದ್ಯಂತ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವಿಶೇಷವಾಗಿ ಲಿನಕ್ಸ್ ಬಳಕೆದಾರರಿಗೆ ಈ ಅಪ್ಡೇಟ್ ಹೆಚ್ಚಿನ ಅನುಕೂಲವನ್ನು ನೀಡಲಿದ್ದು, ಯಾವುದೇ ಹೆಚ್ಚುವರಿ ಸಾಫ್ಟ್್ವೇರ್ ಇಲ್ಲದೆ ಬ್ರೌಸರ್ನಲ್ಲೇ ಸಭೆಗಳಲ್ಲಿ ಭಾಗವಹಿಸಲು ನೆರವಾಗಲಿದೆ.
ವಾಟ್ಸಾಪ್ ವೆಬ್ಗೆ ಸೇರ್ಪಡೆಯಾಗಿರುವ ಹೊಸ ಗ್ರೂಪ್ ಕಾಲಿಂಗ್, ಸ್ಕ್ರೀನ್ ಶೇರಿಂಗ್ ಹಾಗೂ ಮೀಟಿಂಗ್ ಲಿಂಕ್ ಸೌಲಭ್ಯಗಳು ಆನ್ಲೈನ್ ಸಂವಹನವನ್ನು ಮತ್ತಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿಸಲಿವೆ. ಇದರಿಂದ ವಾಟ್ಸಾಪ್ ಕೇವಲ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಉಳಿಯದೆ, ಸಂಪೂರ್ಣ ಸಂವಹನ ವೇದಿಕೆಯಾಗುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
