ಚಿತ್ರದುರ್ಗ, ಜೂ 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಸರಸ್ವತಿಪುರಂ ನಿವಾಸಿಯಾಗಿದ್ದ ಕೃಷಿಕ, ಲೇಖಕ. ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ (87 ವರ್ಷ) ಅವರು ಜೂ.20ರ ಶನಿವಾರ ಬೆಳಿಗ್ಗೆ ಅನಾರೋಗ್ಯದ ಕಾರಣದಿಂದ ನಿಧನರಾಗಿ ದ್ದಾರೆ.
ಅವರ ನಿಧನದಿಂದಾಗಿ ಚಿತ್ರದುರ್ಗ ಜಿಲ್ಲೆಯು ತನ್ನ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ಲೋಕದ ಧ್ರುವತಾರೆಯೊಂದನ್ನು ಕಳೆದುಕೊಂಡಂತಾಗಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಜೂ.21ರ ಭಾನುವಾರ ಹಿರಿಯೂರು ತಾಲ್ಲೂಕು ಗೌನಹಳ್ಳಿಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೌನಹಳ್ಳಿಯ ತಂದೆ ಗೊಂಚಿಗಾರ ಸಿದ್ದಯ್ಯ ಮತ್ತು ತಾಯಿ ಲಿಂಗಮ್ಮ ದಂಪತಿಗಳ ಹಿರಿಯ ಮಗನಾಗಿ 30-10-1939 ರಲ್ಲಿ ಜಿ.ಎಸ್. ಉಜ್ಜಿನಪ್ಪ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ (1962) ಹಾಗೂ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನಿಂ ದ ಡಿಎಸ್‍ಎಸ್‍ಎಪ ಸ್ನಾತಕೋತ್ತರ ಡಿಪ್ಲೋಮಾ (1965) ಶಿಕ್ಷಣ ಪಡೆದಿದ್ದರು.
1969 ರಲ್ಲಿ ಶ್ರೀಮತಿ ಭೈರಮ್ಮ ಅವರೊಂದಿಗೆ ಇವರ ವಿವಾಹವಾಗಿತ್ತು. ಅಲ್ಪಕಾಲ ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಹಾಗೂ ಬೆಂಗಳೂರಿನ ಗಾಂಧೀನಗರದ ಆರ್ಯ ವಿದ್ಯಾಶಾಲಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದ ಅವರು, ದೂರದ ಗುಲ್ಬರ್ಗಾದ ಎಂ.ಎಸ್.ಕೆ ಹತ್ತಿಗಿರಣಿಯಲ್ಲಿ ಸಹಾಯಕ ಸಿಬ್ಬಂದಿ ಅಧಿಕಾರಿಯಾಗಿ (1966-67) ಸೇವೆ ಸಲ್ಲಿಸಿದರು.
ಇದೇ ಅವಧಿಯಲ್ಲಿ ನವಕಲ್ಯಾಣ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಚಿತ್ರದುರ್ಗದ ಎಸ್.ಜೆ.ಎಂ ಬೃಹನ್ಮಠ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ (1968-70) ಹಾಗೂ ಬೃಹನ್ಮಠದ ಕನ್ನಡ ತ್ರೈಮಾಸಿಕ ಗುರುಕುಲದ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.ನಂತರ ಅಧ್ಯಾಪಕ ವೃತ್ತಿ ತೊರೆದು ಚಿತ್ರದುರ್ಗದ ಜಯಲಕ್ಷ್ಮಿ ಹತ್ತಿಗಿರಣಿಯಲ್ಲಿ (1971-91) ಸುದೀರ್ಘ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ 1974 ರಲ್ಲಿ ಲೋಕವಾಣಿ ಪತ್ರಿಕೆಗೆ ಹವ್ಯಾಸಿ ವರದಿಗಾರರಾಗಿ ಕೆಲಸ ಆರಂಭಿಸಿದ ಇವರು, ಮುಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಚಿತ್ರದುರ್ಗದ ಖಾಯಂ ವರದಿಗಾರರಾಗಿ (1984 ರಿಂದ 2013) ಸತತವಾಗಿ 29 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ತಮ್ಮ 60ನೇ ವಯಸ್ಸಿನ ನಂತರ ಸಾಹಿತ್ಯಲೋಕಕ್ಕೆ ಪ್ರವೇಶಿಸಿದ ಉಜ್ಜಿನಪ್ಪನವರು ಸಣ್ಣಕಥೆ, ಆತ್ಮಕಥೆ ಸೇರಿದಂತೆ 15 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖ ಕೃತಿಗಳು : ಗೌನಳ್ಳೇರು(ಗ್ರಾಮಭಾರತ ಕಥನ),ಬದುಕೆಂಬ ಮಹಾಪ್ರಬಂಧ(ಆತ್ಮಕಥೆ), ಹಿರಿಯೂರು ತಾಲ್ಲೂಕು ಗೆಜೆಟಿಯರ್(ಕರ್ನಾಟಕ ಸರ್ಕಾರ 2017), ದಾರಿಗೆ ಜತೆಯಲ್ಲಿ (ಕಥಾ ಸಂಕಲನ), ಡಾ. ಮೀರಸಾಬಿಹಳ್ಳಿ ಶಿವಣ್ಣನವರ ಕನ್ನಡ ಎತ್ತಪ್ಪ ಕೃತಿಯನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದರು. ದುರ್ಗಸಿರಿ, ಚಿನ್ಮೂಲಾದ್ರಿ, ಬೆಳಕಿನೆಡೆಗೆ ಮೊದಲಾದ ಸ್ಮರಣ ಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದರು. ರಂಗಸೌರಭ ಕಲಾ ಸಂಘ ಸೇರಿದಂತೆ ಹಲವು ಸಂಸ್ಥೆಗಳ ಚಟುವಟಿಕೆಗಳಿಗೆ ನಿರಂತರ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರು.
ಜಿ.ಎಸ್. ಉಜ್ಜಿನಪ್ಪನವರು ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದೆ, ಗ್ರಾಮೀಣ ಬದುಕಿನ ನಾಡಿಮಿಡಿತವನ್ನು ಅರಿತಿದ್ದ ಅಪರೂಪದ ಸಾಹಿತಿಯಾಗಿದ್ದರು. ಹಳ್ಳಿಯ ಸೊಗಡು, ರೈತಾಪಿ ವರ್ಗದ ಸಂಕಷ್ಟಗಳು ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ತಮ್ಮ ಬರಹಗಳ ಮೂಲಕ ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತಿದ್ದರು. ಅವರ ಸಾಹಿತ್ಯವು ಗ್ರಾಮೀಣ ಭಾರತದ ನೈಜ ಚಿತ್ರಣಕ್ಕೆ ಕನ್ನಡಿ ಹಿಡಿದಂತಿತ್ತು. ಚಿತ್ರದುರ್ಗದಂತಹ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಮತ್ತು ಕೃಷಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಧ್ವನಿಸುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದವರು. ತಳಮಟ್ಟದ ಸುದ್ದಿಗಳನ್ನು ಅತ್ಯಂತ ನಿಖರವಾಗಿ ಮತ್ತು ವಸ್ತುನಿಷ್ಠವಾಗಿ ವರದಿ ಮಾಡುವ ಮೂಲಕ ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು. ಗೌನಳ್ಳಿಯಂತಹ ಸಣ್ಣ ಗ್ರಾಮದಿಂದ ಬಂದು ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಉಜ್ಜಿನಪ್ಪನವರು, ಸದಾ ಸರಳ ಸಜ್ಜನಿಕೆಯ ಮೂರ್ತಿಯಾಗಿದ್ದರು.
ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪತ್ರಕರ್ತರ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶರಣ ಸಾಹಿತ್ಯ ಪರಿಷತ್ತು ಸಮ್ಮೇಳನ ಪ್ರಶಸ್ತಿ ಹಾಗೂ ಡಾ. ಮೀರಸಾಬೀಹಳ್ಳಿ ಶಿವಣ್ಣ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಹಲವು ಗೌರವಾನ್ವಿತ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಉಜ್ಜಿನಪ್ಪ ನಿಧನಕ್ಕೆ ಚಿತ್ರದುರ್ಗದ ಸಾಹಿತ್ಯ ಹಾಗೂ ಪತ್ರಿಕಾ ವಲಯ ತೀವ್ರ ಕಂಬನಿ ಮಿಡಿದಿದೆ.
ನವೀನ್ ಸಂತಾಪ : ಜಿ.ಎಸ್. ಉಜ್ಜಿನಪ್ಪನವರ ನಿಧನವು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಗ್ರಾಮೀಣ ಬದುಕನ್ನು ಅಷ್ಟೊಂದು ಆಳವಾಗಿ ಪ್ರೀತಿಸುತ್ತಿದ್ದ ಮತ್ತೊಬ್ಬ ಹಿರಿಯ ಚೇತನವನ್ನು ಕಾಣುವುದು ವಿರಳ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಸಂತಾಪ ಸೂಚಿಸಿದ್ದಾರೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
