ಗ್ರಾಮ ಸಭೆ ತೀರ್ಮಾನಗಳನ್ನು ಸ್ಥಳದಲ್ಲೇ ದಾಖಲಿಸಿ ಸಹಿ ಪಡೆಯಬೇಕು: ಸಿ.ಎಸ್. ಗಾಯತ್ರಿ.

ಚಿತ್ರದುರ್ಗ ಜೂ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಡಯುವ ತೀರ್ಮಾನಗಳನ್ನು ಅಲ್ಲಿಯೇ ಪುಸ್ತಕದಲ್ಲಿ ಬರೆದು ಅಲ್ಲಿ ಇದ್ದವರ ಸಹಿಯನ್ನು ಪಡೆಯಬೇಕಿದೆ, ಇದರ ಬದಲು ತೀರ್ಮಾನವನ್ನು ಆಮೇಲೆ ಬರೆಯುತ್ತೆನೆ ಮನೆಯಲ್ಲಿ ಬರೆಯುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಸಿ.ಎಸ್.ಗಾಯತ್ರಿ ಸೂಚಿಸಿದ್ದಾರೆ.

ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಕರ್ನಾಟಕ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ಜಿ.ಪಂ.ಸಭಾಂಗಣದಲ್ಲಿ ಶನಿವಾರ ಸಮಾಜಿಕ ಪರಿಶೋಧನಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸುವ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, 15ನೇ ಹಣಕಾಸು ಆಯೋಗದ ಮಾರ್ಗ ಸೂಚಿಗಳು ಬಗ್ಗೆ ವಿಷಯವನ್ನು ಮಂಡನೆ ಮಾಡು ಮಾತನಾಡಿದ ಅವರು, ಸಾಮಾಜಿಕ ಪರಿಶೋಧನೆ ಎನ್ನುವುದು ಒಂದು ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿಗಳು ಜನಸಾಮಾನ್ಯರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ಮೌಲ್ಯಮಾಪನ ಮಾಡಲು ಬಳಸುವ ಅತ್ಯಂತ ಪ್ರಬಲ ಅಸ್ತ್ರವಾಗಿದೆ. ಇದು ಕೇವಲ ಕಾಗದದ ಮೇಲಿನ ಲೆಕ್ಕಾಚಾರವಲ್ಲ; ಬದಲಿಗೆ “ಜನರ ಕೈಯಿಂದ, ಜನರಿಗಾಗಿ, ಜನರ ಸಮ್ಮುಖದಲ್ಲಿ ನಡೆಯುವ ನೈಜ ತಪಾಸಣೆ. “ಯಾವ ದೇಶದಲ್ಲಿ ಪ್ರಜೆಗಳ ಧ್ವನಿಗೆ ಮತ್ತು ಅವರ ಕಲ್ಯಾಣಕ್ಕೆ ಮೊದಲ ಆದ್ಯತೆ ಇರುತ್ತದೆಯೋ, ಅದೇ ನಿಜವಾದ ಪ್ರಜಾಪ್ರಭುತ್ವ. “ಪ್ರಜಾಪ್ರಭುತ್ವದ ಯಶಸ್ಸು ಕೇವಲ ಮತದಾನ ಮಾಡುವುದರಲ್ಲಿಲ್ಲ, ಬದಲಿಗೆ ಆಡಳಿತದಲ್ಲಿ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಅಡಗಿದೆ. ಎಂದರು.

15ನೇ ಹಣಕಾಸು ಯೋಜನೆ ಪೂರ್ಣವಾಗಿದೆ, ಮುಂದಿನ ದಿನದಲ್ಲಿ 16ನೇ ಹಣಕಾಸು ಆಯೋಗ ಪ್ರಾರಂಭವಾಗಬೇಕಿದೆ. ಸರ್ಕಾರ ನೀಡುವ ಅನುದಾನಗಳು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕಿದೆ, ಯಾವುದೇ ಕಾರಣಕ್ಕೂ ಸಹಾ ದುರುಪಯೋಗವಾಗಬಾರದು ಎಂಬುದು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಉದ್ಧೇಶವಾಗಿದೆ, ಗ್ರಾಮ ಸಭೆಗಳು ಸರಿಯಾದ ರೀತಿಯಲ್ಲಿ ನಡೆಯುವುದರ ಮೂಲಕ ಅಲ್ಲಿ ಗ್ರಾಮದಲ್ಲಿ ಬೇಕಾದ ಅಗತ್ಯವಾದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶ ಇದು ಸಾರ್ವಜನಿಕರ ಮುಂದೆ ತೀರ್ಮಾನವಾಗಬೇಕಾದ ವಿಷಯವಾಗಿದೆ, ಎಲ್ಲೂ ನಾಲ್ಕು ಜನ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಸರ್ಕಾರ ನೀಡುವ ಅನುದಾನವನ್ನು ಇದಕ್ಕೆ ನಿರ್ಧಿಷ್ಟವಾಗಿ ಖರ್ಚು ಮಾಡುವಂತೆ ಸೂಚನೆಯನ್ನು ನೀಡಲಾಗಿದೆ ಇದನ್ನು ಹೊರೆತುಪಡಿಸಿ ಬೇರೆ ಕಾಮಗಾರಿಗಳಿಗೆ ಯೋಜನೆಗಳಿಗೆ ಬಳಕೆಯನ್ನು ಮಾಡುವಂತಿಲ್ಲ, ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಹೊಂದಿರಬೇಕಿದೆ ಏಕೆಂದರೆ ಚುನಾಯಿತ ಪ್ರತಿನಿಧಿಗಳು ಕೆಲವೊಮ್ಮೆ ಆಧಿಕಾರಿಗಳನ್ನು ದಾರಿಯನ್ನು ತಪ್ಪಿಸುವ ಕಾರ್ಯವನ್ನು ಮಾಡುತ್ತಾರೆ ಈ ಹಿನ್ನಲೆಯಲ್ಲಿ ಎಚ್ಚರದಿಂದ ಇರಬೇಕಿದೆ ಎಂದ ಅವರು, ಸರ್ಕಾರವೂ ಸಹಾ ತಾನು ಮಾಡಿದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡುವಂತೆ ಸೂಚನೆಯನ್ನು ಸಹಾ ನೀಡುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕಿದೆ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಡಯುವ ತೀರ್ಮಾನಗಳನ್ನು ಅಲ್ಲಿಯೇ ಪುಸ್ತಕದಲ್ಲಿ ಬರೆದು ಅಲ್ಲಿ ಇದ್ದವರ ಸಹಿಯನ್ನು ಪಡೆಯಬೇಕಿದೆ, ಇದರ ಬದಲು ತೀರ್ಮಾನವನ್ನು ಆಮೇಲೆ ಬರೆಯುತ್ತೆನೆ ಮನೆಯಲ್ಲಿ ಬರೆಯುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದು ಸಿ.ಎಸ್.ಗಾಯತ್ರಿ ತಿಳಿಸಿದರು.

ಜಿಲ್ಲಾ ಸಂಯೋಜಕರಾದ ಡಾ,ಜಿ.ಇ.ನಾಗರಾಜ್ ಮಾತನಾಡಿ, ಪುಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಸರ್ಕಾರವು ಸಾರ್ವಜನಿಕರ ಏಳಿಗೆಗಾಗಿ ಜಾರಿಗೆ ತರುವ ಯೋಜನೆಗಳು, ನೀಡುವ ಧನಸಹಾಯ ಮತ್ತು ಕೈಗೊಳ್ಳುವ ಅಭಿವೃದ್ಧಿ ಕೆಲಸಗಳು ಜನರನ್ನು ಸರಿಯಾಗಿ ತಲುಪುತ್ತಿವೆಯೇ ಎಂದು ಪರಿಶೀಲಿಸುವ ಅತ್ಯಂತ ಪ್ರಬಲ ಅಸ್ತ್ರವೇ ಸಾಮಾಜಿಕ ಪರಿಶೋಧನೆ ಕೇವಲ ಕಾಗದದ ಮೇಲಿನ ಲೆಕ್ಕಪತ್ರಗಳನ್ನು ನೋಡಿ ಹಣದ ವೆಚ್ಚವನ್ನು ನಿರ್ಧರಿಸುವುದು ಸಾಂಪ್ರದಾಯಿಕ ತಪಾಸಣೆಯಾದರೆ, ಯೋಜನೆಗಳ ನೈಜ ಫಲಿತಾಂಶವನ್ನು ಮತ್ತು ಗುಣಮಟ್ಟವನ್ನು ಸಮಾಜದ ಕಣ್ಣಿನಿಂದ ನೋಡಿ ತೂಗುವುದೇ ಸಾಮಾಜಿಕ ಪರಿಶೋಧನೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ; ಇದು ಯೋಜನೆಯ ಫಲಾನುಭವಿಗಳೇ ನೇರವಾಗಿ ಭಾಗವಹಿಸಿ, ವ್ಯವಸ್ಥೆಯಲ್ಲಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಪ್ರಶ್ನಿಸುವ ಒಂದು ಜೀವಂತ ಪ್ರಕ್ರಿಯೆಯಾಗಿದೆ ಎಂದರು.

ಸರ್ಕಾರದ ಯೋಜನೆಗಳ ಪ್ರತಿಯೊಂದು ನಯಾಪೈಸೆಯ ಖರ್ಚು ವೆಚ್ಚಗಳನ್ನು ಸಾರ್ವಜನಿಕರ ಮುಂದೆ ಮುಕ್ತವಾಗಿಡುವುದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಸಾರ್ವಜನಿಕರಿಗೆ ಉತ್ತರದಾಯಿಯನ್ನಾಗಿ ಮಾಡುವುದು. ಮಧ್ಯವರ್ತಿಗಳ ಹಾವಳಿ ಮತ್ತು ಹಣದ ದುರುಪಯೋಗಕ್ಕೆ ಬ್ರೇಕ್ ಹಾಕುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಹಕ್ಕು ಅಧಿಕಾರಗಳ ಬಗ್ಗೆ ಧ್ವನಿ ಎತ್ತುವ ಶಕ್ತಿ ನೀಡುವುದು. ಇದರ ಪ್ರಾಮುಖ್ಯತೆ ಸಾಮಾಜಿಕ ಪರಿಶೋಧನೆಯು ಸುಶಾಸನದ ಜೀವಾಳವಾಗಿದೆ. ಜನಸಾಮಾನ್ಯರು ಕೇವಲ ಫಲಾನುಭವಿಗಳಾಗಿ ಉಳಿಯದೆ, ದೇಶದ ಅಭಿವೃದ್ಧಿಯ ಪಾಲುದಾರರಾಗಲು ಇದು ಪ್ರೇರೇಪಿಸುತ್ತದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವಲ್ಲಿ ಸಾಮಾಜಿಕ ಪರಿಶೋಧನೆಯ ಕೊಡುಗೆ ಅನನ್ಯವಾದದ್ದು ಎಂದು ತಿಳಿಸಿದರು.

ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ನರೇಗಾ ಕಾಯ್ದೆ & ಮಾರ್ಗ ಸೂಚಿಗಳು ವಿಷಯ ಮಂಡನೆ,15ನೇ ಮತ್ತು ರಾಜ್ಯ ಹಣಕಾಸು ಆಯೋಗದ ಮಾರ್ಗ ಸೂಚಿಗಳು ವಿಷಯ ಮಂಡನೆ ,ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ ವಿಷಯ ಮಂಡನೆ,ಗ್ರಾಮ ಸಭೆಯ ಅಧ್ಯಕ್ಷತೆ ವಹಿಸುವ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು ಸಾಮಾಜಿಕ ಪರಿಶೋಧನಾ ವೇಳಾಪಟ್ಟಿ ಹಾಗೂ ಪೂರ್ವಸಿದ್ಧತೆ ಕುರಿತು ವಿಷಯ ಹಂಚಿಕೆಯ ಬಗ್ಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಎಮ್.ಜಿ.ನರೇಗಾ ಯೋಜನೆಯ ವಿಷಯ ನಿರ್ವಹಕರಾದ ಶಾಖೆಯ ಶ್ರೀಮತಿ ಕೌಸರ್, ಆಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಶ್ರೀಮತಿ ರೇಖಾ, ಜಿ.ಪಂ. ಸಹಾಯಕ ಯೋಜನಾಧಿಕಾರಿ ಶ್ರೀಮತಿ ಸುಮಾ ಭಾಗವಹಿಸಿದ್ದರು. ಶ್ರೀಮತಿ ಉಷಾದೇವಿ ಸ್ವಾಗತಿಸಿದರೆ, ಕಣಮಪ್ಪ ವಂದಿಸಿದರು. ಬಾಬು ಕಾರ್ಯಕ್ರಮ ನಿರೂಪಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *