ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದೇ ದಿನ ಎರಡು ದೊಡ್ಡ ನಿರಾಸೆಗಳು ಎದುರಾಗಿವೆ. ಭಾರತದ ಮಹಿಳಾ ಹಾಗೂ ಪುರುಷರ ಎರಡೂ ತಂಡಗಳು ಒಂದೇ ದಿನ ತಂತಮ್ಮ ಪಂದ್ಯಗಳಲ್ಲಿ ಸೋಲನುಭವಿಸಿವೆ.
ಐರ್ಲೆಂಡ್ ಎದುರು ಪುರುಷರ ತಂಡಕ್ಕೆ ರೋಚಕ ಸೋಲು
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತೀಯ ಪುರುಷರ ತಂಡವು ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದ ರೋಚಕ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಐರ್ಲೆಂಡ್ ತಂಡವನ್ನು 20 ಓವರ್ಗಳಲ್ಲಿ 154/8 ರನ್ಗಳಿಗೆ ನಿಯಂತ್ರಿಸಿತು. ಐರ್ಲೆಂಡ್ ಪರ ಹ್ಯಾರಿ ಟೆಕ್ಟರ್ 47 ಎಸೆತಗಳಲ್ಲಿ 53 ರನ್ ಹಾಗೂ ಬೆಂಜಮಿನ್ ಕ್ಯಾಲಿಟ್ಜ್ 23 ಎಸೆತಗಳಲ್ಲಿ 37 ರನ್ ಗಳಿಸಿದರು. ಭಾರತದ ಪರ ಬೌಲಿಂಗ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಪ್ರಿನ್ಸ್ ಯಾದವ್ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಕಿತ್ತರೆ, ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ 2 ಹಾಗೂ ಹರ್ಷಿತ್ ರಾಣಾ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತ ತಂಡದ ಬ್ಯಾಟಿಂಗ್ ಮತ್ತೊಮ್ಮೆ ವಿಫಲವಾಗಿದ್ದು, 20 ಓವರ್ಗಳಲ್ಲಿ 153/9 ರನ್ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಕೊನೆಯ ಓವರ್ನಲ್ಲಿ ಗೆಲುವಿಗೆ 22 ರನ್ಗಳ ಅಗತ್ಯವಿದ್ದಾಗ ಹರ್ಷಿತ್ ರಾಣಾ (10 ಎಸೆತಗಳಲ್ಲಿ 21 ರನ್) ಐದನೇ ಎಸೆತದಲ್ಲಿ ಔಟಾದರು. ಕೊನೆಯ ಎಸೆತದಲ್ಲಿ 8 ರನ್ ಬೇಕಿದ್ದಾಗ ಪ್ರಿನ್ಸ್ ಯಾದವ್ ತಾವು ಎದುರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಎಸೆತದಲ್ಲೇ ಸಿಕ್ಸರ್ ಬಾರಿಸಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.
ಈ ಗೆಲುವಿನೊಂದಿಗೆ ಐರ್ಲೆಂಡ್ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ವಿಶೇಷವೆಂದರೆ ಈ ಸರಣಿಗೂ ಮುನ್ನ ಐರ್ಲೆಂಡ್ ಆತಿಥೇಯರಾಗಿ ಭಾರತದ ವಿರುದ್ಧ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದಿರಲಿಲ್ಲ. 2023ರಲ್ಲಿ ವೆಸ್ಟ್ ಇಂಡೀಸ್ ಎದುರು 3-2 ಅಂತರದಲ್ಲಿ ಸರಣಿ ಸೋತ ಬಳಿಕ, ಮೂರು ವರ್ಷಗಳ ನಂತರ ಭಾರತ ಟಿ20ಐ ಸರಣಿಯನ್ನು ಕಳೆದುಕೊಂಡಿದೆ.
ವಿಶ್ವಕಪ್ನಿಂದ ಹೊರಬಿದ್ದ ಭಾರತೀಯ ಮಹಿಳಾ ತಂಡ
ಲಾರ್ಡ್ಸ್ ಮೈದಾನದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ, ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಸೋಲು ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಎಲಿಸ್ ಪೆರ್ರಿ (38 ಎಸೆತಗಳಲ್ಲಿ 56 ರನ್) ಮತ್ತು ಆಶ್ಲೀ ಗಾರ್ಡ್ನರ್ (29 ಎಸೆತಗಳಲ್ಲಿ 53 ರನ್) ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ 18 ಓವರ್ಗಳಲ್ಲಿ 171 ರನ್ ಗಳಿಸಿ ಜಯಶಾಲಿಯಾಯಿತು.
ಈ ಸೋಲಿನೊಂದಿಗೆ ಭಾರತದ ಮಹಿಳಾ ತಂಡದ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಲೀಗ್ ಹಂತದ ‘ಗ್ರೂಪ್ ಎ’ ನ 5 ಪಂದ್ಯಗಳಲ್ಲಿ 3 ಗೆಲುವು ಮತ್ತು 2 ಸೋಲು ಕಂಡಿರುವ ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಅನ್ನು ಮತ್ತು ದಕ್ಷಿಣ ಆಫ್ರಿಕಾ ಆತಿಥೇಯ ಇಂಗ್ಲೆಂಡ್ ಅನ್ನು ಎದುರಿಸಲಿವೆ.
ನಾಯಕಿ ಹರ್ಮನ್ಪ್ರೀತ್ ಕೌರ್ ಹೊಸ ದಾಖಲೆ
ಈ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ 27 ಎಸೆತಗಳಲ್ಲಿ 56 ರನ್ ಸಿಡಿಸಿ ಅಮೋಘ ಪ್ರದರ್ಶನ ನೀಡಿದರು. ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಕಾಂಗರೂ ನಾಯಕಿ ಸೋಫಿ ಮೆಲೋನಿ ಎದುರು ಸತತ 3 ಸಿಕ್ಸರ್ ಬಾರಿಸಿದ ಅವರು, ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ತಮ್ಮದೇ ದಾಖಲೆಯನ್ನು (2024ರಲ್ಲಿ ಶ್ರೀಲಂಕಾ ವಿರುದ್ಧ 27 ಎಸೆತ) ಮುರಿದರು.