ಆರ್‌ಎಸ್‌ಎಸ್ ಚಟುವಟಿಕೆಗಳ ಕುರಿತು ಎಸ್‌ಐಟಿ ತನಿಖೆಗೆ ಆಗ್ರಹ: ಗೃಹ ಸಚಿವರಿಗೆ ಮಾಜಿ ವಕೀಲರ ಸಂಘ ಅಧ್ಯಕ್ಷ ಸಿ. ಶಿವುಯಾದವ್ ಮನವಿ

ಚಿತ್ರದುರ್ಗ ಜು. 04

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಆರ್‍ಎಸ್‍ಎಸ್ ಸಂಘಟನೆಯ ಚಟುವಟಿಕೆಗಳ ಕುರಿತು ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಶಿವುಯಾದವ್ ರಾಜ್ಯದ ಗ್ರಹ ಸಚಿವರನ್ನು ಒತ್ತಾಯಿಸಿದ್ದಾರೆ.

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‍ಎಸ್‍ಎಸ್ ಸಂಘಟನೆಯ ಹಣಕಾಸಿನ ಮೂಲಗಳು, ದೇಣಿಗೆ ಸಂಗ್ರಹ, ಸಂಘಟನೆಯ ಕಾನೂನುಬದ್ಧ ನೊಂದಣಿ, ವಿವಿಧ ಚಟುವಟಿಕೆಗಳು ಹಾಗೂ ಜಾರಿಯಲ್ಲಿರುವ ಕಾನೂನು ಪಾಲನೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಮತ್ತು ಆರೋಪಗಳು ಆರ್‍ಎಸ್‍ಎಸ್ ವಿರುದ್ಧ ಕೇಳಿ ಬರುತ್ತಿವೆ. ಆದ್ದರಿಂದ ಈ ವಿಷಯಗಳ ಸತ್ಯ ಸತ್ಯತೆಯನ್ನು ಪತ್ತೆ ಹಚ್ಚಲು ಸುಪ್ರಿಂ ಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಪಕ್ಷಪಾತವಿಲ್ಲದೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ತನಿಖೆಯಲ್ಲಿ ವಿಶೇಷವಾಗಿ ಈ ಹಿಂದೆ 3 ಬಾರಿ ನಿಷೇಧಕ್ಕೆ ಒಳಪಟ್ಟ ಸಂದರ್ಭದಲ್ಲಿ ಆರ್‍ಎಸ್‍ಎಸ್ ಸಂಘಟನೆ ಭಾರತ ಸರ್ಕಾರಕ್ಕೆ ಬರೆದುಕೊಟ್ಟ ಮುಚ್ಚಳಿಕೆಯ ಅಂಶಗಳ ಉಲ್ಲಂಘನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಹಿಂದೆ ವಿಧಿಸಲಾದ ನಿಷೇಧಗಳ ಸಂದರ್ಭದಲ್ಲಿ ನೀಡಲಾದ ಭರವಸೆಗಳು ಅಥವಾ ಷರತ್ತುಗಳು ಇದ್ದರೆ ಅವುಗಳ ಪಾಲನೆಯ ಕುರಿತು ಪರಿಶೀಲನೆ ನಡೆಸಬೇಕು.ಆರ್‍ಎಸ್‍ಎಸ್ ಸಂಘಟನೆಯ ಕಾನೂನು ಬದ್ಧ ಸ್ಥಿತಿ ಹಾಗೂ ಅನ್ವಯಿಸುವ ಕಾನೂನು ಪಾಲನೆ, ದೇಣಿಗೆ ಮತ್ತು ಇತರೆ ಹಣಕಾಸಿನ ಮೂಲಗಳು ಹಾಗೂ ಅವುಗಳ ಲೆಕ್ಕಪತ್ರಗಳ ಪರಿಶೀಲನೆ,ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಆರ್‍ಎಸ್‍ಎಸ್ ನ ಚಟುವಟಿಕೆಗಳು ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿವೆಯೇ? ಎಂಬುದು ತನಿಖೆ ವಿದೇಶದಿಂದ ಹರಿದು ಬಂದ ಹಣದ ಬಗ್ಗೆ ವಿದೇಶಿ ಮೂಲಗಳಿಂದ ಯಾವುದೇ ನಿಧಿ ಅಥವಾ ದೇಣಿಗೆ ಸ್ವೀಕರಿಸಲಾಗಿದೆಯೇ ಎಂಬುದನ್ನು ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಪರಿಶೀಲಿಸಬೇಕು. ದೇಶದಲ್ಲಿ ಧಾರ್ಮಿಕ ಭಾವನೆಗಳ ಧಕ್ಕೆಯಿಂದ ನಡೆದ ಕೋಮುಗಲಭೆಗಳು, ಧಾರ್ಮಿಕ ಉದ್ವಿಜ್ಞತೆ ಅಥವಾ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಆರ್‍ಎಸ್‍ಎಸ್ ಪಾತ್ರವಿದೆಯೇ ಎಂಬುದನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರ್‍ಎಸ್‍ಎಸ್ ಸಂಘಟನೆಯ ಸಂಘದ ಪ್ರಮುಖರು ಹೊಂದಿರುವ ಬೇನಾಮಿ ಆಸ್ತಿಗಳು. ಸಂಬಂಧಿತ ವ್ಯಕ್ತಿಗಳ ವಿರುದ್ಧ ಬೇನಾಮಿ ಆಸ್ತಿಗಳ ಕುರಿತು ವಿಶ್ವಾಸಾರ್ಹ ಮಾಹಿತಿ ಅಥವಾ ದೂರಗಳಿದ್ದರೆ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ತನಿಖೆಯಾಗಬೇಕು, ಆರ್‍ಎಸ್‍ಎಸ್ ಸಂಘಟನೆಯು ದೇಶಾದ್ಯಂತ ನಡೆಸುವ ಚಟುವಟಿಕೆಗಳಲ್ಲಿ ಕಾನೂನು ಉಲ್ಲಂಘನೆ ಆಗಿದ್ದರೆ ಅಥವಾ ಕಂಡು ಬಂದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು. ಸಾಮಾನ್ಯ ವ್ಯಕ್ತಿಯಾದ ಮೋಹನ್ ಭಾಗವತ್ ರವರಿಗೆ ಭಾರತ ಸರ್ಕಾರದ ಜೆಡ್‍ಪ್ಲಸ್ ಸೆಕ್ಯೂರಿಟಿ ಯಾವ ಆಧಾರದ ಮೇಲೆ ನೀಡಿರುತ್ತಾರೆ ಎಂಬುದರ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಬೇಕು.ಸರ್ಕಾರವು ಪಾರದರ್ಶಕತೆ ಕಾನೂನಿನ ಆಳ್ವಿಕೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯಕ್ರಮ ಕೈಗೊಳ್ಳುವಂತೆ ಮತ್ತು ಇದರ ಸಮಗ್ರ ತನಿಖೆಗಾಗಿ ಸವೋಚ್ಛ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅಥವಾ ರಾಜ್ಯದ ಹಿರಿಯ, ದಕ್ಷ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಅಧ್ಯಕ್ಷರಾದ ಸಿ.ಶಿವುಯಾದವ್ ರಾಜ್ಯದ ಗ್ರಹ ಸಚಿವರನ್ನು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *